ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) 2023ನೇ ಸಾಲಿನ ಬಜೆಟ್ (BBMP Budget) ಮಂಡನೆಯಾಗಿದೆ. ಬರೋಬ್ಬರಿ 11,158 ಕೋಟಿ ರೂಪಾಯಿಯ ಬೃಹತ್ ಆಯವ್ಯಯ ಇಂದು ಮಂಡನೆಯಾಗಿದೆ. ಸದ್ಯ ಬಿಬಿಎಂಪಿಗೆ ಇನ್ನೂ ಚುನಾವಣೆ (Election) ಆಗದ ಹಿನ್ನೆಲೆಯಲ್ಲಿ ಮೇಯರ್ (BBMP Mayor) ಇಲ್ಲದ ಹಿನ್ನೆಲೆಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಅವರೇ ಇಂದು ಬಜೆಟ್ ಮಂಡಿಸಿದ್ರು. ಬೆಳಗ್ಗೆ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ ಅಥವಾ ಟೌನ್ ಹಾಲ್‌ನಲ್ಲಿ (Town Hall) ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಉಪಸ್ಥಿತಿಯಲ್ಲಿ ಜಯರಾಮ್ ರಾಯಪುರ ಅವರು 11,158 ಕೋಟಿ ರೂಪಾಯಿ ಗಾತ್ರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸಿದ್ದಾರೆ.
11,158 ಕೋಟಿ ರೂಪಾಯಿ ಗಾತ್ರದ ‘ಬೃಹತ್’ ಬಜೆಟ್
ಇಂದು ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. ಈ ಬಾರಿ 11,158 ಕೋಟಿ ರೂಪಾಯಿ ಗಾತ್ರದ ‘ಬೃಹತ್’ ಬಜೆಟ್ ಅನ್ನು ಮಂಡಿಸಲಾಗಿದೆ. ಬಿಬಿಎಂಪಿ ಕಳೆದ ವರ್ಷದ ಒಟ್ಟು 10,585 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿತ್ತು. ಇದೀಗ ಬಜೆಟ್ ಗಾತ್ರ ಏರಿಕೆಯಾಗಿದ್ದು, 2023-24ನೇ ಸಾಲಿನಲ್ಲಿ 11,158 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದೆ.
ಕ್ಷೇತ್ರಗಳು | ಅನುದಾನ (ಕೋಟಿ ರೂಪಾಯಿಗಳಲ್ಲಿ) |
ಬಜೆಟ್ ಗಾತ್ರ | 11,157 |
ಸಾರ್ವಜನಿಕ ಕಾಮಗಾರಿಗಳು | 7103 |
ಘನ ತ್ಯಾಜ್ಯ ನಿರ್ವಹಣೆ | 1,643 |
ಸಾಮಾನ್ಯ ಆಡಳಿತ ವೆಚ್ಚಗಳು | 602 |
ಕಂದಾಯ | 524 |
ಸಮಾಜ ಕಲ್ಯಾಣ | 513 |
ಸಾರ್ವಜನಿಕ ಆರೋಗ್ಯ | 241 |
ಶಿಕ್ಷಣ | 152 |
ಆರೋಗ್ಯ -ವೈದ್ಯಕೀಯ | 103 |
ಇನ್ನು ಪ್ರತಿ ವಾರ್ಡ್ ಗೆ ಹೂಳೆತ್ತುವ ಕಾಮಗಾರಿಗೆ 30 ಲಕ್ಷ ರೂಪಾಯಿ, ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ 15 ಲಕ್ಷ ರೂಪಾಯಿ, ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗೆ 25 ಲಕ್ಷ ರೂ. ಇಡಲಾಗಿದೆ. ಇನ್ನು ಮುಂಗಾರು ಸಮಯದ ನಿರ್ವಹಣೆಗೆ 5 ಲಕ್ಷ ರೂಪಾಯಿ ಬೀದಿ ದೀಪಗಳ ನಿರ್ವಹಣೆಗೆ 38 ಕೋಟಿ ರೂಪಾಯಿ, ಕೆರೆಗಳ ನಿರ್ವಹಣೆಗೆ 35 ಕೋಟಿ ರೂಪಾಯಿ, ಭೂಸ್ವಾಧೀನ ಪುಕ್ರಿಯೆಗೆ 100 ಕೋಟಿ ರೂಪಾಯಿ ಇಡಲಾಗಿದೆ. ಇನ್ನು ಮುಖ್ಯವಾಗಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ 10 ಕೋಟಿ ರೂಪಾಯಿ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗೆ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಆದಾಯದ ಮೂಲಗಳೇನು?
ತೆರಿಗೆ | 4,412 ಕೋಟಿ ರೂಪಾಯಿ | 40% |
ತೆರಿಗೆಯೇತರ ಆದಾಯ | 1,331 ಕೋಟಿ ರೂಪಾಯಿ | 12% |
ಕೇಂದ್ರ ಸರ್ಕಾರದ ಅನುದಾನ | 461 ಕೋಟಿ ರೂಪಾಯಿ | 4% |
ರಾಜ್ಯ ಸರ್ಕಾರದ ಅನುದಾನ | 3,632 ಕೋಟಿ ರೂಪಾಯಿ | 33% |
ಅಸಾಧಾರಣ ಆದಾಯ | 800 ಕೋಟಿ ರೂಪಾಯಿ | 8% |
ಚಾಲ್ತಿ ಹೊಣೆಗಾರಿಕೆಗಳು | 520 ಕೋಟಿ ರೂಪಾಯಿ | 5% |
ಒಟ್ಟು | 11,15,845.00 | |
ಇನ್ನು ಈ ಬಾರಿಯ ಬಿಬಿಎಂಪಿ ಬಜೆಟ್‌ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಜನಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳಿಂದಲೇ ಮಂಡನೆಯಾದ 3ನೇ ಬಿಬಿಎಂಪಿ ಬಜೆಟ್ ಇದು. ಜನಪ್ರತಿನಿಧಿಗಳಿಲ್ಲದೆ, ಜನರ ಅಗತ್ಯಗಳನ್ನು ಅರಿಯದೆ ಮಂಡಿಸಿರುವ BBMP ಬಜೆಟ್ ಕೇವಲ ಅಧಿಕಾರಿಗಳು & ಕೆಲ ಮಂತ್ರಿಗಳ ಹಿತಾಸಕ್ತಿಗಾಗಿ, 50% ಕಮಿಷನ್ ಲೂಟಿಗಾಗಿ ಹೊರತು ಜನರಿಗೆ ನಯಾಪೈಸೆ ಪ್ರಯೋಜನವಿಲ್ಲ. ಇದು ಬಜೆಟ್ ಅಲ್ಲ, ಬಿಜೆಪಿಯ ಚುನಾವಣೆ ಫಂಡ್!” ಅಂತ ಟ್ವೀಟ್ ಮೂಲಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ