• Home
 • »
 • News
 • »
 • state
 • »
 • Bengaluru Layouts: ಕೆಂಪೇಗೌಡ ಬಡಾವಣೆ ಪ್ರಗತಿ ಪ್ರತಿವಾರ ಪರಿಶೀಲನೆ ಭರವಸೆ ನೀಡಿದ ಬಿಡಿಎ

Bengaluru Layouts: ಕೆಂಪೇಗೌಡ ಬಡಾವಣೆ ಪ್ರಗತಿ ಪ್ರತಿವಾರ ಪರಿಶೀಲನೆ ಭರವಸೆ ನೀಡಿದ ಬಿಡಿಎ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಡಿಎ ಅಭಿವೃದ್ಧಿ ಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಮೂಲಭೂತ ಸೌಕರ್ಯದ ಕೊರತೆ ಮತ್ತು ಬಾಕಿ ಇರುವ 1400 ಎಕರೆ  ಜಮೀನು ಭೂಸ್ವಾಧೀನ ಕುರಿತಂತೆ ಚರ್ಚಿಸಲಾಯಿತು.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ (Nadaprabhu Kempegowda Layout) ಭೂಸ್ವಾಧೀನ ಮತ್ತು ಇಂಜಿನಿಯರಿಂಗ್ ವಿಭಾಗಗಳೆರಡರ ಪ್ರಗತಿಯನ್ನು ಪ್ರತಿವಾರ ಪರಿಶೀಲಿಸುವುದಾಗಿ ಬಿಡಿಎ (BDA) ಭರವಸೆ ನೀಡಿದೆ. ಡಾ. ಶಿವರಾಮ ಕಾರಂತ ಬಡಾವಣೆ (Dr. Shivaram Karant Layout) ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ತೀರ್ಪಿನ ಮಾದರಿಯಲ್ಲಿಯೇ ನಾಡಪ್ರಭು ಕೆಂಪೇಗೌಡ ಬಡಾವಣೆ ಭೂಸ್ವಾಧೀನ ಮತ್ತು ಇಂಜಿನಿಯರಿಂಗ್ ವಿಭಾಗಗಳೆರಡರ ಪ್ರಗತಿಯನ್ನು ಪ್ರತಿವಾರ ಪರಿಶೀಲಿಸುವುದಾಗಿ ಬಿಡಿಎ ಆಯುಕ್ತ ಕುಮಾರ್ ನಾಯಕ್ (BDA Commissioner Kumar Nayak) ವಿಧಾನಸಭೆಯ ಅರ್ಜಿಗಳ ಸಮಿತಿಗೆ ಭರವಸೆ ನೀಡಿದ್ದಾರೆ. ಶಾಸಕ ಎಸ್. ಸುರೇಶ್ ಕುಮಾರ್ (Suresh Kumar) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಅರ್ಜಿಗಳ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿದ್ದ ಆಯುಕ್ತರು ಈ ಭರವಸೆ ನೀಡಿದ್ದಾರೆ.


  ಸಭೆಯಲ್ಲಿ ಚರ್ಚಿಸಿದ್ದೇನು?


  ಬಿಡಿಎ ಅಭಿವೃದ್ಧಿ ಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಮೂಲಭೂತ ಸೌಕರ್ಯದ ಕೊರತೆ ಮತ್ತು ಬಾಕಿ ಇರುವ 1400 ಎಕರೆ  ಜಮೀನು ಭೂಸ್ವಾಧೀನ ಕುರಿತಂತೆ ಚರ್ಚಿಸಲಾಯಿತು. ಬಾಕಿ ಉಳಿದಿರುವ 1400 ಎಕರೆ ಭೂಸ್ವಾಧೀನ ಬಿಕ್ಕಟ್ಟು ಬಗೆಹರಿಸಲು ಮೊದಲ ಆದ್ಯತೆ ನೀಡಲಾಗುವುದು ಮತ್ತು ಭೂಸ್ವಾಧೀನಕ್ಕೆ ಪ್ರತ್ಯೇಕ ತಂಡವನ್ನು ರಚಿಸಲಾಗುವುದು, ಎನ್.ಪಿ.ಕೆ.ಎಲ್. ಮೂಲಸೌಕರ್ಯ ಕಾಮಗಾರಿ ಕುರಿತಂತೆ ಎಲ್ಲಾ ಬಾಕಿ ಅನುಮೋದನೆಗಾಗಿ ಶೀಘ್ರವೇ ವಿಶೇಷ ಸಭೆ ಕರೆದು ಚರ್ಚಿಸಿ, ಪ್ರತಿ 15 ದಿನಗಳಿಗೊಮ್ಮೆ ಭೂಸ್ವಾಧೀನ ಮತ್ತು ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಕುರಿತ ವರದಿಯನ್ನು ಅರ್ಜಿಗಳ ಸಮಿತಿಗೆ ಸಲ್ಲಿಸಲಾಗುವುದು ಎಂದು ಕುಮಾರ್ ನಾಯಕ್ ತಿಳಿಸಿದರು.


  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೆಗಲಿಗೆ ಹೆಚ್ಚಿನ ಹೊಣೆ


  ಮೂಲಸೌಕರ್ಯದಿಂದ ವಂಚಿತವಾಗಿರುವ ಕೆಂಗೇರಿ ಬಳಿಯ ಬಂಡೇಮಠ ಕೆ.ಎಚ್.ಬಿ. ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವ ಕುರಿತಂತೆ ಹಾಗೂ ಯಾರು ಮೂಲಸೌಕರ್ಯ ಒದಗಿಸಬೇಕು ಎಂಬ ಕುರಿತಂತೆ ಪಾಲಿಕೆ ಮತ್ತು ಗೃಹ ಮಂಡಳಿ ನಡುವಿನ ಸಂಘರ್ಷಕ್ಕೆ ಕೊನೆ ಹಾಡುವ ಹೊಣೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ) ರಾಕೇಶ್ ಸಿಂಗ್ ಅವರ ಹೆಗಲಿಗೆ ವಹಿಸಲಾಗಿದೆ. ಗೃಹಮಂಡಳಿ ಮತ್ತು ಬಿಬಿಎಂಪಿ ನಡುವೆ ಬಂಡೇಮಠ ಬಡಾವಣೆ ಹಸ್ತಾಂತರ ಕುರಿತಂತೆ ಉಂಟಾಗಿರುವ ಬಿಕ್ಕಟ್ಟು ನಿವಾರಿಸಿ, ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಲು 10 ದಿನಗಳ ಒಳಗಾಗಿ ಒಂದು ನಿರ್ಧಾರಕ್ಕೆ ಬಂದು ಈ ಸಂಬಂಧ ವರದಿಯನ್ನು ಅರ್ಜಿಗಳ ಸಮಿತಿಗೆ ಸಲ್ಲಿಸುವಂತೆ ಆದೇಶಿಸಲಾಯಿತು.


  ಇದನ್ನೂ ಓದಿ: BESCOM: ಗ್ರಾಹಕರಿಗೆ ಕರೆಂಟ್ ಶಾಕ್ ಕೊಟ್ಟ ಬೆಸ್ಕಾಂ; ಇನ್ಮುಂದೆ ವಿದ್ಯುತ್​ ಬಿಲ್ ಬಾಕಿ ಇದ್ರೆ ಲೈಸೆನ್ಸ್ ಕ್ಯಾನ್ಸಲ್​!


   “ಪರಿಹಾರ ಬೇಕೇ ಹೊರತು, ಸಂಘರ್ಷವಲ್ಲ”


  ಸುರೇಶ್ ಕುಮಾರ್, ಮಾತನಾಡಿ, ಮದಗಜಗಳ ಕಾಳಗದಲ್ಲಿ ಹುಲ್ಲು ಹಾಳಾಯಿತು ಎಂಬ ಗಾದೆಯಿದೆ. ಅದೇ ರೀತಿ ಬಿಬಿಎಂಪಿ ಮತ್ತು ಕೆ.ಎಚ್.ಬಿ. ನಡುವಿನ ಈ ಗೊಂದಲದಲ್ಲಿ ಬಡಾವಣೆಯ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರದ ಸಂಸ್ಥೆ ನಿರ್ಮಿಸಿರುವ ಬಡಾವಣೆಯ ಹೊಣೆಯನ್ನು ಈಗ ಯಾರು ಹೊರುತ್ತಾರೆ ಕೆ.ಎಚ್.ಬಿ.ಯೋ ಅಥವಾ ಬಿಬಿಎಂಪಿಯೋ ನಿರ್ಧರಿಸಿ, ಅಲ್ಲಿನ ನಿವಾಸಿಗಳಿಗೆ ಪರಿಹಾರ ಬೇಕೆ ಹೊರತು ಸಂಘರ್ಷವಲ್ಲ ಎಂದು ಸ್ಪಷ್ಟಪಡಿಸಿದರು.


  ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಬಂಡೇಮಠ ಬಡಾವಣೆ ನಿರ್ಮಾಣವಾಗಿ 20 ವರ್ಷವಾದರೂ ಒಂದೇ ಒಂದು ಉದ್ಯಾನ ಅಭಿವೃದ್ಧಿ ಆಗಿಲ್ಲ, ಮಕ್ಕಳಿಗೆ ಆಟವಾಡಲು ಉದ್ಯಾನವಿಲ್ಲ, ಹಿರಿಯ ನಾಗರಿಕರಿಗೆ ವಾಯುವಿಹಾರ ಮಾಡಲು ವಾಕಿಂಗ್ ಪಾತ್ ಕೂಡ ನಿರ್ಮಿಸಿಲ್ಲ. ಕಾಡು ಗಿಡಗಂಟಿ ಬೆಳೆದು ಹಾವುಗಳ ಆವಾಸಸ್ಥಾನವಾಗಿದೆ. ಕೆಲವು ಕಡೆ ಉದ್ಯಾನವನ್ನೇ ಖಾಸಗಿಯವರು ಒತ್ತುವರಿ ಮಾಡಿ ಅನ್ಯ ಉದ್ದೇಶಕ್ಕೆ ಬಳಸಿದ್ದಾರೆ. ಇನ್ನು ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ಬಡಾವಣೆ ಸಮಸ್ಯೆಗಳನ್ನು ಪಟ್ಟಿ ಮಾಡಿದರು.


  ಇದನ್ನೂ ಓದಿ: Education Department: ಮಕ್ಕಳನ್ನು ಶಾಲೆಗೆ ಸೇರಿಸಲು 6 ವರ್ಷ ಆಗಿರಲೇಬೇಕು; ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ


  ಸಮಿತಿಯ ಸದಸ್ಯರುಗಳಾದ ಅಪ್ಪಚ್ಚು ರಂಜನ್, ನೆಹರೂ ಓಲೇಕಾರ್, ಎಚ್.ಎಸ್. ಶಿವಶಂಕರ ರೆಡ್ಡಿ, ಭೂಸನೂರು ರಮೇಶ್ ಬಾಳಪ್ಪ, ಈ ತುಕಾರಾಂ, ಬಿಡಿಎ ಆಯುಕ್ತ ಕುಮಾರ್ ನಾಯಕ್ ಮತ್ತು ಎಲ್ಲಾ ವಿಭಾಗದ ಅಧಿಕಾರಿಗಳು,   ಕೆ.ಎಚ್.ಬಿ. ಆಯುಕ್ತರಾದ ಕವಿತಾ ಎಸ್. ಮನ್ನಿಕೇರಿ, ಕೆ.ಎಚ್.ಬಿ., ಬಿಬಿಎಂಪಿ ಮುಖ್ಯಎಂಜಿನಿಯರ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

  Published by:Annappa Achari
  First published: