ದರೋಜಿ ಕರಡಿಧಾಮದಲ್ಲಿ ತಾಯಿ ಮಗು ಕರಡಿಯ ಚಿನ್ನಾಟ; ಕರಡಿಗಳ ಸರ್ವೆಗೆ ಮುಂದಾದ ಅರಣ್ಯ ಇಲಾಖೆ

news18
Updated:September 4, 2018, 12:59 PM IST
ದರೋಜಿ ಕರಡಿಧಾಮದಲ್ಲಿ ತಾಯಿ ಮಗು ಕರಡಿಯ ಚಿನ್ನಾಟ; ಕರಡಿಗಳ ಸರ್ವೆಗೆ ಮುಂದಾದ ಅರಣ್ಯ ಇಲಾಖೆ
news18
Updated: September 4, 2018, 12:59 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.4) :  ಏಷ್ಯಾ ಖಂಡದಲ್ಲಿಯೇ ಆರಂಭವಾದ ಮೊದಲ ಕರಡಿಧಾಮದಲ್ಲಿ ಕರಡಿಗಳ ಸಂತತಿ ಹೆಚ್ಚಾಗುತ್ತಿದೆ. ನೈಸರ್ಗಿಕವಾಗಿ ಬೆಳೆದ ದರೋಜಿ ಧಾಮದಲ್ಲಿ ತಾಯಿ ಮರಿ ಕರಡಿಗಳ ಚಿನ್ನಾಟ ಬಲು ಜೋರಾಗಿದೆ. ಕೂಸು ಮರಿಯಾಗಿ ಧಾಮದ ಸುತ್ತಲೂ ತಾಯಿ ಕರಡಿ ಹೊತ್ತು ವಿಹರಿಸುತ್ತಿದೆ. ಅತಿ ಬಲಿಷ್ಠ ಮರಿ ಕರಡಿ ಹೊತ್ತೊಯ್ಯಲು ತಾಯಿ ಕರಡಿ ಹಿಂದೇಟು ಹಾಕುತ್ತ ತಾಯಿಮಗು ಚಿನ್ನಾಟವಾಡುತ್ತಿರುವ ದೃಶ್ಯ ನೋಡುವುದೇ ಮನಮೋಹಕ. ಅಂಥ ಅಪರೂಪದ ಚಿತ್ರ ಕ್ಯಾಮರಾದಲ್ಲಿ ಸೆರೆಯಾಗಿದೆ. ದರೋಜಿ ಕರಡಿಧಾಮ ಕುರಿತ ಸ್ಪೆಷೆಲ್ ಸ್ಟೋರಿ ಇಲ್ಲಿದೆ ಓದಿ...

ಆಹಾರ ಹುಡುಕುತ್ತ ಕುರುಚಲು ಗುಡ್ಡದತ್ತ ಆಗಮಿಸಿದ ಕರಡಿಗಳು. ನೈಸರ್ಗಿಕ ಪ್ರದೇಶದಲ್ಲಿ ದೊರೆತ ಆಹಾರ ಮೆಲ್ಲುತ್ತಿರುವ ತಾಯಿ ಜೊತೆ ಮರಿ ಕರಡಿ. ಆಹಾರ ತಿಂದು ಗುಹೆ ಕಡೆ ಹೋಗುವ ಸಂದರ್ಭದಲ್ಲಿ ತಾಯಿ ಕರಡಿ ಭುಜದ ಮೇಲೆರಗಲು ಮುಂದಾದ ಮರಿ ಕರಡಿ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಆರ್ಭಟಿಸುತ್ತಿರುವ ತಾಯಿ ಕರಡಿ. ಸಾಕಷ್ಟು ವಿರೋಧದ ಮಧ್ಯೆಯೂ ಪುಟ ಪುಟನೆ ತಾಯಿ ಕರಡಿ ಹಿಂಭಾಗ ಮೈಮೇಲೇರಿ ಕುಳಿತ ಮರಿ ಕರಡಿ. ತಾಯಿ-ಮರಿ ಕರಡಿಗಳ ದೃಶ್ಯವೈಭವ ಕಾಣಿಸಿದ್ದು ದರೋಜಿ ಕರಡಿಧಾಮದಲ್ಲಿ. ಆ ಅವಿಸ್ಮರಣೀಯ ದೃಶ್ಯ ನ್ಯೂಸ್ 18 ಕನ್ನಡ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಯಿ ಕರಡಿ ತನ್ನ ಆರು ತಿಂಗಳ ಹೆಣ್ಣು ಕರಡಿ ಮರಿಯನ್ನು ಹೊತ್ತೊಯ್ಯಲು ವಿರೋಧ ವ್ಯಕ್ತಪಡಿಸುತ್ತಿದೆ.

ಒಲ್ಲದ ಮನಸ್ಸಿನಿಂದ ಪ್ರೀತಿಯಿಂದ ತಾಯಿ ಕರಡಿ ಹೊತ್ತೊಯ್ಯುತ್ತಿದೆ. ಸಾಮಾನ್ಯವಾಗಿ ಹೆಣ್ಣುಕರಡಿ ಎರಡು ಮರಿ ಕರಡಿಗಳಿಗೆ ಜನ್ಮ ನೀಡಿ ಎಂಟು ತಿಂಗಳವರೆಗೆ ತನ್ನೆರಡು ಮರಿಗಳನ್ನು ಭಜದ ಮೇಲೆ ಕೂಸುಮರಿ ರೀತಿ ಹೊತ್ತೊಯ್ಯತ್ತದೆ. ಆದರೆ ಇಲ್ಲಿರುವ ಆರು ತಿಂಗಳ ಮರಿ ಕರಡಿಯನ್ನು ಹೊತ್ತೊಯ್ಯಲು ತಾಯಿ ಕರಡಿಗೆ ಆಗುತ್ತಿಲ್ಲ. ಒಂದು ಮರಿ ಕರಡಿ ಸಾವನ್ನಪ್ಪಿದ್ದರಿಂದ ಉಳಿದ ಇನ್ನೊಂದು ಮರಿ ಕರಡಿ ಬಲಿಷ್ಟವಾಗಿ ಬೆಳೆದು, ತಾಯಿ ಭುಜದ ಮೇಲೆ ಮರಿ ಕರಡಿ ಉಗುರು ರಕ್ತ ಬರುವಂತೆ ಮಾಡುತ್ತಿದೆ. ಇದರಿಂದ ಆರು ತಿಂಗಳಿಗೆ ಹೊತ್ತೊಯ್ಯಲು ವಿರೋಧ ವ್ಯಕ್ತಪಡಿಸುತ್ತಿದೆ ಎಂದು ವನ್ಯಜೀವಿ ತಜ್ಞ ಪಂಪಯ್ಯಸ್ವಾಮಿ ಅಭಿಪ್ರಾಯಪಡುತ್ತಾರೆ.

ಇಂಥ ನೈಸರ್ಗಿಕ ಧಾಮದಲ್ಲಿ ಕೂಸುಮರಿ (ಪಿಗ್ಗಿ ಬ್ಯಾಕ್) ರೀತಿ ತನ್ನ ಕರಡಿಮರಿಯನ್ನು ಹೊತ್ತೊಯ್ಯತ್ತಿರುವ, ಬೇರೆ ಬೇರೆ ಗಂಡುಹೆಣ್ಣು ಕರಡಿಗಳು ಧಾಮದಲ್ಲಿ ಓಡಾಡುವ ದೃಶ್ಯ ಆಕರ್ಷಣೆ ತಂದಿದೆ. ಸದ್ಯ ಕರಡಿಧಾಮದಲ್ಲಿ 80ಕ್ಕೂ ಹೆಚ್ಚು ಕರಡಿಗಳಿವೆ. ಇದರ ಸಂಖ್ಯೆ ಕಳೆದೆರಡು ವರುಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಹಂಪಿ ಬಳಿ ಧಾಮವನ್ನು ಆರಂಭಿಸಲಾಯಿತು.

ದರೋಜಿಯ ಆರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ಕರಡಿಧಾಮದಲ್ಲಿ ಜಾಂಬವಂತನ ಸಂತತಿಯೂ ಹೆಚ್ಚಾಗುತ್ತಿದೆ. ಈ ಕುರಿತು ಸ್ಥಳೀಯರ ಸಹಾಯದಿಂದ ತಜ್ಞರ ಸೂಚನೆ ಮೇರೆಗೆ ಗಣತಿ (ಸರ್ವೆ) ಮಾಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ದರೋಜಿ ಪ್ರಕೃತಿ ಸೌಂದರ್ಯದಲ್ಲಿ ಕರಡಿಗಳ ವಿಹಂಗಮ ನೋಟವನ್ನು ಕಣ್ತುಂಬಿಸಿ ಸೆರೆಹಿಡಿಯಲು ದೇಶವಿದೇಶಗಳಿಂದ ಪ್ರಸಿದ್ಧ ಛಾಯಾಗ್ರಾಹಕರು, ವನ್ಯಜೀವಿ ಪ್ರೇಮಿಗಳು, ಪ್ರವಾಸಿಗರ ದಂಡೇ ಬರುತ್ತಿದೆ

ವಿಶ್ವವಿಖ್ಯಾತ ಹಂಪಿ ನೋಡಲು ಆಗಮಿಸುವ ಪ್ರವಾಸಿಗರು ಇದರ ಪಕ್ಕದಲ್ಲಿಯೇ ಇರುವ ದರೋಜಿ ಕರಡಿಧಾಮದಲ್ಲಿ ಸ್ಲಾಚ್​ ಬಿಯರ್ ನೋಡಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿದಿನವೂ ಪ್ರವಾಸಿಗರಿಗೆ ಕರಡಿಗಳು ದರುಶನ ನೀಡುತ್ತಿವೆ. ಅದರಲ್ಲೂ ತಾಯಿಮರಿ ಕರಡಿ ಚಿನ್ನಾಟ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
Loading...

 

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ