ಬಡತನವನ್ನೇ ಹಾಸಿ ಹೊದ್ದ ಬೇಡಗಂಪಣರು; ಅರಣ್ಯ ರೋಧನವಾದ ಮೀಸಲಾತಿಯ ಕೂಗು

ಬೇಡಗಂಪಣರು ಸಮುದಾಯದ ಜನ

ಬೇಡಗಂಪಣರು ಸಮುದಾಯದ ಜನ

ಬೇಡಗಂಪಣರು ಇರುವ ಈ ದಟ್ಟಾರಣ್ಯದ ಬಹುತೇಕ  ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲ. ಕಲ್ಲುಮುಳ್ಳುಗಳಿಂದ ಕೂಡಿದ  ಕಾಲು ದಾರಿಯೇ ಇವರ ಪಾಲಿಗೆ  ಹೆದ್ದಾರಿಯಾಗಿದೆ. ಕುಡಿಯುವ ನೀರಿಲ್ಲ, ವಿದ್ಯುತ್ ಇಲ್ಲ, ಆರೋಗ್ಯ ಸೌಲಭ್ಯ ಇಲ್ಲ, ಸರಿಯಾದ ಶಿಕ್ಷಣ ಇಲ್ಲ, ಹೀಗೆ ಇಲ್ಲಗಳ ನಡುವೆ ಬಡತನವನ್ನೇ ಹಾಸಿ ಹೊದ್ದು ಮಲಗಿರುವ ಬೇಡಗಂಪಣರ ಬದುಕು ಹೀನಾಯವಾಗಿದೆ

ಮುಂದೆ ಓದಿ ...
  • Share this:

ಚಾಮರಾಜನಗರ (ಅಕ್ಟೋಬರ್ 12):  “ಬೇಡಗಂಪಣ” ಇದು ಮಲೆಮಹದೇಶ್ವರ ಬೆಟ್ಟದ ದಟ್ಟಾರಣ್ಯದಲ್ಲಿರುವ ಅತಿ ಹಿಂದುಳಿದ ಸಮುದಾಯ.  ಕನಿಷ್ಟ ಮೂಲಭೂತ ಸೌಕರ್ಯ ಇಲ್ಲದೆ ಬದುಕು ಸಾಗಿಸುತ್ತಿರುವ ಈ ಸಮುದಾಯ ಮೂಲತಃ ಬುಡಕಟ್ಟು ಆದಿವಾಸಿಗಳಾಗಿದ್ದರೂ ಬದಲಾದ ಸನ್ನಿವೇಶದಲ್ಲಿ  ವೀರಶೈವ ಲಿಂಗಾಯ್ತ ಎಂದು ಗುರುತಿಸಲಾಗುತ್ತಿರುವುದರಿಂದ ಸರ್ಕಾರದ ಯಾವುದೆ ಸೌಲಭ್ಯಗಳು ದೊರಕದೆ ಹೀನಾಯವಾಗಿ ಬದುಕು ಸಾಗಿಸುತ್ತಿದ್ದಾರೆ. ಚಾಮರಾಜನಗರ ಸುತ್ತಮುತ್ತಲ ಪ್ರದೇಶವನ್ನು ಹಿಂದೆ ಕತ್ತಲೆ ರಾಜ್ಯ ಎಂದು ಕರೆಯಲಾಗುತ್ತಿತ್ತು ಎಂಬ  ಐತಿಹ್ಯವಿದೆ. ಹಿಂದುಳಿದವರು, ದಲಿತರು, ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಭಿವೃದ್ಧಿ ಮರೀಚಿಕೆಯಾಗಿದ್ದರಿಂದಲೋ ಏನೋ ಇದಕ್ಕೆ ಕತ್ತಲೆ ರಾಜ್ಯ ಎಂಬ ಹೆಸರಿತ್ತು. ಬೇಟೆಯಾಡಲೆಂದೆ ತಮಿಳುನಾಡು ಪ್ರದೇಶದಿಂದ  ಮಲೆಮಹದೇಶರ ಬೆಟ್ಟದ ಅರಣ್ಯಕ್ಕೆ ಬರುತ್ತಿದ್ದ ಆದಿವಾಸಿಗಳು   ಇಲ್ಲಿಯೇ ಬಿಡಾರ ಹೂಡುತ್ತಿದ್ದರೆಂದೂ, ಹೀಗೆ ಬಿಡಾರ ಹೂಡಿದವರು ಅರಣ್ಯ ಪ್ರದೇಶದಲ್ಲಿಯೇ ಶಾಶ್ವತವಾಗಿ ನೆಲೆಯೂರಿದರೆಂದೂ ಐತಿಹ್ಯವಿದೆ.


16 ನೇ ಶತಮಾನದಲ್ಲಿ  ಶರಣಧರ್ಮ  ಪ್ರಚಾರಕ್ಕೆಂದು ಉತ್ತರ ಭಾಗದಿಂದ ಇಲ್ಲಿಗೆ  ಬಂದ ಮಹದೇಶ್ವರರು ದಟ್ಟಾರಣ್ಯದಲ್ಲಿ  ಬೇಟೆಯನ್ನೆ ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡಿದ್ದ ಈ ಆದಿವಾಸಿ ಬೇಡಗಂಪಣ ಜನಾಂಗದ ಮನಃಪರಿವರ್ತಿಸಿ ಮಾಂಸಾಹಾರ ತ್ಯಜಿಸುವಂತೆ ಮಾಡಿ ಪ್ರಾಣಿಪಕ್ಷಿಗಳು ಹಾಗೂ  ಪರಿಸರದ ಬಗ್ಗೆ ಅರಿವು ಮೂಡಿಸಿ ಅವರಿಗೆ  ಲಿಂಗಧಾರಣೆ ಮಾಡಿದರು ಎಂಬ ಇತಿಹಾಸವಿದೆ.


ಅಂದಿನಿಂದ ಬೇಟೆಯಾಡುವುದನ್ನು ಬಿಟ್ಟ ಇವರು ಮಳೆಯಾಶ್ರದಲ್ಲಿ ವ್ಯವಸಾಯವನ್ನೇ ತಮ್ಮ ಮೂಲ ಕಸುಬನ್ನಾಗಿ ಮಾಡಿಕೊಂಡು ಬದುಕುತ್ತಿದ್ದಾರೆ . ಲಿಂಗಧಾರಣೆ ಮಾಡಿದ  ಮಹದೇಶ್ವರ ಇವರ ಆರಾಧ್ಯ ದೈವ. ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದ 18 ಗ್ರಾಮಗಳಲ್ಲಿ ಸುಮಾರು 20 ಸಾವಿರಕ್ಕು ಹೆಚ್ಚು ಬೇಡಗಂಪಣರಿದ್ದು ಕನಿಷ್ಟ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುತ್ತಿದ್ದಾರೆ. ಕೇವಲ ಲಿಂಗಧಾರಣೆ ಮಾಡಿದ ಮಾತ್ರಕ್ಕೆ ಇವರನ್ನು ವೀರಶೈವಲಿಂಗಾಯ್ತರೆಂದು ಗುರುತಿಸುತ್ತಿರುವುದರಿಂದ ಇವರಿಗೆ ಸರ್ಕಾರದ ಯಾವುದೆ ವಿಶೇಷ ಸೌಲಭ್ಯಗಳು ದೊರೆಯದಂತಾಗಿದೆ.


ಸತತ ಮಳೆಯಿಂದ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿ; ರೈತರ ಕಣ್ಣಲ್ಲಿ ‌ನೀರು


ಬೇಡಗಂಪಣರು ಇರುವ ಈ ದಟ್ಟಾರಣ್ಯದ ಬಹುತೇಕ  ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲ. ಕಲ್ಲುಮುಳ್ಳುಗಳಿಂದ ಕೂಡಿದ  ಕಾಲು ದಾರಿಯೇ ಇವರ ಪಾಲಿಗೆ  ಹೆದ್ದಾರಿಯಾಗಿದೆ. ಕುಡಿಯುವ ನೀರಿಲ್ಲ, ವಿದ್ಯುತ್ ಇಲ್ಲ, ಆರೋಗ್ಯ ಸೌಲಭ್ಯ ಇಲ್ಲ, ಸರಿಯಾದ ಶಿಕ್ಷಣ ಇಲ್ಲ, ಹೀಗೆ ಇಲ್ಲಗಳ ನಡುವೆ ಬಡತನವನ್ನೇ ಹಾಸಿ ಹೊದ್ದು ಮಲಗಿರುವ ಬೇಡಗಂಪಣರ ಬದುಕು ಹೀನಾಯವಾಗಿದೆ.  ಎಸ್.ಸಿ.ಎಸ್.ಟಿ. ಜನಾಂಗಕ್ಕೆ ದೊರೆಯುವಂತೆ ತಮಗೂ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡಬೇಕೆಂಬ ಇವರ ಕೂಗು ಅರಣ್ಯರೋಧನವಾಗಿದೆ.


ರಾಜ್ಯದಲ್ಲಿ ವಿವಿದ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ  ಇಲಾಖೆ, ನಿಗಮ ಮಂಡಳಿ ಗಳಿವೆ. ಆ ಮೂಲಕ ಆಯಾ ಜನಾಂಗಕ್ಕೆ ಸರ್ಕಾರದ ಸವಲತ್ತುಗಳು ದೊರೆಯುತ್ತಿವೆ. ಆದರೆ ದಟ್ಟಾರಣ್ಯದ ನಡುವೆ ಇರುವ ಬೇಡಗಂಪಣ ಜನಾಂಗಕ್ಕೆ ಯಾವುದೆ ವಿಶೇಷ ಸವಲತ್ತುಗಳು ದೊರೆಯದೆ  ಇವರ ಬದುಕು ನಿಕೃಷ್ಟವಾಗಿದೆ.  ದೀಪದ ಕೆಳಗೆ ಕತ್ತಲು ಎಂಬಂತೆ ಮಹದೇಶ್ವರ ಬೆಟ್ಟಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದರು ಬೆಟ್ಟದ ಸುತ್ತಮತ್ತ ಇರುವ  ಬೇಡಗಂಪಣ ಜನರ ಅಭಿವೃದ್ಧಿ ಮರೀಚಿಕೆಯಾಗಿದೆ


ಕಡಿಮೆ ಜನಸಂಖ್ಯೆ ಇರುವುದರಿಂದ ಬೇಡಗಂಪಣ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅಸಾಧ್ಯವಾದ ಮಾತು. ವೀರಶೈವ ಲಿಂಗಾಯ್ತರೆಂದು ಗುರುತಿಸುತ್ತಿರುವುದರಿಂದ  ಮೀಸಲಾತಿ ಸೌಲಭ್ಯವೂ  ಇವರ ಪಾಲಿಗೆ ಮರೀಚಿಕೆಯಾಗಿದೆ. ಸರ್ಕಾರ ವಿಶೇಷ ಆಸಕ್ತಿ ವಹಿಸಿ ಬೇಡಗಂಪಣರ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಸಿ ಮೀಸಲಾತಿ ಕಲ್ಪಸಿ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ದೊರಕಿಸಿಕೊಟ್ಟರೆ ಮಾತ್ರ ಇವರ ಜೀವನ  ಹಸನಾಗಲು ಸಾಧ್ಯ.  ಇಲ್ಲದಿದ್ದಲ್ಲಿ  ಬುಡಕಟ್ಟು ಸೋಲಿಗರಿಗಿಂತಲು ಅತಿ ಹಿಂದುಳಿದಿದ್ದರೂ ಮುಂದುವರಿದ ಜನಾಂಗ ಎಂಬ ಹಣೆಪಟ್ಟಿ ಹೊತ್ತು   ಕಾಡಿನಲ್ಲೇ ಸಂಕಷ್ಟದ ಬದುಕು ಸಾಗಿಸಬೇಕಾದ ಯಥಾಸ್ಥಿತಿ ಮುಂದುವರಿಯಲಿದೆ.

Published by:Latha CG
First published: