ಬೆಂಗಳೂರು(ಸೆ.19): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ವಾಣಿಜ್ಯ ಪ್ರದೇಶ(ಸಿಬಿಡಿ)ಗಳಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 'ಸ್ಮಾರ್ಟ್ ಪಾರ್ಕಿಂಗ್' ಯೋಜನೆಗೆ ಜಾರಿತರಲಾಗುತ್ತಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆಗೆ ಬಿಬಿಎಂಪಿ ಆಡಳಿತಗಾರರಾದ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾಟ್ ಪಾರ್ಕಿಂಗ್ ಯೋಜನೆಗೆ ಇಂದು 10 ಕಡೆ ಚಾಲನೆ ನೀಡಲಾಗಿದೆ. ತಂತ್ರಜ್ಞಾನ ಆಧಾರಿತ ಹಾಗೂ ಸುಲಭ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದಕ್ಕಾಗಿ 'ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್' ತಂತ್ರಂಶವನ್ನು ಸಿದ್ಧಪಡಿಸಲಾಗಿದೆ. ತಂತ್ರಾಂಶದ ಮೂಲಕ ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಮೀಟರ್ ಮೂಲಕ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಿ ರಶೀದಿ ಪಡೆಯಬಹುದಾಗಿದೆ. ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ಬರಲಿದೆ ಎಂದು ಬಿಬಿಎಂಪಿ ಆಡಳಿತಗಾರರಾದ ಗೌರವ್ ಗುಪ್ತ ತಿಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದಲ್ಲಿ ಕೇಂದ್ರ ಭಾಗದ ರಸ್ತೆಗಳಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯು ಆಯ್ದ 87 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸುತ್ತಿದೆ. ಇಂದು 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆಗೆ ಚಾಲನೆ ನೀಡಲಾಗಿದೆ. ಇನ್ನುಳಿದ ರಸ್ತೆಗಳಲ್ಲಿ ಹಂತ-ಹಂತವಾಗಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ಸೆಂಟ್ರಲ್ ಪಾರ್ಕಿಂಗ್ ಸರ್ವೀಸಸ್ ಸಂಸ್ಥೆ ಮೂಲಕ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸುತ್ತಿದ್ದು, ಆ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಪಾಲಿಕೆಯಿಂದ ಇದಕ್ಕೆ ಯಾವುದೇ ಹಣ ವ್ಯಯಿಸುತ್ತಿಲ್ಲ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 7 ಕಾರು, 60 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಮೊದಲ ಹಂತದಲ್ಲಿ ಚಾಲನೆ ನೀಡುತ್ತಿರುವ 10 ರಸ್ತೆಗಳಲ್ಲಿ 475 ಕಾರು ಮತ್ತು 510 ದ್ವಚಕ್ರ ವಾಹನ ನಿಲುಗಡೆ ಮಾಡಬಹುದಾಗಿದೆ. ಎಲ್ಲಾ 87 ರಸ್ತೆಗಳಲ್ಲಿ ಒಟ್ಟು 8,000 ರಿಂದ 9,000 ವಾಹನ ನಿಲುಗಡೆ ಮಾಡಲು ಅವಕಾಶವಿದ್ದು, ಇದರಿಂದ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ಬರಲಿದೆ ಎಂದು ಹೇಳಿದರು.
ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್(NBSP) ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ವಾಹವನ್ನು ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಸ್ವಯಂಚಾಲಿತ ಡಿಜಿಟಲ್ ಪಾರ್ಕಿಂಗ್ ಮೀಟರ್ ಮೂಲಕ ಪಾರ್ಕಿಂಗ್ ಶುಲ್ಕ ಪಾವತಿಸಿ ರಸೀದಿ ಪಡೆಯಬಹುದು. ವಾಹನ ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಯುಪಿಐನಿಂದ ಹಣ ಪಾವತಿಸಬಹುದಾಗಿದೆ. ವಾಹನ ನಿಲುಗಡೆ ಸ್ಥಳದಲ್ಲಿ ಸೆನ್ಸಾರ್ ಗಳ ಅಳವಡಿಕೆ, ಎಷ್ಟು ವಾಹನಗಳು ನಿಂತಿವೆ.
ಇನ್ನೂ ಎಷ್ಟು ವಾಹನಗಳ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ತಿಳಿಯಲು ಡಿಜಿಟಲ್ ನಾಮಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆಗಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳಿಗೆ ಕ್ಲ್ಯಾಂಪ್ ಹಾಕುವುದು ಮತ್ತು ಟೋಯಿಂಗ್ ಮಾಡಲಾಗುತ್ತದೆ. ಎಲ್ಲವನ್ನೂ ವೀಕ್ಷಣೆ ಮಾಡಲು ಸೆಂಟ್ರಲ್ ಕಮಾಂಡ್ ಸೆಂಟರ್ ಇದೆ. ಇದರಿಂದ ಎಲ್ಲವೂ ವೀಕ್ಷಣೆ ಮಾಡಬಹುದಾಗಿದೆ. ಈ ಬಗ್ಗೆ ನಾಗರೀಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ.
ಸ್ಮಾರ್ಟ್ ಪಾರ್ಕಿಂಗ್ ಜಾರಿಯಾಗುತ್ತಿರುವ 10 ರಸ್ತೆಗಳು1. ಕನ್ನಿಂಗ್ ಹ್ಯಾಮ್ ರಸ್ತೆ.2. ಎಂ.ಜಿ.ರಸ್ತೆ.3. ಕಸ್ತೂರು ಬಾ ರಸ್ತೆ.4. ಸೆಂಟ್ ಮಾರ್ಕ್ಸ್ ರಸ್ತೆ.5. ರೆಸಿಡೆನ್ಸಿ ರಸ್ತೆ.6. ಮ್ಯೂಸಿಯಂ ಕ್ರಾಸ್ ರಸ್ತೆ.7. ವಿಟ್ಟಲ್ ಮಲ್ಯ ರಸ್ತೆ.8. ಮಲ್ಯ ಆಸ್ಪತ್ರೆ ರಸ್ತೆ.9. ಚರ್ಚ್ ಸ್ಟ್ರೀಟ್.10. ಅಲಿ ಅಸ್ಕರ್ ರಸ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ