ನಾಮಪತ್ರ ಸಲ್ಲಿಕೆ ಆಗದ ಹಿನ್ನೆಲೆ, ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ

ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಇರುವ ಕಾರಣದಿಂದ ಇದೇ ಅವಧಿಯಲ್ಲಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸುವ ನಿರ್ಧಾರಕ್ಕೆ ಮೂರೂ ಪಕ್ಷಗಳ ಕಾರ್ಪೊರೇಟರ್​ಗಳು ವಿರೋಧ ವ್ಯಕ್ತಪಡಿಸಿದ್ದರು.

news18
Updated:December 4, 2019, 12:15 PM IST
ನಾಮಪತ್ರ ಸಲ್ಲಿಕೆ ಆಗದ ಹಿನ್ನೆಲೆ, ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ
ಬಿಬಿಎಂಪಿ
  • News18
  • Last Updated: December 4, 2019, 12:15 PM IST
  • Share this:
ಬೆಂಗಳೂರು(ಡಿ. 04): ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಬೇಕು ಎಂಬ ಪಾಲಿಕೆ ಸದಸ್ಯರ ಹಠವೇ ಗೆದ್ದಿದೆ. ಇವತ್ತು ನಡೆಯಬೇಕಿದ್ದ ಚುನಾವಣೆಯಲ್ಲಿ ಯಾವುದೇ ಸದಸ್ಯರು ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ಕಾರ್ಪೊರೇಟರ್​ಗಳು ಚುನಾವಣೆಗೆಗೆ ಹಾಜರಾಗದಿರಲು ಒಮ್ಮತದಿಂದ ನಿರ್ಧಾರ ಕೈಗೊಂಡರೆನ್ನಲಾಗಿದೆ. ಚುನಾವಣೆಯನ್ನು ಮುಂದೂಡಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು ಮುಂದಿನ ಚುನಾವಣಾ ದಿನಾಂಕವನ್ನು ಪ್ರಕಟಿಸಿಲ್ಲ.

ಟೌನ್​ಹಾಲ್​ನಲ್ಲಿ ಇವತ್ತು ಬೆಳಗ್ಗೆ 8ರಿಂದ 9:30ಯ ಅವಧಿಯಲ್ಲಿ 12 ಸ್ಥಾಯಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗಬೇಕಿತ್ತು. ಬೆಳಗ್ಗೆ 11 ಗಂಟೆಗೆ ಮತದಾನ ನಡೆಸಲು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ನಿರ್ಧರಿಸಿದ್ದರು. ಅದರೆ, ನಿಗದಿತ ಅವಧಿಯಲ್ಲಿ ಯಾರೂ ಕೂಡ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಹಾಗೆಯೇ, 198 ಪಾಲಿಕೆ ಸದಸ್ಯರ ಪೈಕಿ ಮೇಯರ್ ಗೌತಮ್ ಕುಮಾರ್ ಜೈನ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್​ನ ನೇತ್ರಾ ನಾರಾಯಣ್, ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ ಮತ್ತು ಮಾಜಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಮಾತ್ರ ಉಪಸ್ಥಿತರಿದ್ದರು. ಚುನಾವಣೆ ನಡೆಯಲು ಕನಿಷ್ಠ 80 ಸದಸ್ಯ ಬಲವಾದರೂ ಬೇಕು. ಆದರೆ, ಸುಮಾರು 10 ಮಂದಿ ಮಾತ್ರ ಹಾಜರಿದ್ದರಿಂದ ಕೋರಂ ಕೊರತೆಯೂ ಇತ್ತು.

  ಇದನ್ನೂ ಓದಿ: ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ

ಕೋರಂ ಕೊರತೆ ಮತ್ತು ನಾಮಪತ್ರ ಸಲ್ಲಿಕೆಯಾಗಿಲ್ಲದ ಕಾರಣದಿಂದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು 12 ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದರು.

ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಇರುವ ಕಾರಣದಿಂದ ಇದೇ ಅವಧಿಯಲ್ಲಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸುವ ನಿರ್ಧಾರಕ್ಕೆ ಮೂರೂ ಪಕ್ಷಗಳ ಕಾರ್ಪೊರೇಟರ್​ಗಳು ವಿರೋಧ ವ್ಯಕ್ತಪಡಿಸಿದ್ದರು. ಡಿ. 4ರೊಳಗೆ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಬದ್ಧವಾಗಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಆಯೋಜಿಸಿದ್ದರು.

ಬಿಬಿಎಂಪಿ ಮೇಯರ್ ಚುನಾವಣೆಯ ದಿನವೇ ಸ್ಥಾಯಿ ಸಮಿತಿಗಳಿಗೂ ಚುನಾವಣೆಯಾಗಬೇಕಿತ್ತು. ಆದರೆ, ಕೆಲ ಗೊಂದಲಗಳಿಂದಾಗಿ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ಚುನಾವಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: December 4, 2019, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading