ಬಿಲ್ಡಿಂಗ್ ಪ್ಲಾನ್ ಪಡೆಯುವುದು ಇನ್ಮುಂದೆ ಸುಲಭ; ಬಿಬಿಎಂಪಿಯಿಂದ ವಿಶೇಷ ವ್ಯವಸ್ಥೆ

ಸಾರ್ವಜನಿಕರಿಗೆ ಅತ್ಯಪಯುಕ್ತವಾಗಲಿರುವ ಈ "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್"ನ್ನು ಅಳವಡಿಸಿಕೊಳ್ಳುತ್ತಿರುವ ಮೂರನೇ ಪಾಲಿಕೆ ಬಿಬಿಎಂಪಿ ಆಗಲಿದೆ. ಈಗಾಗಲೇ ಮುಂಬೈ, ಕೋಲ್ಕತಾ ಪಾಲಿಕೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ ಎನ್ನುತ್ತಾರೆ ಬಿಬಿಎಂಪಿ ನಗರಯೋಜನೆ ಅಪರ ನಿರ್ದೇಶಕರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಫೆ. 22): ಸಿಲಿಕಾನ್ ಸಿಟಿಯಲ್ಲಿ ಮನೆ ಅಥವಾ ಕಟ್ಟಡ ಕಟ್ಟಿಸಬೇಕೆಂದಿರುವವರಿಗೆ ಬಿಬಿಎಂಪಿ ಒಳ್ಳೆಯ ಸುದ್ದಿ ಕೊಡಲು ಮುಂದಾಗಿದೆ. ಅಧಿಕೃತ ಕಟ್ಟಡ ನಿರ್ಮಾಣಕ್ಕೆ ಈವರೆಗೂ ಇದ್ದ ತೊಡಕನ್ನು ದೂರ ಮಾಡಿ ಪ್ಲ್ಯಾನ್ ಪಡೆಯೋ ಪ್ರಕ್ರಿಯೆಯನ್ನು ಸರಳ ಹಾಗೂ ಸಲೀಸುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಇದು ಜಾರಿಯಾದ ನಂತರ ಬಿಲ್ಡಿಂಗ್ ಪ್ಲ್ಯಾನ್​ಗೆ ತಿಂಗಳುಗಟ್ಟಲೇ ಅಲೆದಾಡಬೇಕಿಲ್ಲ. ನಿರಪೇಕ್ಷಣಾ ಪತ್ರಕ್ಕೆ ಕಚೇರಿಗಳಿಗೆ ಚಪ್ಪಲಿ ಸವೆಸಬೇಕಿಲ್ಲ. ಬಿಬಿಎಂಪಿ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಯಮಗಳನ್ನು ಉಲ್ಲಂಘಿಸಿ ಪ್ಲ್ಯಾನ್ ಕೊಡಲಾಗುತ್ತಿದ್ದ ಅಕ್ರಮ ನಡೆಯೋದೇ ಇಲ್ಲ. ಇದೆಲ್ಲವನ್ನೂ ಸಾಧ್ಯ ಮಾಡುತ್ತದೆ ಬಿಬಿಎಂಪಿ ರೂಪಿಸಿರುವ "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್". ಇದನ್ನು ಶೀಘ್ರವೇ ಸಿಎಂ ಬಿ.ಎಸ್ ಯಡಿಯೂರಪ್ಪ ಲೋಕಾರ್ಪಣೆ ಕೂಡ ಮಾಡಲಿದ್ದಾರೆ.

ಬೆಂಗಳೂರಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸೋದು ಎಷ್ಟು ಕಷ್ಟದ ವಿಷಯ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಮನೆ ಅಥವಾ ಕಟ್ಟಡ ನಿರ್ಮಿಸಲು ಕೈ ಹಾಕಿದಾಗ ಮೊದಲು ಎದುರಾಗುವುದೇ ಬಿಲ್ಡಿಂಗ್ ಪ್ಲ್ಯಾನ್ ಪಡೆಯೋ ಸವಾಲು. ನಿಗದಿತ 11 ಏಜೆನ್ಸಿಗಳಿಂದ ನಿರಪೇಕ್ಷಣಾ ಪತ್ರ (ನೋ ಅಬ್ಜೆಕ್ಷನ್ ಸರ್ಟಿಫಿಕೇಟ್) ತಂದು ಬಿಬಿಎಂಪಿಗೆ ಒಪ್ಪಿಸೋದರಲ್ಲಿ ಜೀವ ಅಯ್ಯಯ್ಯೋ ಎನಿಸಿಬಿಡ್ತಿದೆ. ಈ ನಡುವೆ ಸಂಬಂಧಿಸಿದ ಅಧಿಕಾರಿಗಳಿಗೆ ಲಂಚ ಕೊಡಬೇಕಾದ ಸ್ಥಿತಿ. ಅದನ್ನು ಕೊಟ್ಟ ಮೇಲೂ ಪ್ಲ್ಯಾನ್ ಅಪ್ರೂವಲ್ ಆಗೋಕೆ ತಿಂಗಳುಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗುತ್ತದೆ. ಇಂಥ ಸ್ಥಿತಿಯಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ ಇದೀಗ ಸರ್ಕಾರದ ನಿರ್ದೇಶನದ ಮೇಲೆ ಬಿಬಿಎಂಪಿ "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್" ಜಾರಿಗೊಳಿಸಲು ಮುಂದಾಗಿದೆ. ಬಿಬಿಎಂಪಿಯ ಐಟಿ ವಿಭಾಗದಿಂದ ಈಗಾಗಲೇ ಇದಕ್ಕೆ ಅಂತಿಮ ರೂಪ ನೀಡಲಾಗಿದೆ. ವಾರದೊಳಗೆ ಸಿಎಂ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನುತ್ತಾರೆ ಬಿಬಿಎಂಪಿ ನಗರ ಯೋಜನಾ ವಿಭಾಗದ ಮುಖ್ಯಾಧಿಕಾರಿ ಪ್ರಸಾದ್.

ಇದನ್ನೂ ಓದಿ: ಮದುವೆ ಪತ್ರಿಕೆಯಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಮಾದಕವಸ್ತು ಸಾಗಣೆ; ಬೆಂಗಳೂರು ಏರ್​ಪೋರ್ಟ್​ನಲ್ಲಿ 5 ಕಿಲೋ ಡ್ರಗ್ಸ್ ವಶಕ್ಕೆ

ಏನಿದು ಈ  "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್"?

ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಪ್ಲ್ಯಾನ್ ಪಡೆಯಲು ಇರುವ ಕ್ಲಿಷ್ಟ, ಜಟಿಲ ಹಾಗೂ ದೀರ್ಘಾವಧಿಯ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸುವುದೇ  "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್". ಪ್ಲ್ಯಾನ್ ಪಡೆಯಲು ಈವರೆಗೂ ತಗಲುತ್ತಿದ್ದ 75 ದಿನಗಳ ಪ್ರಕ್ರಿಯೆ ನೂತನ ವ್ಯವಸ್ಥೆ ಮೂಲಕ ಕೇವಲ 18 ದಿನಗಳಿಗೆ ಟ್ರಿಮ್ ಆಗ್ತಿದೆ. ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ವಿಮಾನ ನಿಯಂತ್ರಣ ಪ್ರಾಧಿಕಾರದಿಂದ ಕಡ್ಡಾಯವಾಗಿ ಬೇಕಿರುವ ನಿರಪೇಕ್ಷಣಾ ಪತ್ರಗಳನ್ನು ಪಡೆಯುವ ರಿಸ್ಕ್ ಇರುವುದಿಲ್ಲ. ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಿದ್ದಲ್ಲಿ ಬಿಬಿಎಂಪಿಯೇ 18 ದಿನಗಳಲ್ಲಿ ಈ ಎನ್​ಓಸಿಗಳನ್ನು ಪಡೆದು ಪ್ಲ್ಯಾನ್ ಅಪ್ರೂವಲ್ ಮಾಡಲಿದೆ. ಪ್ರತಿಯೊಂದು ಏಜೆನ್ಸಿಗೂ ನಿರಪೇಕ್ಷಣಾ ಪತ್ರಗಳನ್ನು ನೀಡಲು ಡೆಡ್ ಲೈನ್ ನಿಗದಿಪಡಿಸಲಾಗ್ತಿದೆ. ಆ ಡೆಡ್​ಲೈನ್​ನೊಳಗೆ ಸಂಬಂಧಪಟ್ಟ ಅಧಿಕಾರಿಗಳು ಎನ್​ಓಸಿ ನೀಡಬೇಕು. ಅಥವಾ ದಾಖಲೆಗಳು ಸಮರ್ಪಕವಾಗಿರದಿದ್ದಲ್ಲಿ ಕ್ಯಾನ್ಸಲ್ ಮಾಡಬೇಕು. ಆದರೆ ವೇಟಿಂಗ್ ಲಿಸ್ಟ್​ನಲ್ಲಿಟ್ಟುಕೊಳ್ಳುವಂತಿಲ್ಲ. ಒಂದ್ವೇಳೆ ಏನೂ ಪ್ರತಿಕ್ರಿಯೆ ನೀಡದೆ ಹಾಗೆಯೇ ಉಳಿಸಿಕೊಂಡಲ್ಲಿ ಅದು ಡೀಮ್ಡ್( ಅನುಮತಿ ನೀಡಿದಂತೆ) ಆಗಿ ಬಿಡುತ್ತೆ. ಭವಿಷ್ಯದಲ್ಲಿ ಅದರ ಬಗ್ಗೆ ಏನೇ ಸಮಸ್ಯೆಗಳಾದರೂ ಅಧಿಕಾರಿಯೇ ತಲೆಕೊಡಬೇಕಾಗುತ್ತೆ. ಈ ಆತಂಕದಿಂದಾಗಿ ಅಧಿಕಾರಿಗಳು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತೆ.

ಸಾರ್ವಜನಿಕರಿಗೆ ಅತ್ಯಪಯುಕ್ತವಾಗಲಿರುವ ಈ "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್"ನ್ನು ಅಳವಡಿಸಿಕೊಳ್ಳುತ್ತಿರುವ ಮೂರನೇ ಪಾಲಿಕೆ ಬಿಬಿಎಂಪಿ ಆಗಲಿದೆ. ಈಗಾಗಲೇ ಮುಂಬೈ, ಕೋಲ್ಕತಾ ಪಾಲಿಕೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ ಎನ್ನುತ್ತಾರೆ ಬಿಬಿಎಂಪಿ ನಗರಯೋಜನೆ ಅಪರ ನಿರ್ದೇಶಕ ಮಂಜೇಶ್. ಎಲ್ಲವೂ ಅಂದುಕೊಂಡಂತೆ ಆದರೆ ಈ ವಾರದೊಳಗೆ  "ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್" ವ್ಯವಸ್ಥೆ ಲೋಕಾರ್ಪಣೆಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಪ್ಲ್ಯಾನ್ ಪಡೆಯೊಕ್ಕೆ ತೀವ್ರ ಹರಸಾಹಸ ಪಡುತ್ತಿದ್ದ ಜನರು ಇನ್ಮುಂದೆ ನಿಶ್ಚಿಂತೆಯಿಂದ ಅಪ್ಲಿಕೇಷನ್ ಹಾಕಿ ಎಲ್ಲಾ ದಾಖಲೆ ನೀಡಿಬಿಟ್ಟರೆ 18-20 ದಿನಗೊಳಗೆ ಪ್ಲ್ಯಾನ್ ಅಪ್ರೂವಲ್ ಆಗಿ ಕನಸಿನ ಮನೆ ಅಥವಾ ಕಟ್ಟಡ ಕಟ್ಟೋದು ಸಾಧ್ಯವಾಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: