ಬಿಬಿಎಂಪಿ ಪೌರ ಕಾರ್ಮಿಕರಿಗೆ ಫ್ಲಾಟ್ ಭಾಗ್ಯ; ಮೊದಲ ಹಂತದಲ್ಲಿ 50 ಮಂದಿಗೆ ಹಂಚಿಕೆ

9 ಲಕ್ಷ ವೆಚ್ಚದ  ಫ್ಲಾಟ್​ಗಳ ನಿರ್ಮಾಣಕ್ಕೆ ಸರ್ಕಾರ ಹಾಗೂ ಬಿಬಿಎಂಪಿ ಪಾಲುದಾರಿಕೆ ಪಡೆದಿವೆ. ಸರ್ಕಾರ 6 ಲಕ್ಷ ಹಣ ನೀಡಿದರೆ ಬಿಬಿಎಂಪಿ 3 ಲಕ್ಷ ಹಣ ನೀಡಿ ಬಿಡಿಎ ಮೂಲಕ ಮನೆಗಳನ್ನು ನಿರ್ಮಾಣ ಮಾಡಿ ಪೌರ ಕಾರ್ಮಿಕರಿಗೆ ನೀಡುವ ವ್ಯವಸ್ಥೆ ಮಾಡಿದೆ.

ಪೌರ ಕಾರ್ಮಿಕರಿಗೆ ವಿತರಿಸುವ  ಫ್ಲಾಟ್​​ಗಳು

ಪೌರ ಕಾರ್ಮಿಕರಿಗೆ ವಿತರಿಸುವ ಫ್ಲಾಟ್​​ಗಳು

  • Share this:
ಬೆಂಗಳೂರು (ಫೆ.18) : ರಾಜ್ಯ ಸರ್ಕಾರದ ಸೂರು ಒದಗಿಸುವ ಯೋಜನೆ ಅಡಿಯಲ್ಲಿ ಬಿಬಿಎಂಪಿಯ ಪೌರ ಕಾರ್ಮಿಕರು ಫ್ಲಾಟ್ ಭಾಗ್ಯ ಪಡೆಯಲಿದ್ದಾರೆ. ಪೌರ ಕಾರ್ಮಿಕರಲ್ಲಿ ಸೂರಿಲ್ಲದ ಬಡವರನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯ ನೀಡಲಾಗುತ್ತದೆ. ಪೌರಾಡಳಿತ ಇಲಾಖೆ ರೂಪಿಸಿರುವ ಯೋಜನೆಯಂತೆ 250 ಪೌರ ಕಾರ್ಮಿಕರಿಗೆ 1 ಬಿಎಚ್‌ಕೆ ಫ್ಲಾಟ್​ ಸಿಗಲಿದೆ. ಇದರಲ್ಲಿ ಮೊದಲ ಹಂತವಾಗಿ 50 ಕಾರ್ಮಿಕರಿಗೆ ವಸತಿ ಸಿಗಲಿದೆ.

ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ಬಿಡಿಎ ವತಿಯಿಂದ ನಿರ್ಮಿಸಿರುವ ಲಕ್ಷಾಂತರ ಮೌಲ್ಯದ ಫ್ಲಾಟ್ಸ್ ಗಳನ್ನು ವಿತರಿಸಲು ಕಾರ್ಯಕ್ರಮ ನಿಗಧಿಯಾಗಿದೆ. ಸುಮಾರು 9 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲಾಟ್​ಗಳನ್ನು ಪೌರ ಕಾರ್ಮಿಕರಿಗೆ (ಖಾಯಂ ಪೌರ ಕಾರ್ಮಿಕರಿಗೆ) ನೀಡಲು ನಿರ್ಧರಿಸಲಾಗಿದ್ದು, ಪೌರ ಕಾರ್ಮಿಕರ ಬಹು ವರ್ಷಗಳ ಸೂರಿನ ಕನಸು ಈ ಮೂಲಕ ಈಡೇರಿದಂತಾಗುತ್ತಿದೆ.

ಅನೇಕ ವರ್ಷಗಳಿಂದ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿತ್ತು.  ಅವರಿಗೆ ಸಿಗಬೇಕಾದ ಯಾವುದೇ ಸವಲತ್ತನ್ನು ಕೊಟ್ಟಿರಲಿಲ್ಲ. ಇದರಿಂದಾಗಿ  ಪೌರ ಕಾರ್ಮಿಕರು ಹಾಳು ಬಿದ್ದ ಮನೆಗಳಲ್ಲಿ ವಾಸ ಮಾಡುವಂತಾಗಿತ್ತು. ಇನ್ನು ಪೌರ ಕಾರ್ಮಿಕ ಮುಖಂಡರು ಎನಿಸಿಕೊಂಡವರು ಮನೆಗಳನ್ನು ಕೊಡಿಸುವ ನೆಪದಲ್ಲಿ ಅವರಿಂದ ಹಣ ತೆಗೆದುಕೊಂಡು ಮೋಸ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇತ್ತು. ಇದೆಲ್ಲವನ್ನು ಮನಗಂಡ ಮೇಯರ್ ಹಾಗೂ  ಪಾಲಿಕೆ ಆಯುಕ್ತರು ಒಟ್ಟಾಗಿ ಸೇರಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಬಿಡಿಎ ಮೂಲಕ ಮನೆಗಳನ್ನು ನಿರ್ಮಿಸಿ, ಹಂಚುವ ನಿರ್ಧಾರಕ್ಕೆ ಬರಲಾಗಿತ್ತು.

9 ಲಕ್ಷ ವೆಚ್ಚದ  ಫ್ಲಾಟ್​ಗಳ ನಿರ್ಮಾಣಕ್ಕೆ ಸರ್ಕಾರ ಹಾಗೂ ಬಿಬಿಎಂಪಿ ಪಾಲುದಾರಿಕೆ ಪಡೆದಿವೆ. ಸರ್ಕಾರ 6 ಲಕ್ಷ ಹಣ ನೀಡಿದರೆ ಬಿಬಿಎಂಪಿ 3 ಲಕ್ಷ ಹಣ ನೀಡಿ ಬಿಡಿಎ ಮೂಲಕ ಮನೆಗಳನ್ನು ನಿರ್ಮಾಣ ಮಾಡಿ ಪೌರ ಕಾರ್ಮಿಕರಿಗೆ ನೀಡುವ ವ್ಯವಸ್ಥೆ ಮಾಡಿದೆ.

ಒಟ್ಟು 250 ಪೌರ ಕಾರ್ಮಿಕರಿಗೆ ಫ್ಲಾಟ್ಸ್ ನಿರ್ಮಾಣ ಮಾಡಲಾಗಿದ್ದು ಇಂದು ಮೊದಲ ಹಂತದಲ್ಲಿ 50 ಜನರಿಗೆ ಫ್ಲಾಟ್​ ಭಾಗ್ಯ ಲಭ್ಯವಾಗಲಿದೆ. ಸರ್ಕಾರ ಹಾಗೂ ಬಿಬಿಎಂಪಿಯ ಈ ಫ್ಲಾಟ್​​​ನಿಂದ ಪೌರ ಕಾರ್ಮಿಕರಿಗೆ ಮನೆ ಸಿಗುವ ಜತೆಗೆ ಬಿಕರಿಯಾಗದೆ ಉಳಿದಿರುವ ಬಿಡಿಎ ಫ್ಲಾಟ್​ಗಳ ಮಾರಾಟವೂ ನಡೆದಂತಾಗುತ್ತದೆ. ಬಿಡಿಎಗೆ ಈ ಯೋಜನೆಯಿಂದ ಒಂದಷ್ಟು ಕೋಟಿ ಲಾಭ ದೊರೆಯಲಿದ್ದು, ನಷ್ಟದ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ : KSRTC ಡ್ರೈವರ್-ಕಂಡಕ್ಟರ್​ಗಳ ಜೀವಕ್ಕೆ ಆಪತ್ತು; ಅಧ್ಯಯನದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ

ಫ್ಲಾಟ್​ಗಳಿಗೆ ಈಗಾಗಲೇ ಬೇಡಿಕೆ ಸೃಷ್ಟಿಯಾಗಿದೆ. ಶಿಫಾರಸ್ಸು-ರಾಜಕೀಯ ಒತ್ತಡದ ಮಾತು ಕೂಡ ಕೇಳಿಬರುತ್ತಿದೆ. ಇದರಿಂದಾಗಿ ಫ್ಲಾಟ್ಸ್ ಗಳ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮ-ಅವ್ಯವಹಾರ ಕಂಡು ಬರುವ ಆತಂಕವೂ ಇದೆ. ಆದರೆ, ಅರ್ಹರಿಗೆ ಈ ಮನೆಗಳು ಸಿಗಬೇಕು ಎನ್ನುವುದು ಮೇಯರ್ ಗೌತಮ್ ಅವರ ಅಭಿಲಾಷೆ. ಹಾಗಾಗಿ ಹಿರಿತನ ಪರಿಗಣಿಸಿ ಅವರಿಗೆ ಮನೆ ನೀಡಲು ನಿರ್ಧರಿಸಿ, ಇದರಲ್ಲಿ ಸಣ್ಣ ಪ್ರಮಾದ ಕಂಡು ಬಂದರೂ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೇವಲ ನಗರ ಸ್ವಚ್ಛತೆಗೆ ಸೀಮಿತವಾಗಿ ಎಲ್ಲಾ ಸವಲತ್ತುಗಳಿಂದ ವಂಚಿತವಾಗಿದ್ದ ಸ್ವಚ್ಛತಾ ಯೋಧರಿಗೆ ಕೊನೆಗೂ ಅವರ ಕನಸಿನ ಸ್ವಂತ ಸೂರು ದಕ್ಕುತ್ತಿದೆಯೆಲ್ಲಾ ಎನ್ನುವುದು ಸಮಾಧಾನದ ಸಂಗತಿ.
First published: