ರಾಮನಗರ: ನೀರು ತರಲು ಕಾಡಿಗೆ ಹೋದವರ ಮೇಲೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ

ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ತೆಂಗಿನಕಲ್ಲು, ಮಾಕಳಿ, ಕಬ್ಬಾಳು, ದೊಡ್ಡಮಣ್ಣುಗುಡ್ಡೆ, ಸಾವನದುರ್ಗಾ, ಸಾತನೂರು, ಅಚ್ಚಲು ಸೇರಿದಂತೆ ಮಂಡ್ಯ ಜಿಲ್ಲಾ ವ್ಯಾಪ್ತಿಗೆ ಬರುವ ಮುತ್ತತ್ತಿ ಅರಣ್ಯದಿಂದ ಕಾಡಾನೆಗಳ ಜೊತೆಗೆ ಚಿರತೆ, ಕರಡಿಗಳು ನಾಡಿನತ್ತ ಮುಖಮಾಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಮನಗರ(ಏ.15): ಕರಡಿ ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಸಾವು ಬದುಕಿನ ನಡುವೆ ಇಬ್ಬರೂ ಹೋರಾಟ ಮಾಡುತ್ತಿದ್ದು ರಾಮನಗರ ಜಿಲ್ಲೆ ಮಾಗಡಿಯ ಸಾವನದುರ್ಗಾ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನವಣಮ್ಮ (23), ಮುತ್ತು (33) ಗಾಯಗೊಂಡವರಾಗಿದ್ದು,  ಕುಡಿಯುವ ನೀರು ತರಲು ಕಾಡಿನ ದಾರಿಯಲ್ಲಿ ಹೋಗಿದ್ದಾಗ ಕರಡಿ ದಾಳಿ ನಡೆಸಿದೆ. ಇಬ್ಬರಿಗೂ ತಲೆ ಭಾಗ, ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ  ರವಾನೆ ಮಾಡಲಾಗಿದೆ.

ಕಾಡಾನೆಗಳ ದಾಳಿಗೆ ತಡೆಯೇ ಇಲ್ಲ, ಸರ್ಕಾರ ಮೌನ

ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿ ಭಾಗದಲ್ಲಿ ಅತಿ ಹೆಚ್ಚಾಗಿ ಕಾಡಾನೆಗಳ ದಾಳಿ, ಚಿರತೆಗಳ ದಾಳಿ, ಇದರ ಜೊತೆಗೆ ಕರಡಿಗಳು ಸಹ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ.‌ ಇದರ ಜೊತೆಗೆ ಮನುಷ್ಯರ ಮೇಲೂ ಸಹ ದಾಳಿ ನಡೆಸುತ್ತಿವೆ. ಆದರೆ ಈ ವಿಚಾರವಾಗಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಯಾವುದೇ ರಾಜ್ಯ ಸರ್ಕಾರಗಳು ಸೂಕ್ತ ಕ್ರಮವಹಿಸಿಲ್ಲ ಎಂಬುದು ಮಾತ್ರ ನಿಜಕ್ಕೂ ಬೇಸರದ ಸಂಗತಿ.  ಇನ್ನು ದಾಳಿಯಿಂದ ಬೆಳೆ ಕಳೆದುಕೊಂಡ ರೈತರು ಯಾವುದೇ ಪರಿಹಾರ ಸಿಗದೇ ಕಂಗಾಲಾಗಿದ್ದಾರೆ.

ಕುಸಿಯುವ ಆತಂಕದಲ್ಲಿ ಬಿರುಕು ಬಿಟ್ಟಿದ್ದ ವಿರಾಜಪೇಟೆಯ ಮಲೆತಿರಿಕೆ, ನೆಹರು ನಗರ ಬೆಟ್ಟಗಳು

ಕಾಡಲ್ಲಿ ಆಹಾರ ನೀರಿಲ್ಲ, ನಾಡಿನತ್ತ ಬರುತ್ತಿರುವ ಪ್ರಾಣಿಗಳು

ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ತೆಂಗಿನಕಲ್ಲು, ಮಾಕಳಿ, ಕಬ್ಬಾಳು, ದೊಡ್ಡಮಣ್ಣುಗುಡ್ಡೆ, ಸಾವನದುರ್ಗಾ, ಸಾತನೂರು, ಅಚ್ಚಲು ಸೇರಿದಂತೆ ಮಂಡ್ಯ ಜಿಲ್ಲಾ ವ್ಯಾಪ್ತಿಗೆ ಬರುವ ಮುತ್ತತ್ತಿ ಅರಣ್ಯದಿಂದ ಕಾಡಾನೆಗಳ ಜೊತೆಗೆ ಚಿರತೆ, ಕರಡಿಗಳು ನಾಡಿನತ್ತ ಮುಖಮಾಡಿವೆ. ಕಾಡುಪ್ರಾಣಿಗಳಿಗೆ ಕಾಡಲ್ಲಿ ಸೂಕ್ತ ಆಹಾರ, ಕುಡಿಯುವ ನೀರು ಸಿಗದ ಕಾರಣ ನಾಡಿಗೆ ಲಗ್ಗೆ ಇಟ್ಟು ಮನುಷ್ಯರ ಮೇಲೆ ದಾಳಿ ಮಾಡ್ತಿವೆ. ಇನ್ನು ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಶಾಶ್ವತ ಪರಿಹಾರ ಹುಡುಕುವಲ್ಲಿ ಈವರೆಗೂ ಯಶಸ್ವಿಯಾಗಿಲ್ಲ.

ಚನ್ನಪಟ್ಟಣದ ರೈತರು ಬೆಳೆ ಬೆಳೆಯಲು ಹಿಂದೇಟು

ವರ್ಷ ಪೂರ್ತಿ ಕಾಡಾನೆಗಳ ದಾಳಿಯಿಂದ ಬೇಸತ್ತು ವ್ಯವಸಾಯದ ಸಹವಾಸವೇ ಬೇಡ ಎನ್ನುತ್ತಿದ್ದಾರೆ ಚನ್ನಪಟ್ಟಣ ತಾಲೂಕಿನ ರೈತರು. ರಾಮನಗರ - ಚನ್ನಪಟ್ಟಣ ಗಡಿಭಾಗ, ಹಾಗೂ ಚನ್ನಪಟ್ಟಣ - ಕನಕಪುರ ಗಡಿಭಾಗದ ಸರಿಸುಮಾರು 60 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರು ಯಾವುದೇ ಬೆಳೆ ಬೆಳೆದರೂ ಸಹ ಇನ್ನೇನು ಬೆಳೆ ಚೆನ್ನಾಗಿ ಬಂದು ಸ್ವಲ್ಪ ಹಣ ನೋಡಬಹುದು ಎನ್ನುವಷ್ಟರಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡುತ್ತವೆ. ಈ ಹಿನ್ನೆಲೆ ರೈತರು ಯಾವುದೇ ಬೆಳೆ ಬೆಳೆಯಲು ಹಿಂದೇಟಾಕುತ್ತಿದ್ದಾರೆ. ಇದರ ಜೊತೆಗೆ ಬೆಳೆ ಉಳಿಸಿಕೊಳ್ಳಲು ಮುಂದಾದರೆ ರೈತರ ಮೇಲೆ ದಾಳಿ ನಡೆಸಿರುವ ಅದೆಷ್ಟೋ ಪ್ರಕರಣಗಳು ಈಗಲೂ ಸಹ ಜೀವಂತ ಸಾಕ್ಷಿ. ಹಾಗಾಗಿ ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.

  • (ವರದಿ : ಎ.ಟಿ‌.ವೆಂಕಟೇಶ್)

Published by:Latha CG
First published: