ಕೆರೆ ಒತ್ತುವರಿ ಪ್ರಕರಣ; ಶೀಘ್ರವೇ ನೆಲಕ್ಕುರುಳುತ್ತಾ ಮಂತ್ರಿ ಮಾಲ್ ಕಟ್ಟಡ?

ಮಂತ್ರಿ ಮಾಲ್​ನ ಜಾಗದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸರ್ವೆ ನಡೆಯಲಿದೆ. ಸರ್ಕಾರಿ, ಕೆರೆ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಿದ್ದ ಆರೋಪ ಕೇಳಿಬಂದಿದ್ದರಿಂದ ಇಂದು ಬಿಬಿಎಂಪಿ ಅಧಿಕಾರಿಗಳು ಸರ್ವೇ ನಡೆಸಿ ಆಯುಕ್ತರಿಗೆ ವರದಿ ನೀಡಲಿದ್ದಾರೆ.

ಮಂತ್ರಿ ಮಾಲ್

ಮಂತ್ರಿ ಮಾಲ್

  • Share this:
ಬೆಂಗಳೂರು (ಫೆ. 28): ಬೆಂಗಳೂರಿನಲ್ಲಿರುವ ಬಹುತೇಕ ಎಲ್ಲ ಕೆರೆಗಳೂ ಒತ್ತುವರಿಯಾಗಿದ್ದು, ಕೆಲವು ಕಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್​ ಮೇಲೂ ಕೆರೆ ಒತ್ತುವರಿಯ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸರ್ವೆ ನಡೆಸಲು ಮುಂದಾಗಿದ್ದಾರೆ. ಸರ್ವೆಯಲ್ಲಿ ಒತ್ತುವರಿ ಸಾಬೀತಾದರೆ ಮಂತ್ರಿ ಮಾಲ್​ ಅನ್ನು ತೆರವುಗೊಳಿಸಲಾಗುತ್ತದೆ. 

ಸಿಲಿಕಾನ್​ ಸಿಟಿಯ ಬಹುತೇಕ ಎಲ್ಲ ಪ್ರದೇಶಗಳಲ್ಲಿರುವ ಕೆರೆಗಳನ್ನೂ ಒತ್ತುವರಿ ಮಾಡಿ ಶಾಪಿಂಗ್ ಮಾಲ್, ಬೃಹತ್ ಕಟ್ಟಡ, ಮನೆಗಳನ್ನು ನಿರ್ಮಿಸಲಾಗಿದೆ. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ 15 ತಿಂಗಳ ಹಿಂದೆ ಲೋಕಾಯುಕ್ತ ಆದೇಶ ನೀಡಿತ್ತು. 1 ತಿಂಗಳ ಹಿಂದೆ ಮಂತ್ರಿ ಮಾಲ್​ ಮತ್ತು ಮಂತ್ರಿ ಗ್ರೀನ್ ಅಪಾರ್ಟ್​ಮೆಂಟ್ ಕಟ್ಟಡಗಳ ವಿರುದ್ಧವೂ ಕೆರೆ ಒತ್ತುವರಿಯ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂತ್ರಿ ಮಾಲ್​ ಅನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಕೋರ್ಟ್ ಆದೇಶ ನೀಡಿತ್ತು.

ಇದನ್ನೂ ಓದಿ: ಸಾಫ್ಟ್​ವೇರ್​ ಕಂಪನಿ ಹೆಸರಲ್ಲಿ ಬೆಂಗಳೂರಿನ 45 ಬ್ಯಾಂಕ್​ಗೆ ವಂಚನೆ; ಈ ಖತರ್ನಾಕ್​ ಗ್ಯಾಂಗ್ ಮಾಡಿದ್ದೇನು ಗೊತ್ತಾ?

ಕೈಗಾರಿಕಾ ವಲಯಕ್ಕೆ ಮೀಸಲಿಟ್ಟಿದ್ದ ಈ ಸ್ಥಳವನ್ನು ವಸತಿ ಪ್ರದೇಶಕ್ಕೆ ಪರಿವರ್ತನೆ ಮಾಡಿ ಅಲ್ಲಿ ಬೃಹತ್ ವಸತಿ ಸಮುಚ್ಛಯ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 400 ಕೋಟಿ ರೂ. ಮೌಲ್ಯದ 4.29 ಎಕರೆ ಪ್ರದೇಶದ ಈ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಕೋರ್ಟ್​ ಸೂಚಿಸಿತ್ತು. ಜಕ್ಕರಾಯನ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಹಾಗೂ ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿರುವ ಆರೋಪ ಕೇಳಿಬಂದಿತ್ತು.

ಏನಿದು ಪ್ರಕರಣ?:

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಜಾ ಮಿಲ್ ಇದ್ದ ಸ್ಥಳದಲ್ಲಿ ಮಂತ್ರಿಮಾಲ್ ನಿರ್ಮಿಸಿರುವುದು, ಯಶವಂತಪುರ ರಸ್ತೆಯ ಕಿರ್ಲೋಸ್ಕರ್ ಕಾರ್ಖಾನೆ ಇದ್ದ ಸ್ಥಳದಲ್ಲಿ ಒರಾಯನ್ ಮಾಲ್ ಹಾಗೂ ಸುಜಾತಾ ಚಿತ್ರಮಂದಿರದ ಎದುರಿನ ಮಿನರ್ವ ಮಿಲ್ ಪ್ರದೇಶದಲ್ಲಿ ಶೋಭಾ ಅಪಾರ್ಟ್‍ಮೆಂಟ್ ನಿರ್ಮಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶಗಳನ್ನಾಗಿ ಅಥವಾ ವಸತಿ ಪ್ರದೇಶಗಳನ್ನು ಕೈಗಾರಿಕಾ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್​ನ ಆದೇಶವಿದ್ದರೂ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಎನ್.ಆರ್. ರಮೇಶ್ ದೂರು ನೀಡಿದ್ದರು. 3.31 ಎಕರೆ ವಿಸ್ತೀರ್ಣದ ಸ್ವತ್ತು ಹಾಗೂ 37 ಗುಂಟೆ ಕೆರೆ ಒತ್ತುವರಿ ಸೇರಿದಂತೆ 4.29 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹಮಾರಾ ಶೆಲ್ಟರ್ಸ್​ ಸಂಸ್ಥೆಯವರು ಮಂತ್ರಿಮಾಲ್ ಮತ್ತು ಮಂತ್ರಿಗ್ರೀನ್ ವಸತಿ ಸಮುಚ್ಛಯವನ್ನು ನಿರ್ಮಿಸಿದ್ದರು.

ಇದನ್ನೂ ಓದಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರ; ಕೊನೆಗೂ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಈ ಒತ್ತುವರಿ ಕುರಿತಂತೆ ಜಂಟಿ ಸರ್ವೆಗೆ ಆದೇಶಿಸಲಾಗಿತ್ತು. ಹೀಗಾಗಿ, ಇಂದು ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ ಜಾಗದಲ್ಲಿ ಸರ್ವೆ ನಡೆಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸರ್ವೆ ನಡೆಯಲಿದೆ. ಸರ್ಕಾರಿ, ಕೆರೆ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಿದ್ದ ಆರೋಪ ಕೇಳಿಬಂದಿದ್ದರಿಂದ ಇಂದು ಬಿಬಿಎಂಪಿ ಅಧಿಕಾರಿಗಳು ಸರ್ವೇ ನಡೆಸಿ ಆಯುಕ್ತರಿಗೆ ವರದಿ ನೀಡಲಿದ್ದಾರೆ. ಒಂದುವೇಳೆ ಒತ್ತುವರಿಯ ಮಾಡಿರುವುದು ಸಾಬೀತಾದರೆ ಮಂತ್ರಿ ಮಾಲ್​ ತೆರವು ಖಚಿತ ಎನ್ನಲಾಗಿದೆ.
First published: