ಕೊಡಗು (ಮಾ. 19) : ಮಳೆಗಾಲದಲ್ಲಿ (Rainy Season ಮೈದುಂಬಿ ಹರಿದು ಪ್ರವಾಹವನ್ನೇ ಸೃಷ್ಟಿಸುವ ಕೊಡಗಿನ ಕಾವೇರಿ (Cauvery) ಅರ್ಧ ರಾಜ್ಯಕ್ಕೆ ಜೀವ ಜಲ ನೀಡುತ್ತಾಳೆ. ಆದರೆ ಈ ಬಾರಿ ಅದೇಕೋ ತವರು ಜಿಲ್ಲೆಯಲ್ಲೇ ಬೇಸಿಗೆ (summer) ಆರಂಭದಲ್ಲೇ ಕಾವೇರಿ ನದಿ ಬಹುತೇಕ ಬತ್ತಿರುವುದು ಕಾವೇರಿಯನ್ನೇ ನಂಬಿ ಬದುಕುತ್ತಿದ್ದವರು ಕಂಗಾಲಾಗವಂತೆ ಮಾಡಿದೆ. ಸಾಮಾನ್ಯವಾಗಿ ಜೂನ್ (june) ಕೊನೆ ವಾರದಲ್ಲೋ ಜುಲೈ ಮೊದಲ ವಾರದಲ್ಲೋ ಆರಂಭವಾಗುವ ಮುಂಗಾರು ಮಳೆ ಕೊಡಗಿನಲ್ಲಿ ಬಹುತೇಕ ಅಕ್ಟೋಬರ್ ತಿಂಗಳವರೆಗೂ ಸುರಿಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ಕಾವೇರಿ ನದಿಯಲ್ಲಿ ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಿಸಿದೆ.
ನೀರಿನ ಪ್ರಮಾಣ ಕ್ಷೀಣ
ನದಿಯಲ್ಲಿರುವ ಕಲ್ಲು ಪೊಟರೆಗಳು, ಅಥವಾ ಯಾವುದೋ ಒಂದು ಮೂಲೆಯಲ್ಲಿ ಕಾವೇರಿ ಹರಿಯುವ ಸ್ಥಿತಿ ಬಂದೊದಗಿದೆ. ಇದೇ ರೀತಿಯಾದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಕಾವೇರಿ ನದಿ ಬಹುತೇಕ ಬತ್ತಿ ಹೋಗಿ ಬಿಡುತ್ತಾಳಾ ಎನ್ನುವ ಆತಂಕ ಎದುರಾಗಿದೆ. ಅದರಲ್ಲೂ ಕುಶಾಲನಗರದಿಂದ ಕಣಿವೆ ಭಾಗದವರೆಗೆ ಕಾವೇರಿ ನದಿ ಸಂಪೂರ್ಣ ಖಾಲಿ ಎನ್ನುವ ಸ್ಥಿತಿ ತಲುಪಿದೆ. ಒಂದು ವೇಳೆ ನೀರಿನ ಪ್ರಮಾಣ ಹೀಗೆ ಕ್ಷೀಣಸಿದರೆ ಕುಶಾಲನಗರ, ಮುಳ್ಳುಸೋಗೆ ಕಣಿವೆ ಹೆಬ್ಬಾಲೆ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಕುಡಿಯುವ ನೀರಿಗೆ ಆಹಾಕಾರ ಎದುರಾಗಲಿದೆ.
ಜಲಮೂಲ ಬತ್ತಲು ಇದು ಕೂಡ ಕಾರಣ
ಈ ವರ್ಷ ನಿರಂತರವಾಗಿ ಮಳೆ ಸುರಿದರೂ ಕಾವೇರಿ ನದಿ ಬೇಸಿಗೆ ಆರಂಭದಲ್ಲಿಯೇ ಬತ್ತಿಹೋಗುವುದುಕ್ಕೆ ಪ್ರಮುಖವಾಗಿ ಜಲಮೂಲಗಳು ಮುಚ್ಚಿಹೋಗಿವೆ ಎನ್ನುವುದು ಮುಖ್ಯ ಕಾರಣ. ಕಳೆದ ಕೆಲವು ದಿನಗಳಿಂದ ಭಾಗಮಂಡಲದಿಂದ ಕುಶಾಲನಗರ ತನಕ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಅಕ್ರಮವಾಗಿ ಪಂಪ್, ಪೈಪ್ ಗಳ ಅಳವಡಿಸಿ ಅಪಾರ ಪ್ರಮಾಣದ ನೀರನ್ನು ಬಳಕೆ ಮಾಡುತ್ತಿರುವುದು ಕೂಡ ನದಿಯ ಹರಿಯುವಿಕೆ ಕ್ಷೀಣಿಸುವುದಕ್ಕೆ ಮತ್ತೊಂದು ಕಾರಣ. ನದಿ ತಟದಲ್ಲಿರುವ ಕೃಷಿಕರು, ವಾಣಿಜ್ಯ ಬೆಳೆ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೂ ನೀರು ಪಂಪ್ ಮಾಡುತ್ತಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ ಎನ್ನುವುದು ಕಾವೇರಿ ಸಂರಕ್ಷಣಾ ವೇದಿಕೆ ಸಂಚಾಲಕ ಚಂದ್ರಮೋಹನ್ ಅವರ ಅಭಿಪ್ರಾಯ.
ಇದನ್ನು ಓದಿ: Better.com ಅನುಕರಿಸಿದ ಮತ್ತೊಂದು ಕಂಪನಿ; Zoom Meetingನಲ್ಲಿ 3 ನಿಮಿಷದಲ್ಲೇ 800 ಸಿಬ್ಬಂದಿ ವಜಾ
ಅನವಶ್ಯಕ ನೀರು ಪೋಲಿನ ಬಗ್ಗೆ ನಿರ್ಲಕ್ಷ್ಯ
ಇನ್ನೂ ಕುಶಾಲನಗರ ಮತ್ತು ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನನಿತ್ಯ 35 ಲಕ್ಷ ಲೀಟರ್ ಕುಡಿಯುವ ನೀರಿನ ಅಗತ್ಯವಿದೆ. ಆದರೆ ಕಾವೇರಿ ನದಿಯಲ್ಲಿ ನೀರಿನ ಕೊರತೆ ಎದುರಾಗಿದ್ದು ಜಲಮಂಡಳಿ ಕೇವಲ 28 ಲಕ್ಷ ಲೀಟರ್ ನೀರನ್ನು ಒದಗಿಸುತ್ತಿದೆ. ಪ್ರತಿಯೊಬ್ಬ ನಾಗರಿಕನಿಗೆ ದಿನ ನಿತ್ಯ 135 ಲೀಟರ್ ನೀರು ಅವಶ್ಯಕತೆಯಿದ್ದು ಇದನ್ನು ಪೂರೈಸಲು ಆಗುತ್ತಿಲ್ಲ. ಪಟ್ಟಣ ಪಂಚಾಯಿತಿಯಿಂದ ನೀರು ಸರಬರಾಜು ಮಾಡುವಾಗಲೂ ಹಲವು ಕಾರಣಗಳಿಂದ ಸಾಕಷ್ಟು ನೀರು ಪೋಲಾಗುತ್ತಿದ್ದು ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ ಎನ್ನೋದು ಪ್ರಮುಖರ ಒತ್ತಾಯ.
ಇದನ್ನು ಓದಿ: ಶಾಲಾ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ಪಾಠ? ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ ಅಪ್ಪು ಜೀವನಗಾಥೆ
ಬೇಸಿಗೆ ಮುನ್ನವೇ ಆರಂಭವಾಗಲಿದೆ ನೀರಿನ ಸಮಸ್ಯೆ
ಕಳೆದ ನಾಲ್ಕು ವರ್ಷಗಳಿಂದ ಪ್ರವಾಹ ಭೂಕುಸಿತದಿಂದ ಕಾವೇರಿ ಕೊಳ್ಳಪ್ರದೇಶದಲ್ಲಿ ಭಾರೀ ಪ್ರಮಾಣದ ಹೂಳು ತುಂಬಿರುವುದು ಕೂಡ ಕಾವೇರಿ ನದಿ ಹರಿಯುವಿಕೆಯಲ್ಲಿ ಕ್ಷೀಣ ಗೊಳ್ಳುವುದಕ್ಕೆ ಮೂರನೆಯ ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯರಾದ ಅಣ್ಣಯ್ಯ. ಒಟ್ಟಿನಲ್ಲಿ ಅರ್ಧ ನಾಡಿನ ದಾಹ ನೀಗಿಸುತ್ತಿದ್ದ ಕಾವೇರಿ ಬೇಸಿಗೆ ಮುನ್ನವೇ ಬತ್ತಿ ಹೋಗುತ್ತಿರುವುದು ತವರಿನ ಮಕ್ಕಳಿಗೆ ಅಷ್ಟೇ ಅಲ್ಲ ಇಲ್ಲಿನ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಬಂದೊದಗುವ ಆತಂಕವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ