ಬೆಂಗಳೂರು(ಡಿ. 10): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ವಾರ್ಡ್ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸುವ ಬಿಬಿಎಂಪಿ ವಿಧೇಯಕ 2020ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಗೋಹತ್ಯೆ ನಿಷೇಧ ವಿಧೇಯಕವನ್ನು ಆಕ್ಷೇಪಿಸಿ ಇಂದಿನ ಕಲಾಪ ಬಹಿಷ್ಕರಿಸಿದ್ದ ಕಾಂಗ್ರೆಸ್ ಸದಸ್ಯರ ಗೈರಿನಲ್ಲಿ ಸರ್ಕಾರ ಬಿಬಿಎಂಪಿ ವಿಧೇಯಕ ಮಂಡನೆ ಮಾಡಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು. ಸದನದಲ್ಲಿ ಗೈರಾಗಿದ್ದರೂ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ. ಬಿಬಿಎಂಪಿ ವಿಧೇಯಕದ ಜಂಟಿ ಪರಿಶೀಲನಾ ಸಮಿತಿ ಸದಸ್ಯರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರು ಸಮಿತಿ ಅಧ್ಯಕ್ಷರಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆ.
ಶಾಸಕ ಸಿ. ರಘು ಅಧ್ಯಕ್ಷತೆಯ ಜಂಟಿ ಸದನ ಸಮಿತಿ ಕೊಟ್ಟಿರುವ ವರದಿಯ ಮೇಲೆ ಬಿಬಿಎಂಪಿ ವಿಧೇಯಕವನ್ನು ಸಿದ್ಧಪಡಿಸಲಾಗಿದೆ. ಆದರೆ, ಈ ವಿಧೇಯಕದಲ್ಲಿ ಹಲವು ಅಂಶಗಳು ಇಲ್ಲ. ತರಾತುರಿಯಲ್ಲಿ ವಿಧೇಯಕ ತರಲಾಗುತ್ತಿದೆ. ವಿಧೇಯಕವನ್ನು ಪರಾಮರ್ಶೆಗೆ ಒಳಪಡಿಸಿ ತಜ್ಞರ ಅಭಿಪ್ರಾಯ ಪಡೆದು ವಿಕೇಂದ್ರೀಕರಣಕ್ಕೆ ಪೂರಕವಾದ ವಿಧೇಯಕ ಸಿದ್ಧಪಡಿಸಿ ಎಂದು ಈ ಪತ್ರದಲ್ಲಿ ಆಗ್ರಹಿಸಲಾಗಿದೆ.
ಕಳೆದ ಬಾರಿಯ ಅಧಿವೇಶನದಲ್ಲಿ ವಿಧೇಯಕದ ಮಂಡನೆಯಾಗಿತ್ತು. ಇವತ್ತು ವಿಧಾನಸಭಾ ಕಲಾಪದಲ್ಲಿ ವಿಧೇಯಕದ ಮೇಲೆ ಚರ್ಚೆ ನಡೆಯಿತು. ಕಾನೂನು ಸಚಿವ ಮಾಧು ಸ್ವಾಮಿ, ಅರವಿಂದ್ ಲಿಂಬಾವಳಿ, ಮುನಿರತ್ನ ಅವರು ವಿಧೇಯಕದ ಬಗ್ಗೆ ಮಾತನಾಡಿದರು.
ನಾಮಕರಣಗೊಂಡ ಪರಿಷತ್ ಸದಸ್ಯರಿಗೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನದ ಅವಕಾಶ ಬೇಡ. ವಿಳಾಸ ಬದಲಾವಣೆ ಮಾಡಿಕೊಂಡು ಮತದಾನ ಹಾಕುವುದಕ್ಕೆ ಕಡಿವಾಣ ಹಾಕಬೇಕು. ಕ್ಷೇತ್ರದ ವಾರ್ಡ್ ಸಮಿತಿಗಳಲ್ಲಿ ಶಾಸಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಅರವಿಂದ್ ಲಿಂಬಾವಳಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಾರ್ಹ; ಆದರೆ 10 ವರ್ಷ ಶಿಕ್ಷೆ ಇರಬೇಕಿತ್ತು: ಪ್ರಮೋದ್ ಮುತಾಲಿಕ್
ಪ್ರಸ್ತುತ ಸನ್ನಿವೇಶಕ್ಕೆ ಈ ವಿಧೇಯಕ ಅಗತ್ಯ ಎಂದು ಪ್ರತಿಪಾದಿಸಿದ ಆರ್.ಆರ್. ನಗರ ಶಾಸಕ ಮುನಿರತ್ನ, ಪಶ್ಚಿಮ ಬೆಂಗಳೂರು ವಾರ್ಡ್ಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರತಿ ವಾರ್ಡ್ಗಳಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕವಾಗಬೇಕು. ವಿಧೇಯಕದ ಪ್ರಕಾರ ವಾರ್ಡ್ ಹೆಚ್ಚಳ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವಿಧಾನಸಭೆಯಲ್ಲಿ ಅನುಮೋದನೆಯಾದ ಈ ವಿಧೇಯಕ ಈಗ ವಿಧಾನಪರಿಷತ್ನಲ್ಲಿ ಪಾಸ್ ಆಗಬೇಕಿದೆ. ಇದೇ ವೇಳೆ, ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ಚುನಾವಣೆ ನಡೆಯಬೇಕಿದೆ. ಸದ್ಯದಲ್ಲೇ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಈಗ ಇರುವ 198 ವಾರ್ಡ್ಗಳಿಗೆ ಚುನಾವಣೆ ಘೋಷಿಸುವ ನಿರೀಕ್ಷೆ ಇದೆ. ಆದರೆ, ವಾರ್ಡ್ ಸಂಖ್ಯೆ 243ಕ್ಕೆ ಏರಿಸುತ್ತಿರುವ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ.
ವರದಿ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ