ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ; ಹಬ್ಬ ಸೇರಿ ಎಲ್ಲಾ ಸರ್ಕಾರಿ ರಜೆಗಳನ್ನು ನೀಡಲು ತೀರ್ಮಾನ

ಒಟ್ಟಾರೆಯಾಗಿ ರಜೆಗಳಿಲ್ಲದೆ ಕೆಲಸ ಮಾಡ್ತಿದ್ದ ಪೌರಕಾರ್ಮಿಕರಿಗೆ ಈಗ ಬಿಬಿಎಂಪಿ ಗುಡ್ ನ್ಯೂಸ್  ಕೊಡೋಕೆ ಮುಂದಾಗಿದೆ. ಆದ್ರೆ ಪೌರಕಾರ್ಮಿಕರ ಸಂಘದ ನಾಯಕರು ಜಾರಿಗೆ ಬಂದ್ಮೇಲೆ ಸಿಕ್ತು ಅಂತ ಹೇಳ್ಬಹುದು ಅಂತ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಬಿಬಿಎಂಪಿ

ಬಿಬಿಎಂಪಿ

 • Share this:
  ಬೆಂಗಳೂರು; ಬೆಂಗಳೂರು ಎಚ್ಚರಗೊಳ್ಳುವ ಮುನ್ನವೇ ಬೀದಿ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಬಿಬಿಎಂಪಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಸಿಗ್ತಿದೆ ಸಿಹಿ ಸುದ್ದಿ. ಗಾರ್ಡನ್ ಸಿಟಿ ಬೆಂಗಳೂರನ್ನು ಸ್ವಚ್ಛವಾಗಿರಿಸುವಲ್ಲಿ ಈ ಪೌರಕಾರ್ಮಿಕರದ್ದು ಸಿಂಹಪಾಲು. ಇನ್ನೂ ಬೆಂಗಳೂರು ನಿದ್ದೆಯಿಂದ ಎದ್ದಿರುವುದಿಲ್ಲ. ಅದಕ್ಕೂ ಮೊದಲೇ ಎದ್ದು ಬೆಂಗಳೂರನ್ನು ಸ್ವಚ್ಛ ಮಾಡೋ ಕಾಯದಲ್ಲಿರುತ್ತಾರೆ. ಅಂಥಾ ಪೌರಕಾರ್ಮಿಕರಿಗೆ ಈಗ ಬಿಬಿಎಂಪಿ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಪೌರಕಾರ್ಮಿಕರಿಗೆ ಈವರೆಗೆ ವಾರದಲ್ಲೊಂದು ರಜೆ ಮಾತ್ರ. ಅದರ ಹೊರತಾಗಿ ಎಲ್ಲಾ ಹಬ್ಬ ಹರಿದಿನಗಳಲ್ಲೂ ಪೌರಕಾರ್ಮಿಕರು ಕೆಲಸ ಮಾಡ್ಬೇಕಿತ್ತು. ಆದರೆ ಈಗಎಲ್ಲಾ ರಾಷ್ಟ್ರೀಯ ರಜೆಗಳನ್ನು ಸರ್ಕಾರಿ ನೌಕರರಿಗೆ ಕೊಡುವ ರೀತಿಯಲ್ಲಿ ಪೌರಕಾರ್ಮಿಕರಿಗೂ ಕೊಡೋಕೆ ಮುಂದಾಗಿದೆ ಬಿಬಿಎಂಪಿ.

  ಬುಧವಾರ ಅರ್ಧ ದಿನ ಹಾಗೂ ಭಾನುವಾರ ಅರ್ಧ ದಿನ ಸೇರಿಸಿ ವಾರಕ್ಕೆ ಒಂದು ದಿನ ರಜೆ ಈವರೆಗೆ ಪೌರಕಾರ್ಮಿಕರಿಗೆ ಸಿಗುತ್ತಿತ್ತು. ಹೀಗಾಗಿ ಹಬ್ಬಗಳು ಬಂತಂದ್ರೆ ಪೌರಕಾರ್ಮಿಕರ ಗೋಳು ಕೇಳೋರೇ ಇರ್ತಿರ್ಲಿಲ್ಲ. ಈ ಬಗ್ಗೆ ಹಲವು ಸಭೆಗಳು ಹಾಗೂ ಧರಣಿಗಳನ್ನು ಪೌರಕಾರ್ಮಿಕರು ಮಾಡಿದ್ದಾರೆ. ಈ ಹಿನ್ನೆಲೆ ಕಾರ್ಮಿಕ‌ ಇಲಾಖೆಯ ಸಲಹೆಯ ಮೇರೆಗೆ ಬಿಬಿಎಂಪಿ ವರ್ಷದಲ್ಲಿ ಬರುವ ಎಲ್ಲಾ ಹಬ್ಬಗಳಿಗೆ ಮೀಸಲಿರುವ ಸರ್ಕಾರಿ ರಜೆಗಳನ್ನು ನೀಡಲು ಮುಂದಾಗಿದೆ.

  ಈ ಬಗ್ಗೆ ಮಾತನಾಡಿದ ಪೌರಕಾರ್ಮಿಕರು, ಆದಷ್ಟು ಬೇಗ ಈ ನಿರ್ಧಾರ ಆಗಲಿ. ನಮಗೆ ರಜೆ ಇಲ್ಲದೆ ನಾವು ರೋಸಿ ಹೋಗಿದ್ದೇವೆ. ಹಬ್ಬದ ದಿನದಂದೂ ಬಂದು ಕೆಲಸ ಮಾಡುತ್ತೇವೆ. ಅಕ್ಕಪಕ್ಕದ ಮನೆಯಲ್ಲಿ ಹಬ್ಬ ಆಚರಿಸುವಾಗ ನಮ್ಮ ಮಕ್ಕಳು ಕಣ್ಣೀರು ಹಾಕ್ತಾ ಮನೆಯಲ್ಲೇ ಸುಮ್ಮನೆ ಕೂತಿರುತ್ತಾರೆ. ಹಗಲು ರಾತ್ರಿ ದುಡಿತೀವಿ. ಆದ್ರೆ ನಮ್ಮ ದುಡಿಮೆಗೆ ತಕ್ಕ ಸಂಬಳ ಸಿಗ್ತಿಲ್ಲ. ಸಿಗೋ ಸಂಬಳ ಎಲ್ಲಿಗೂ ಸಾಕಾಗಲ್ಲ ಅಂತ ಪೌರಕಾರ್ಮಿಕರ ಮಹಿಳೆಯೊಬ್ಬರು ಕಣ್ಣೀರಿಡುತ್ತಾ‌ ನ್ಯೂಸ್ 18 ಕನ್ನಡ ಜತೆಗೆ ಮಾತನಾಡಿದರು.

  ಇದನ್ನು ಓದಿ: ಸಚಿವ ಸುಧಾಕರ್ ನಿವಾಸದಲ್ಲಿ ವಲಸಿಗರ ಸಭೆಯಲ್ಲಿ ಆಹಾರ ಖಾತೆ ಬದಲಾವಣೆಗೆ ಕಣ್ಣೀರಿಟ್ಟ ಸಚಿವ ಗೋಪಾಲಯ್ಯ

  ಆದರೆ ಬಿಬಿಎಂಪಿ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಪೌರಕಾರ್ಮಿಕರ ಸಂಘಟನೆಗಳಿಗೆ ಅಷ್ಟೊಂದೇನು ಖುಷಿ ತಂದಿಲ್ಲ. ಇವೆಲ್ಲಾ ಇವರ ನಾಟಕಗಳು. ಹೀಗೆ ಹಲವು ಆಶ್ವಾಸನೆ ನೀಡಿ ಕೈಚೆಲ್ಲಿದ್ದಾರೆ. ಈ ನಿರ್ಧಾರ ಜಾರಿಗೆ ಬಂದ ಮೇಲೆ ನೋಡೋಣ ಅಂತ ಪೌರಕಾರ್ಮಿಕರ ಸಂಘದ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಆಂಜನೇಯುಲು ಕಿಡಿ‌ಕಾರಿದ್ದಾರೆ. ಕೇವಲ‌ ರಜೆ ಮಾತ್ರವಲ್ಲ, ನಮ್ಮ ಪೌರಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ಸಿಗುವ ಅಲ್ಪ ಸ್ಬಲ್ಪ ಸಂಬಳದಲ್ಲಿ ಅದಕ್ಕಿಷ್ಟು, ಇದಕ್ಕಿಷ್ಟು ಅಂತ ಕಡಿತ ಮಾಡುತ್ತಿದ್ದಾರೆ. ಮಹಿಳಾ ಪೌರಕಾರ್ಮಿಕರಿಗೆ ಸರಿಯಾದ ಶೌಚಾಲಯಗಳಿಲ್ಲ. ಹೀಗೆ ನೂರೆಂಟು ಸಮಸ್ಯೆಗಳಿದ್ದಾವೆ. ಆದರೆ ಅದ್ಯಾವುದಕ್ಕೂ ಪಾಲಿಕೆ ತಲೆ ಕೆಡಿಸಿಕೊಂಡಿಲ್ಲ ಅಂತ ಆಂಜನೇಯುಲು ಅಸಮಾಧಾನ ಹೊರ ಹಾಕಿದರು.

  ಇನ್ನು ಈಗ ರಾಷ್ಟ್ರೀಯ ರಜೆಗಳನ್ನು ಕೊಡೋಕೆ ಮುಂದಾಗುವುದರ ಜೊತೆಗೆ ಶೇ16. ರಷ್ಟು ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿಯನ್ನೂ ಮಾಡಲು ಬಿಬಿಎಂಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಯಾಕಂದ್ರೆ ಎಲ್ಲರೂ ರಜೆ ತೆಗೆದುಕೊಂಡು ಬಿಟ್ಟರೆ ಪೌರಕಾರ್ಮಿಕರ ‌ಕೊರತೆ ಎದುರಾಹಬಹುದು. ಈ ನಿಟ್ಟಿನಲ್ಲಿ ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿ ನಡೆಯಲಿದೆ. ಸದ್ಯ 17 ಸಾವಿರಕ್ಕೂ ಅಧಿಕ ಪೌರಕಾರ್ಮಿಕರ ಸಿಬ್ಬಂದಿಗಳಿದ್ದಾರೆ. ಒಟ್ಟಾರೆಯಾಗಿ ರಜೆಗಳಿಲ್ಲದೆ ಕೆಲಸ ಮಾಡ್ತಿದ್ದ ಪೌರಕಾರ್ಮಿಕರಿಗೆ ಈಗ ಬಿಬಿಎಂಪಿ ಗುಡ್ ನ್ಯೂಸ್  ಕೊಡೋಕೆ ಮುಂದಾಗಿದೆ. ಆದ್ರೆ ಪೌರಕಾರ್ಮಿಕರ ಸಂಘದ ನಾಯಕರು ಜಾರಿಗೆ ಬಂದ್ಮೇಲೆ ಸಿಕ್ತು ಅಂತ ಹೇಳ್ಬಹುದು ಅಂತ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

  ವರದಿ- ಆಶಿಕ್ ಮುಲ್ಕಿ‌
  Published by:HR Ramesh
  First published: