ಬೆಂಗಳೂರು: ರಾಜಧಾನಿಯಲ್ಲಿ ಬೀದಿ ನಾಯಿಗಳ (Street Dog Attack) ದಾಳಿಗೆ ಬೇಸತ್ತು ಜನರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣಗಳು ಹಲವು ಇವೆ. ಬಿಬಿಎಂಪಿ ಸಹ ಬೀದಿ ನಾಯಿಗಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಪರಿಣಾಮಕಾರಿಯಾಗಿ ಫಲಕಾರಿ ನೀಡುತ್ತಿಲ್ಲ. ಕೆಲ ದಿನಗಳ ಹಿಂದೆ ತಂದೆ ಜೊತೆ ತೆರಳುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ (Dog Attack) ನಡೆಸಿತ್ತು. ಸುಮಾರು ದಿನಗಳ ಹಿಂದೆ ಕೋಳಿಗಳ ವಿರುದ್ಧ ಬೆಂಗಳೂರಿನ ಜನತೆ ದೂರು ದಾಖಲಿಸಿದ್ದಾರೆ. ಇದೀಗ ಬೆಕ್ಕುಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಬಿಬಿಎಂಪಿಗೆ (BBMP) ಮನವಿ ಮಾಡಿಕೊಂಡಿದ್ದಾರೆ. ನಾಯಿಗಳಂತೆ ಬೆಕ್ಕುಗಳಿಗೆ ಸಂತಾನಹರಣ ಚಿಕಿತ್ಸೆ (Sterilization) ನಡೆಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಬೆಂಗಳೂರಿನ ನ್ಯಾಯಾಂಗ ಬಡಾವಣೆಯ 5ನೇ ವಾರ್ಡ್ನಲ್ಲಿ ಬೆಕ್ಕುಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ಆರು ತಿಂಗಳಿಗೆ ಮರಿ ಹಾಕುತ್ತಿರುವ ಕಾರಣ ಬಡಾವಣೆಯಲ್ಲಿ ಬೆಕ್ಕುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಏರಿಯಾದಲ್ಲಿ ಚಿಕ್ಕ ಚಿಕ್ಕ ಮರಿಗಳಿಂದ ಹಿಡಿದು ದೊಡ್ಡ ಬೆಕ್ಕುಗಳು ಇವೆ. ಮನೆಗಳಲ್ಲಿ ಬಂದು ಸೇರಿಕೊಳ್ಳುವ ಬೆಕ್ಕುಗಳು ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ಇನ್ನು ಮನೆಗಳಿಗೆ ನುಗ್ಗುವ ಬೆಕ್ಕುಗಳು ಮರಿ ಹಾಕುತ್ತವೆ.
ಕೆಲವು ಬೆಕ್ಕುಗಳು ಮನೆಯೊಳಗೆ ನುಗ್ಗಿ ಗಲೀಜು ಮಾಡುತ್ತವೆ. ಸ್ವಲ್ಪ ನಿರ್ಲಕ್ಷ್ಯ ತೆಗೆದುಕೊಂಡರೆ ಅಡುಗೆಗೆ ಬಾಯಿ ಹಾಕುತ್ತವೆ. ಒಂದಿಷ್ಟು ಬೆಕ್ಕುಗಳು ಗೂಂಡಾಗಳಂತೆ ವರ್ತಿಸುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.
ಬಿಬಿಎಂಪಿ ಹೇಳಿದ್ದೇನು?
ಈ ಸಂಬಂಧ ಪಾಲಿಕೆಗೆ ಪತ್ರಗಳು ಬಂದಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಕೋಳಿ ಕೂಗೋದರಿಂದ ನಿದ್ದೆ ಬರ್ತಿಲ್ಲ
ಕೋಳಿ ಕೂಗುವುದರಿಂದ ನಮ್ಮ ನಿದ್ದೆ ಹಾಳಾಗುತ್ತಿದೆ. ಕೋಳಿಯಿಂದ ನಮಗೆ ನಿದ್ದೆಯೇ ಬರ್ತಿಲ್ಲ ಅಂತ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ (Bengaluru) ಜೆಪಿ ನಗರದ (JP Nagar) 8ನೇ ಹಂತದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಹೌದು, ಬೆಂಗಳೂರಿನ ಜೆಪಿ ನಗರದ 8ನೇ ಹಂತದ, ಆರ್ಯ ಹಂಸ ಗ್ರ್ಯಾಂಡ್ ಅಪಾರ್ಟ್ಮೆಂಟ್ ಪಕ್ಕ ಇರುವ ನಿವಾಸಿಯೊಬ್ಬರು ಕೋಳಿ ಹಾಗೂ ಬಾತುಕೋಳಿ ಸಾಕಾಣೆ ಮಾಡ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಟ್ವಿಟರ್ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ಸಾಮಾಜಿಕ ಜಾಲತಾಣ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಳಿ ಕೂಗುತ್ತಿರುವ ಕಾರಣ ಇಲ್ಲಿನ ಜನರಿಗೆ ನಿದ್ದೆ ಬರುತ್ತಿಲ್ಲ. ಇದರಿಂದ ಅಕ್ಕ ಪಕ್ಕದ ಜನರಿಗೆ ಹೆಚ್ಚು ಸಮಸ್ಯೆ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.
ಪೊಲೀಸ್ ಕಮಿಷನರ್ಗೆ ಮನವಿ
ಜೆಪಿ ನಗರದ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡಲಾಗುತ್ತಿದೆ. ಆದರೆ ಕೋಳಿಗಳು ಕೂಗುತ್ತಿರುವ ಕಾರಣ ಜನರಿಗೆ ನಿದ್ದೆ ಬರುತ್ತಿಲ್ಲವಂತೆ. ಮನೆಯಲ್ಲಿರುವ ಎರಡು ತಿಂಗಳ ಮಗು ಬೇಗ ನಿದ್ದೆಯಿಂದ ಎಚ್ಚರಗೊಳ್ಳುತ್ತಿದೆ.
ಕೋಳಿ ಕೂಗುವುದರಿಂದ ನಿದ್ದೆಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ವಿಟರ್ನಲ್ಲಿ ನಗರ ಪೊಲೀಸ್ ಕಮಿಷನರ್, ದಕ್ಷಿಣ ವಿಭಾಗ ಡಿಸಿಪಿಗೆ ಟ್ಯಾಗ್ ಮಾಡಿ ದೂರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೋಳಿ ಸಾಕುತ್ತಿರೋ ಮನೆ ಮಾಲೀಕ ಹೇಳಿದ್ದೇನು?
ಇನ್ನು, ಈ ಬಗ್ಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಮನೆ ಮಾಲೀಕ ರವಿ ಅವರು, ನಮ್ಮ ಮನೆಯಲ್ಲಿ ನಾವು ಕೋಳಿ ಸಾಕೋದಕ್ಕೂ ಅನುಮತಿ ತೆಗೆದುಕೊಳ್ಳಬೇಕಾ? ಈಗ ನಮ್ಮ ನಮ್ಮ ಮನೆಯಲ್ಲಿ 10 ಕೋಳಿ, ಟರ್ಕಿ ಹಾಗೂ ಬಾತುಕೋಳಿ ಇದೆ. ಆದರೆ ಅಪಾರ್ಟ್ಮೆಂಟ್ ನಿವಾಸಿಗಳು ಮಗುವಿಗೆ ನಿದ್ದೆ ಬರುತ್ತಿಲ್ಲ ಎಂದ ದೂರು ಕೊಟ್ಟಿದ್ದಾರೆ. ಹೀಗಾಗಿ ಪೊಲೀಸರು ಮನೆ ಬಳಿ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಕೋಳಿಯನ್ನು ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಅದಕ್ಕೆ ಈಗಾಗಲೇ ಟರ್ಕಿ ಕೋಳಿ ಎಲ್ಲವನ್ನು ನನ್ನ ಸ್ನೇಹಿತರಿಗೆ ಕೊಟ್ಟಿದ್ದೇನೆ. ಎಲ್ಲೆಲ್ಲಿಂದನೋ ಬರುತ್ತಾರೆ. ಇಲ್ಲಿ ಕೋಳಿ ಕೂಗಿದರೆ ಸಮಸ್ಯೆ ಅಂತ ಹೇಳುತ್ತಾರೆ ಏನು ಮಾಡೋಣಾ ಅಂತ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ