ಭರವಸೆಯಾಗಿಯೇ ಉಳಿದ ಕಸದ ಮೇಲಿನ ಉದ್ಯಾನವನ; ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

ಕಸದ ರಾಶಿಯಿಂದ ಹರಿಯುತ್ತಿರುವ ಕಲುಷಿತ ನೀರು ಸುತ್ತಮುತ್ತಲಿನ ಕೆರೆಗಳನ್ನು ಸೇರಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜೊತೆಗೆ ಜಲಚರಗಳು ಸಹ ಸಾವನ್ನಪ್ಪುತ್ತಿವೆ. ಜೊತೆಗೆ ಡಂಪಿಂಗ್ ಯಾರ್ಡ್​​​ನ ಕಸದಿಂದ ವಿಷ ಗಾಳಿ ಹೊರ ಬರುತ್ತಿರುವುದು ಇಂದಿಗೂ ನಿಂತಿಲ್ಲ.

news18-kannada
Updated:September 30, 2020, 3:54 PM IST
ಭರವಸೆಯಾಗಿಯೇ ಉಳಿದ ಕಸದ ಮೇಲಿನ ಉದ್ಯಾನವನ; ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ
ಬಿಬಿಎಂಪಿ ಕಚೇರಿ
  • Share this:
ಆನೇಕಲ್(ಸೆ.30): ನಗರದ ಕಸ ಸುರಿಯುವುದರ ಜೊತೆಗೆ ಹತ್ತಾರು ಕನಸುಗಳನ್ನು ಸುರಿದು ಹೋದ ಬಿಬಿಎಂಪಿ ಇಂದಿಗೂ ಅಲ್ಲಿ  ಅವುಗಳನ್ನು ಸಾಕಾರಗೊಳಿಸಿಲ್ಲ. ನೆಪ ಮಾತ್ರಕ್ಕೆ ನಾಲ್ಕು ರಸ್ತೆ, ಐದಾರು ಆಟದ ಸಾಮಾಗ್ರಿಗಳು, ಬೆಳಗದ ಲೈಟ್ ಕಂಬಗಳು. ಅವುಗಳು ಕಳಪೆಯಾಗಿದ್ದು, ಇಂದಿಗೂ ಕಸದ ರಾಶಿಯಿಂದ ವಿಷ ಗಾಳಿ ಬುಸುಗುಟ್ಟುತ್ತಿದೆ. ಹೌದು, ಹೀಗೆ ಗಿಡಗಂಟೆ ಪೊದೆಗಳನ್ನು ಅಪ್ಪಿಕೊಂಡಂತಿರುವ ಪಾದಚಾರಿ ರಸ್ತೆಗಳು, ಗಿಡಗಂಟಿಗಳ ನಡುವೆ ಬಳಕೆಯಾಗದೇ ಏಕಾಂಗಿಯಾಗಿ ಕುಂತಿರುವ ಬೆಂಚ್​ಗಳು, ಒಣಗಿದ ಗಿಡಗಳು, ನೀರಿನಲ್ಲಿ ಗುಳ್ಳಿಗಳಂತೆ ಮೇಲೆಳುತ್ತಿರುವ ಕಸದ ವಿಷ ಗಾಳಿ, ಕಸದ ಕಲುಷಿತ ನೀರು ಕೆರೆ ಸೇರಿ ಸತ್ತಿರುವ ಮೀನುಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎಸ್ ಬಿಂಗಿಪುರ ಬಿಬಿಎಂಪಿ ಡಂಪಿಂಗ್ ಯಾರ್ಡ್​​​ನಲ್ಲಿ. ಹತ್ತಾರು ವರ್ಷಗಳಿಂದ ಸುತ್ತಮುತ್ತಲಿನ ಜನರಿಗೆ ಕಲರ್ ಕಲರ್ ಕಾಗೆ ಹಾರಿಸಿದ್ದ ಬಿಬಿಎಂಪಿ ಇಲ್ಲಿನ ಡಂಪಿಂಗ್ ಯಾರ್ಡ್​​​ಗೆ ಲಕ್ಷಾಂತರ ಟನ್ ನಗರದ ಕಸವನ್ನು ತುಂಬಿ ಕೈ ತೊಳೆದುಕೊಂಡಿತ್ತು. ಬಳಿಕ ಸ್ಥಳೀಯರ ವಿರೋಧ ಹೆಚ್ಚಾಗುತ್ತಿದ್ದಂತೆ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿ, ಕಸದ ಮೇಲೆ ಸುಸಜ್ಜಿತ ಉದ್ಯಾನವನ ನಿರ್ಮಾಣದ ಭರವಸೆ ನೀಡಿದ್ದ ಬಿಬಿಎಂಪಿ ಇಂದಿಗೂ ಈಡೇರಿಸಿಲ್ಲ ಎನ್ನುವ ಸ್ಥಳೀಯರು ನೆಪ ಮಾತ್ರಕ್ಕೆ ಉದ್ಯಾನವನ ನಿರ್ಮಿಸಿದ್ದಾರೆ.‌

ರಮೇಶ್​ ಕತ್ತಿಗೆ ಬೆಳಗಾವಿ ಲೋಕಸಭಾ ಟಿಕೆಟ್​​ ನೀಡಿ; ಕತ್ತಿ ಅಭಿಮಾನಿಗಳ ಆಗ್ರಹ

ಅದೂ ಸಹ ಕಳಪೆಯಾಗಿದ್ದು, ಪಾದಚಾರಿ ರಸ್ತೆಗಳು ಇನ್ನೂ ಪೂರ್ಣಗೊಳಿಸಿಲ್ಲ. ಅದಾಗಲೇ ಕಿತ್ತು ಬರುತ್ತಿವೆ. ಮಕ್ಕಳು ಆಟವಾಡುವ ಕೆಲ ಸಾಮಾಗ್ರಿಗಳನ್ನು ಅಳವಡಿಸಿದ್ದಾರೆ. ಸುತ್ತಲೂ ಲೈಟ್ ಕಂಬಗಳನ್ನು ನಿರ್ಮಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಫಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸದ ಮೇಲೆ ಮಣ್ಣು ಸುರಿದು ನೆಪ ಮಾತ್ರಕ್ಕೆ ಉದ್ಯಾನವನ ಮಾಡಿರುವ ಬಿಬಿಎಂಪಿಗೆ ಡಂಪಿಂಗ್ ಯಾರ್ಡ್ ಒಡಲಿನಿಂದ ಹೊರ ಬರುತ್ತಿರುವ ವಿಷವನ್ನು ತಡೆಗಟ್ಟಲು ಇಂದಿಗೂ ಸಾಧ್ಯವಾಗಿಲ್ಲ. ಕಸದ ರಾಶಿಯಿಂದ ಹರಿಯುತ್ತಿರುವ ಕಲುಷಿತ ನೀರು ಸುತ್ತಮುತ್ತಲಿನ ಕೆರೆಗಳನ್ನು ಸೇರಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜೊತೆಗೆ ಜಲಚರಗಳು ಸಹ ಸಾವನ್ನಪ್ಪುತ್ತಿವೆ. ಜೊತೆಗೆ ಡಂಪಿಂಗ್ ಯಾರ್ಡ್​​​ನ ಕಸದಿಂದ ವಿಷ ಗಾಳಿ ಹೊರ ಬರುತ್ತಿರುವುದು ಇಂದಿಗೂ ನಿಂತಿಲ್ಲ. ವಾತವರಣ ವಿಷಮಯವಾಗಿ ಜನ ಜಾನುವಾರುಗಳು ಸಾವನ್ನಪ್ಪುತ್ತಿದ್ದರು ಬಿಬಿಎಂಪಿ ಅಧಿಕಾರಿಗಳು ಮಾತ್ರ ಕೊಟ್ಟ ಭರವಸೆಯನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ ಎಂದು ಬಿಂಗಿಪುರ ಗ್ರಾಮಸ್ಥ ಪಿಲ್ಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ನಗರದ ಕಸದ ಸಮಸ್ಯೆ ಕರಗಿಸಲು ಬಿಬಿಎಂಪಿ ಬೆಂಗಳೂರು ಹೊರವಲಯದ ಹಳ್ಳಿಗಾಡು ಪ್ರದೇಶಗಳಿಗೆ ತಂದು ಸಿಕ್ಕ ಸಿಕ್ಕ ಕಡೆ ಸುರಿದು ಹೋಯಿತು. ಪರಿಣಾಮ ಎದುರಿಸುತ್ತಿರುವುದು ಮಾತ್ರ ಹಳ್ಳಿಗಾಡು ಜನ. ಕನಿಷ್ಠ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ್ದರು ಇಂದು ಹಳ್ಳಿಗಾಡು ಜನಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ‌. ಆದರೂ ಕಾಲ ಮಿಂಚಿ ಹೋಗುವ ಮೊದಲು ಈಗಲಾದರೂ ಬಿಬಿಎಂಪಿ ಅಧಿಕಾರಿಗಳು ಬಿಂಗಿಪುರ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಹಳ್ಳಿ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.
Published by: Latha CG
First published: September 30, 2020, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading