ಬೆಂಗಳೂರು (ಮೇ 20): ವಾರ್ಡ್ಗಳ ಮರು ವಿಂಗಡಣೆ ಹಾಗೂ ಒಬಿಸಿ ಮೀಸಲಾತಿ ಅಂತಿಮಗೊಳಿಸುವ ಕಾರ್ಯ ಪೂರ್ಣಗೊಂಡ ಕೂಡಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಚುನಾವಣೆ ಆಯೋಜಿಸುವಂತೆ ಸುಪ್ರೀಂ ಕೋರ್ಟ್ (Supreme Court) ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಚುನಾವಣೆಗೆ ಕೊನೆಗೂ ಕಾಲಮಿತಿ ನಿಗದಿಯಾಗಿದೆ. ಎರಡು ತಿಂಗಳೊಳಗೆ (8 ವಾರ) ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಸುಪ್ರೀಂಕೋರ್ಟ್ ತಿಳಿಸಿದೆ.
8 ವಾರಗಳೊಳಗೆ ಚುನಾವಣೆಗೆ ಸೂಚನೆ
ಸದ್ಯ 198 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ ಪರಿಣಾಮ ಚುನಾವಣೆ ವಿಳಂಬವಾಗಿತ್ತು. ಈ ನಡುವೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್ಗಳಿಗೆ 8 ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ 2020ರ ಡಿಸೆಂಬರ್ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಗೆ ಯಾವುದೇ ಸಬೂಬು ಹೇಳಬಾರದು. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು. ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೆ ಎರಡು ವಾರಗಳೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕು ಎಂದು ಈ ಹಿಂದೆ ಸೂಚನೆ ನೀಡಿತ್ತು.
ಇದನ್ನೂ ಓದಿ: Supreme Court: ಕರ್ನಾಟಕದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ರಪ್ತಿಗೆ ಸುಪ್ರೀಂ ಕೋರ್ಟ್ನಿಂದ ಗ್ರೀನ್ ಸಿಗ್ನಲ್
ಗೊಂದಲಕ್ಕೆ ತೆರೆ ಎಳೆದ ಕೋರ್ಟ್
ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ ನಂತರ ಕರ್ನಾಟಕ ರಾಜಕಾರಣದಲ್ಲಿಯೂ ಸಂಚಲನ ಮೂಡಿತ್ತು. ಒಂದೂವರೆ ವರ್ಷಗಳಿಂದ ಚುನಾವಣೆ ಬಾಕಿ ಇರುವ ಬಿಬಿಎಂಪಿಗೆ ಇನ್ನು ಎರಡು ವಾರದೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬಹುದು ಎಂದು ಈ ಹಿಂದೆಯೂ ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಈ ಮೊದಲು ತಡೆಯಾಜ್ಞೆ ನೀಡಿದ್ದ ಕಾರಣ, ಮಧ್ಯಪ್ರದೇಶದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಬಿಬಿಎಂಪಿಗೆ ಅನ್ವಯಿಸುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.
ಆದರೆ ಇದೀಗ ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದೆ. ಇನ್ನು 8 ವಾರಗಳ ಒಳಗೆ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡುವ ಮೂಲಕ ಹಿಂದಿನ ಎಲ್ಲ ಗೊಂದಲಗಳನ್ನೂ ಪರಿಹರಿಸಿದೆ.
ಹೈಕೋರ್ಟ್ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ
ಬಿಬಿಎಂಪಿಗೆ ಚುನಾವಣೆ ನಡೆಸುವ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಈ ಮೊದಲು ಪ್ರಶ್ನಿಸಿ ತಡೆಯಾಜ್ಞೆ ಪಡೆದುಕೊಂಡಿತ್ತು. ಈ ಪ್ರಕರಣವು ವಿಚಾರಣೆಗೆಂದು ಏಪ್ರಿಲ್ 25ರಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಖಾನ್ವಿಲ್ಕರ್ ಅವರಿದ್ದ ನ್ಯಾಯಪೀಠದ ಎದುರು ಬಂದಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ನಾನೇ ನೀಡಿದ್ದ ತೀರ್ಪನ್ನು ಮತ್ತೆ ನಾನೇ ಮರುಪರಿಶೀಲನೆ ಮಾಡಲು ಬರುವುದಿಲ್ಲ ಎಂದು ಓಕಾ ಅವರು ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಓಕಾ ಅವರು ಹಿಂದೆ ಸರಿದ ನಂತರ ಮತ್ತೊಂದು ನ್ಯಾಯಪೀಠಕ್ಕೆ ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯನ್ನು ವರ್ಗಾಯಿಸಲಾಯಿತು. ಮೇ 21ರಿಂದ ಸುಪ್ರೀಂಕೋರ್ಟ್ಗೆ ಬೇಸಿಗೆ ರಜೆ ಆರಂಭವಾಗುವ ಕಾರಣ, ರಜೆ ನಂತರ ಅಂದರೆ ಜೂನ್ 12ರ ನಂತರವೇ ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್ಡಿಕೆ ಪ್ರತ್ಯೇಕ ಭೇಟಿ
ಬಿಬಿಎಂಪಿ ಚುನಾವಣೆ ಅಧಿಸೂಚನೆಗೆ ಸೂಚನೆ
ಈ ನಡುವೆ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಮಧ್ಯಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಖಾಲಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ತೀರ್ಪು ನೀಡಿತ್ತು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ಈ ತೀರ್ಪು ಊರ್ಜಿತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬೇಸಿಗೆ ರಜೆಗೆ ಒಂದು ದಿನ ಮೊದಲು ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕಾರಣ ಇಂದು ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಸ್ಪಷ್ಟನಿಲುವು ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ