ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ

ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದ್ದ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಕರ ರೆಡ್ಡಿ ಹಾಗೂ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ. ನಾಗೇಂದ್ರ ಏನು ಮಾಡುತ್ತಿದ್ದಾರೆ? ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನೆಗೆ ಹೊತ್ತೊಯ್ಯುತ್ತಿರುವ ಶಾಲಾ ಮಕ್ಕಳು.

ಮನೆಗೆ ಹೊತ್ತೊಯ್ಯುತ್ತಿರುವ ಶಾಲಾ ಮಕ್ಕಳು.

  • Share this:
ಬಳ್ಳಾರಿ; ರಾಜ್ಯದಲ್ಲೇ ಅತಿದೊಡ್ಡ ಅಣೆಕಟ್ಟೆಗಳಲ್ಲೊಂದಾದ ತುಂಗಭದ್ರಾ ಅಣಕಟ್ಟೆ ಜಿಲ್ಲೆಯಲ್ಲಿಯೇ ಇದೆಯಾದರೂ ಇಲ್ಲಿಯ ಜನರ ನೀರಿನ ಬವಣೆ ಮಾತ್ರ ನೀಗಿಲ್ಲ. ಇಷ್ಟಕ್ಕೂ ಪ್ರವಾಹದಿಂದಾಗಿ ತುಂಗಭದ್ರ ಜಲಾಶಯ ಈ ಬಾರಿ ತುಂಬಿ ಹರಿದಿತ್ತು. ಆದರೆ, ಅಣೆಕಟ್ಟೆ ತುಂಬಿ ಇನ್ನೂ ಎರಡು ತಿಂಗಳು ತುಂಬಿಲ್ಲ ಅಷ್ಟರಲ್ಲೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಆರಂಭವಾಗುವ ನೀರಿನ ಸಮಸ್ಯೆ ಈ ವರ್ಷ ಚಳಿಗಾಲಕ್ಕೇ ಆರಂಭವಾಗಿದೆ. ಅಂದಹಾಗೆ ಬಳ್ಳಾರಿ ನಗರದಲ್ಲಿ ಎಷ್ಟು ದಿನಕ್ಕೊಮ್ಮೆ ಕುಡಿಯುವ ನೀರು ಸಿಗುತ್ತಿದೆ ಗೊತ್ತಾ?

ನಿಗಿ ನಿಗಿ ಬೇಸಿಗೆ ಬಂತೆದಂತೆ ಸಾಕು ಬಳ್ಳಾರಿಯಲ್ಲಿ ಕುಡಿಯುವ ನೀರಿಗೆ ಚಿನ್ನದ ಬೆಲೆ. ಆದರೆ, ಈ ವರ್ಷ ಇನ್ನೂ ಬೇಸಿಗೆಯೇ ಶುರುವಾಗಿಲ್ಲ. ಆಗಲೇ ತುಂಗಭದ್ರ ಜಲಾಶಯವನ್ನು ಹೊಂದಿಕೊಂಡಂತಿರುವ ಬಳ್ಳಾರಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೂರುತ್ತಿದೆ. ಜಿಲ್ಲಾ ಕೇಂದ್ರ ಬಳ್ಳಾರಿ ನಗರದಲ್ಲಿಯೇ ನೀರಿಗೆ ಜನರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ದದಷ್ಟು ಪ್ರದೇಶಕ್ಕೆ ಬರೋಬ್ಬರಿ ಎರಡು ವಾರಕ್ಕೊಮ್ಮೆ ನೀರು ಸಿಗುತ್ತಿದೆ. ಒಂದು ಸಾರಿ ನೀರು ಬಿಟ್ಟರೆ ಮತ್ತೆ 12-15 ದಿನ ಕಾಯಲೇಬೇಕು. ಇನ್ನುಳಿದ ಬಳ್ಳಾರಿ ನಗರದ ಕತೆ ಇದಕ್ಕಿಂತ ಭಿನ್ನವೇನಲ್ಲ. ಪ್ರತಿವರುಷ ಬೇಸಿಗೆಯಲ್ಲಿ ನೀರಿನ ಹಾಹಾಕಾರವಿರುತ್ತಿತ್ತು. ಆದರೆ ಈ ಬಾರಿ ಜನವರಿಗೆ ನೀರಿನ ತತ್ವಾರ ಶುರುವಾಗಿದೆ. ಇನ್ನೂ ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ನೀರು ಯಾವಾಗ ಬಿಡುತ್ತೇ? ಎಂದು ಜನರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದ್ದ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಕರ ರೆಡ್ಡಿ ಹಾಗೂ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ. ನಾಗೇಂದ್ರ ಏನು ಮಾಡುತ್ತಿದ್ದಾರೆ? ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳ್ಳಾರಿಯ ಅಲಿಪುರ ಹಾಗೂ ಸಂಗನಕಲ್ ಗ್ರಾಮದ ಹೊರವಲಯದಲ್ಲಿ ಟಿ ಬಿ ಡ್ಯಾಂ ಕಾಲುವೆ ಮೂಲಕ ನೀರಿನ್ನು ಸಂಗ್ರಹಿಸಿ ಸರಬರಾಜು ಮಾಡಲಾಗುತ್ತಿದೆ.

ಕೌಲ್ ಬಜಾರ್ ವ್ಯಾಪ್ತಿಯ ಪ್ರದೇಶಕ್ಕೆ ಈಗಲೂ ಟ್ಯಾಂಕ್ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ. ಸದ್ಯ ಕಾಲುವೆ ಮೂಲಕ ಬರುವ ನೀರನ್ನು ಕೆರೆಗಳಿಗೆ ಸಂಗ್ರಹಿಸಬೇಕು. ಇಲ್ಲವಾದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇನ್ನಷ್ಟು ತಲೆದೂರಲಿದೆ. ಆದರೆ ಸದ್ಯ ನೀರನ್ನು ಸರಿಯಾಗಿ ಲಿಫ್ಟ್ ಮಾಡದೇ ಇರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.

ಕುಡಿಯುವ ನೀರು ಮನುಷ್ಯನ ಅತ್ಯಂತ ಅವಶ್ಯಕ ಮತ್ತು ಮೂಲಭೂತ ಸೌಲಭ್ಯ. ಸರಿಯಾಗಿ ಮಳೆ ಇಲ್ಲದ ಅಥವಾ ಜಲಾಶಯಗಳಿಲ್ಲದ ಸ್ಥಳದಲ್ಲಿ ಜನ ಕುಡಿಯುವ ನೀರಿಗೆ ಹಲುಬುತ್ತಿದ್ದಾರೆ ಎಂದರೆ ಒಂದರ್ಥದಲ್ಲಿ ಸಹಿಸಿಕೊಳ್ಳಬಹುದೇನೋ? ಆದರೆ, ಕೂಗಳತೆಯ ದೂರದಲ್ಲೇ ಜಲಾಶಯ ಇದ್ದೂ ಜನ ಸಾಮಾನ್ಯರಿಗೆ ಕುಡಿಯಲು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಜನ ಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದರೆ ಇದನ್ನು ಏನೆನ್ನುವುದು?

ಇದನ್ನೂ ಓದಿ : ಬಳ್ಳಾರಿಯ ವಿಮ್ಸ್ ನಲ್ಲಿ ಅಮಾನವೀಯ ಘಟನೆ; ವೀಲ್ ಚೇರ್ ನೀಡದ್ದಕ್ಕೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ
First published: