ಬೆಂಗಳೂರು(ಜೂ.04): ಮಳೆಗಾಲ (Monsoon) ಆರಂಭವಾಗುತ್ತಿದ್ದಂತೆ ಎಲ್ಲೆಡೆ ರಸ್ತೆಗುಂಡಿಗಳನ್ನು (Potholes) ಮುಚ್ಚುವ ಕೆಲಸ ಭರದಿಂದ ನಡೆಯುತ್ತಿದೆ. ರಸ್ತೆ ಗುಂಡಿಗಳಿಂದ ಆಗುವ ಅಪಘಾತಗಳು (Accident) ವಿಪರೀತ. ಇನ್ನು ಮಳೆಗಾ ಬಂದರಂತೂ ಹೇಳುವುದೇ ಬೇಡ, ವಾಹನ ಸವಾರರ ಪಾಡು ಯಾರಿಗೂ ಬೇಡ. ಹೀಗಿರುವ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸ ಭರದಿಂದ ನಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೌಡಯ್ಯ ರಸ್ತೆ(ಸ್ಯಾಂಕಿ ಟ್ಯಾಂಕ್) ಪರಿಶೀಲನೆ:
ಪಶ್ಚಿಮ ವಲಯ ವ್ಯಾಪ್ತಿಯ ಕಾವೇರಿ ಚಿತ್ರಮಂದಿರ ಜಂಕ್ಷನ್ ಬಳಿಯಿಂದ ಚೌಡಯ್ಯ ರಸ್ತೆ(ಸ್ಯಾಂಕಿ ಟ್ಯಾಂಕ್)ಯಲ್ಲಿ ರಸ್ತೆ ಕತ್ತರಿಸುವಿಕೆ ಭಾಗಕ್ಕೆ ಡಾಂಬರೀಕರಣ ಹಾಕಲಾಗುತ್ತಿದ್ದು, ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಗುಣಮಟ್ಟವಾಗಿ ಡಾಂಬರೀಕರಣ ಮಾಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟಿವಿಎಸ್ ರಸ್ತೆ ಪರಿಶೀಲನೆ:
ದಾಸರಹಳ್ಳಿ ವಲಯ ಜಾಲಹಳ್ಳಿ ರಸ್ತೆಯಿಂದ ಕಂಠೀರವ ಸ್ಟುಡಿಯೋ ಕಡೆ ಹೋಗುವ ಟಿ.ವಿ.ಎಸ್ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಡೆಯುತ್ತಿದ್ದು, ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಗುರುತಿಸಿರುವ ರಸ್ತೆಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೀಣ್ಯ ಒಳ ವರ್ತುಲ ರಸ್ತೆ ಪರಿಶೀಲನೆ:
ಆರ್.ಆರ್.ನಗರ ವಲಯ ವ್ಯಾಪ್ತಿಯ ಪೀಣ್ಯ ಒಳ ವರ್ತುಲ ರಸ್ತೆ ರಾಜ್ ಕುಮಾರ್ ಸಮಾದಿ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ಮಾಡಿದ ವೇಳೆ ಬೆಸ್ಕಾಂ ವಿದ್ಯುತ್ ತಂತಿ ನೆಲದಡಿ ಅಳವಡಿಸಿರುವ ಪೈಪ್ ಹಾಗೂ ಜಲಮಂಡಳಿ ವತಿಯಿಂದ ಮಾಡಿರುವ ಒಳ ಚರಂಡಿ ಕಾರ್ಯವು ಅವೈಜ್ಞಾನಿಕವಾಗಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ. ಈ ಸಂಬಂಧ ಸಂಬಂಧ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂಠೀರವ ಸ್ಟುಡಿಯೋ ರಸ್ತೆ ಪರಿಶೀಲನೆ:
ಪಶ್ಚಿಮ ವಲಯ ವ್ಯಾಪ್ತಿಯ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ವೇಳೆ, ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಮಾಡಿರುವ ಒಳಚರಂಡಿಗಳ ಚೇಂಬರ್ ಪಾಯಿಂಟ್ ಬಳಿ ರಸ್ತೆ ಮಟ್ಟಕ್ಕಿಂತ ಎತ್ತರಕ್ಕೆ ಎತ್ತರಿಸದಂತೆ ಅಧಿಕಾರಿಗಳು ನೋಡಿಕೊಳ್ಳಲು ಸೂಚಿಸಿದರು.
ಇದನ್ನೂ ಓದಿ: Karnataka Text Book Row: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿದ ಸರ್ಕಾರ
ಜಯಮಹಲ್ ರಸ್ತೆ ಅಭಿವೃದ್ಧಿ ಕಾರ್ಯ ಪರಿಶೀಲನೆ:
ಪೂರ್ವ ವಲಯ ವ್ಯಾಪ್ತಿಯ 2.3 ಕಿ.ಮೀ ಉದ್ದದ ಜಯಮಹಲ್ ರಸ್ತೆ(ಮೇಕ್ರಿ ವೃತ್ತದಿಂದ ಜಯಮಹಲ್ ಪ್ಯಾಲೆಸ್ ಹೋಟೆಲ್ ವರೆಗೆ)ಯ ಸಂಪೂರ್ಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ Motorable Road ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸದರಿ ರಸ್ತೆಯಲ್ಲಿ ಹೆಚ್ಚು ಸಂಚಾರದಟ್ಟಣೆಯಿರುವ ಕಾರಣ ಹಂತ-ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಅದರಂತೆ ಮೊದಲನೇ ಹಂತದಲ್ಲಿ ಮೇಕ್ರಿ ವೃತ್ತದಿಂದ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆಯವರೆಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ಅದಾದ ಬಳಿಕ ಮತ್ತೊಂದು ಹಂತದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸೇರಿದಂತೆ ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ: Hassan: ಪ್ರಶಾಂತ್ ನಾಗರಾಜ್ ಹತ್ಯೆ: ಐಜಿಪಿ ಹೇಳಿದ್ದೇನು? ಇತ್ತ ಪ್ರೀತಂಗೌಡ, ಗೋಪಾಲಯ್ಯ ಸುದ್ದಿಗೋಷ್ಠಿ
ಈ ವೇಳೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ರಸ್ತೆ ಅಭಿವೃದ್ಧಿ ಕಾರ್ಯ ಮಾಡುವ ವೇಳೆ ರಸ್ತೆ ಮೇಲೆ ಮಳೆ ನೀರು ನಿಲ್ಲದಂತೆ ಸರಾಗವಾಗಿ ಶೋಲ್ಡರ್ ಡ್ರೈನ್ ಮೂಲಕ ಚರಂಡಿಗೆ ನೀರು ಹರಿದು ಹೋಗುವಂತೆ ಮಾಡಬೇಕು. ಅಲ್ಲದೆ ವಾಹನ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಭಿವೃದ್ಧಿ ಕಾರ್ಯ ನಡೆಸಲು ಸೂಚಿಸಿದರು.ಈ ವೇಳೆ ವಲಯ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರುಗಳು, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಾದ ಪ್ರಹ್ಲಾದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ