BC Patil: ನಮ್ಮದು ತ್ಯಾಗದ ಕೋಟಾದಿಂದ ಬಂದಿರುವ ಮಂತ್ರಿ ಸ್ಥಾನ ; ಸಚಿವ ಬಿಸಿ ಪಾಟೀಲ್​​​

ನಾನು ಕೃಷಿಕ, ರೈತನ ಮಗ. ಇದೇ ಹಿನ್ನಲೆ ಕೃಷಿ ಖಾತೆ ಸಿಕ್ಕಿದರೆ ಖುಷಿ. ಮೊದಲ ಬಾರಿಗೆ ಅರಣ್ಯ ಕೊಟ್ಟಾಗ ಕೃಷಿ ಕೇಳಿದ್ದೆ. ಈಗ ಯಾವುದೇ ಖಾತೆ ಕೊಟ್ಟರೂ ಸರಕಾರದ ಕೆಲಸ ದೇವರ ಕೆಲಸ ಅಂತಾ ಮಾಡುತ್ತೇನೆ

ಬಿಸಿ ಪಾಟೀಲ್​

ಬಿಸಿ ಪಾಟೀಲ್​

 • Share this:
  ಹಿರೇಕೆರೂರು (ಆಗಸ್ಟ್​​. 5): ತಮಗೆ ಎರಡು ಬಾರಿ ಮಂತ್ರಿ ಸ್ಥಾನ ಒಲಿದ ಕುರಿತು ಕ್ಷೇತ್ರದಲ್ಲಿ ಮಾತನಾಡಿರುವ ಸಚಿವ ಬಿಸಿ ಪಾಟೀಲ್​, ನನ್ನ ಕೋಟಾ ಬೇರೆ. ನನ್ನದು ಜಾತಿ ಕೋಟಾದಲ್ಲೂ ಇಲ್ಲ, ಜಿಲ್ಲೆಯ ಕೋಟಾದಲ್ಲೂ ಇಲ್ಲ. ನಮ್ಮದು ತ್ಯಾಗದ ಕೋಟದಿಂದ ಬಂದಿರುವ ಮಂತ್ರಿ ಸ್ಥಾನ. 2018ರಿಂದ2023ರ ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ. ಹದಿನೇಳು ಜನ ಶಾಸಕರು ನಾವು ಬಿಜೆಪಿಗೆ ಸೇರಿದ್ದೇವು. ನಾಯಕತ್ವ ಬದಲಾವಣೆಯಾಗುತ್ತಿದ್ದಂತೆ ನಮ್ಮನ್ನು ಕೈ ಬಿಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಪಕ್ಷದ ನಾಯಕರು ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.

  ಎರಡನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕಾರ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಸಚಿವ ಬಿಸಿ ಪಾಟೀಲ್​ಗೆ ಅದ್ದೂರಿ ಸ್ವಾಗತ ಸಿಕ್ಕಿತು. ಈ ವೇಳೆ ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಿದ ಅವರು, ಹಿರೇಕೆರೂರು ತಾಲೂಕಿನ ಜನರ ಆಶೀರ್ವಾದ, ಮಾಜಿ ಶಾಸಕ ಯು.ಬಿ.ಬಣಕಾರ ಅವರ ಸಹಕಾರದಿಂದ ಆಯ್ಕೆ ಆಗಿದ್ದೇನೆ. ಕ್ಷೇತ್ರದ ಜನರ ಋಣ ತೀರಿಸಲು ಏಳು ಹುಟ್ಟಿ ಬಂದರೂ ಸಾಲದು ಎಂದು ಭಾವುಕರಾದರು.

  ಯಡಿಯೂರಪ್ಪ ಪದತ್ಯಾಗ ನೋವಾಗಿದೆ

  ಸರ್ಕಾರದಲ್ಲಿ ಸಿಎಂ ಬದಲಾಗಿದ್ದಾರೆ ಹೊರತು ಸರಕಾರ ಬದಲಾಗಿಲ್ಲ. ನಾವು ಯಡಿಯೂರಪ್ಪ ಬದಲಾಗುತ್ತಾರೆ ಎಂದು ಕೊಂಡಿರಲಿಲ್ಲ. ಆದರೆ ಯಡಿಯೂರಪ್ಪ ಸಂತೋಷದಿಂದ ಸಿಎಂ ಸ್ಥಾನ ತ್ಯಾಗ ಮಾಡಿದರು. ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ ಅನ್ನೋ ನೋವು ಒಂದು ಕಡೆ ಇದೆ. ಇದೇ ವೇಳೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಉತ್ತರ ಕರ್ನಾಟಕಕ್ಕೆ ಕಿರೀಟ ಎಂಬ ಸಂತಸವಿದೆ. ಬೊಮ್ಮಾಯಿ ಅವರು ಸಿಎಂ ಆಗಿದ್ದರಿಂದ ಉತ್ತರ ಕರ್ನಾಟಕಕ್ಕೆ ಬಲ ಬಂದಿದೆ. ಬೊಮ್ಮಾಯಿಯವರ ಜೊತೆ ಕೈ ಜೋಡಿಸಿ, ಅವರ ನೆರಳಿಗೆ ನೆರಳಾಗಿ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಕೃಷಿ ಇಲಾಖೆ ಕೊಟ್ಟರೆ ಸಂತಸ
  ನಾನು ಕೃಷಿಕ, ರೈತನ ಮಗ. ಇದೇ ಹಿನ್ನಲೆ ಕೃಷಿ ಖಾತೆ ಸಿಕ್ಕಿದರೆ ಖುಷಿ. ಮೊದಲ ಬಾರಿಗೆ ಅರಣ್ಯ ಕೊಟ್ಟಾಗ ಕೃಷಿ ಕೇಳಿದ್ದೆ. ಈಗ ಯಾವುದೇ ಖಾತೆ ಕೊಟ್ಟರೂ ಸರಕಾರದ ಕೆಲಸ ದೇವರ ಕೆಲಸ ಅಂತಾ ಮಾಡುತ್ತೇನೆ ಎಂದರು.

  ಶೀಘ್ರದಲ್ಲೇ ಸರ್ಕಾರಕ್ಕೆ ವರದಿ
  ಕ್ಷೇತ್ರದಲ್ಲಿ ಅಧಿಕಾರಿಗಳ ಸಭೆ ನಂತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವೆ. ಸಮಗ್ರ ವರದಿ ತಯಾರಿಸಿ ಸಿಎಂ ಗಮನಕ್ಕೆ ತರುತ್ತೇನೆ. ಮೂರನೆ ಅಲೆ ಬರೋ ಮುನ್ನ ಅದನ್ನ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. ಜನರೂ ಸಹ ಮಾಸ್ಕ್ ಧರಿಸಿ, ಅಂತರ‌ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

  ಇದನ್ನು ಓದಿ: ಜಮೀರ್​ ಸಹೋದರ, ಮಗನ ಪ್ರತ್ಯೇಕ ವಿಚಾರಣೆ; ಕ್ಲೌಡ್​ ಅಕೌಂಟ್​ನಿಂದ ಸಿಕ್ಕಿದ ಮಹತ್ವದ ಸುಳಿವು!

  ವರಿಷ್ಠರ ತೀರ್ಮಾನ
  ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಉಪಚುನಾವಣೆ ವಿಚಾರ ಕುರಿತು ಮಾತನಾಡಿದ ಅವರು, ವರಿಷ್ಠರು ತೀರ್ಮಾನಿಸಿದವರನ್ನ ನಿಲ್ಲಿಸಿ ಗೆಲ್ಲಿಸ್ತೇವೆ. ಸಿ.ಎಂ.ಉದಾಸಿಯವರು ನಮ್ಮೊಂದಿಗೆ ಇಲ್ಲ. ಅವರ ನೆರಳು ಕ್ಷೇತ್ರದಲ್ಲಿ ಇದೆ. ಅವರು ಮಾಡಿದ ಕೆಲಸಗಳ ಆಧಾರದ ಮೇಲೆ ಕ್ಷೇತ್ರದ ಜನರು ಬಿಜೆಪಿ ಅಭ್ಯರ್ಥಿ ಗೆಲ್ಲಿಸ್ತಾರೆ ಎಂದರು.

  ಓಲೇಕಾರ ಜೊತೆ ಮಾತನಾಡುತ್ತೇನೆ
  ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿಜೆಪಿ ಶಾಸಕ‌ ನೆಹರು ಓಲೇಕಾರ ಅಸಮಾಧಾನ ವಿಚಾರ ಕುರಿತು ಮಾತನಾಡಿದ ಅವರು, ನೆಹರು ಓಲೇಕಾರ ಅವರು ಹೇಳಿರೋದು ನನ್ನ ಗಮನಕ್ಕೆ ಬಂದಿಲ್ಲ. ಅಸಮಾಧಾನ, ಅಸಂತೋಷ ಆಗಿರೋದು ಸತ್ಯ. ಓಲೇಕಾರ ಅವರನ್ನ ನಾಳೆ ಹಾವೇರಿಯಲ್ಲಿ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಓಲೇಕಾರ ಅವರು ಹಿರಿಯರು, ಪಕ್ಷದಲ್ಲಿ ದುಡಿದಿದ್ದಾರೆ. ಮುಂದೆ ಸಿಎಂ ಬೊಮ್ಮಾಯಿ ಅವರು ಅವರಿಗೆ ಅವಕಾಶ ಮಾಡಿಕೊಡುತ್ತಾರೆ ಎಂದರು.
  Published by:Seema R
  First published: