ಬಾಗಲಕೋಟೆ (ಜ,22) : ಬಾಗಲಕೋಟೆ ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ ವೇಳೆ ಡಿಸಿಎಂ ಗೋವಿಂದ ಕಾರಜೋಳರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿ 2017-18ರಲ್ಲಿ ಬಿಡುಗಡೆಯಾದ 4.65ಕೋಟಿ ವೆಚ್ಚದಲ್ಲಿ ಹೈಟೆಕ್ ನೂತನ ಸಭಾಂಗಣ ನಿರ್ಮಿಸಲಾಗಿದೆ. ಈ ಹಿಂದೆ ಅಂದರೆ 2018ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಪಕ್ಷಾತೀತವಾಗಿ ಅಂದಿನ ಸರ್ಕಾರಕ್ಕೆ ನೂತನ ಸಭಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಆಗ ಸರ್ಕಾರ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿತ್ತು. ಇದೀಗ ನೂತನ ಸಭಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಹಗ್ಗಾಜಗ್ಗಾಟ ನಡೆದಿದೆ.
ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಫುಲ್ ಗರಂ, ಸವಾಲು!
ನೂತನ ಜಿಲ್ಲಾ ಪಂಚಾಯತ್ ಸಭಾಂಗಣ ಉದ್ಘಾಟನೆಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಶಾಸಕ ವೀರಣ್ಣ ಚರಂತಿಮಠ ಆಗಮಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಡಿಸಿಎಂ ಗೋವಿಂದ ಕಾರಜೋಳ, ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.ಇದೇ ವೇಳೆ ಆಗಮಿಸಿದ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಅಸಮಾಧಾನ ಹೊರಹಾಕಿದರು.ಆಗ ಸ್ವತಃ ಡಿಸಿಎಂ ಗೋವಿಂದ ಕಾರಜೋಳ ಹೂಗುಚ್ಛ ನೀಡಿ, ಸ್ವಾಗತಿಸಲು ಮುಂದಾದರು. ಆದರೆ ಬಾಯಕ್ಕ ಮೇಟಿ ಹೂಗುಚ್ಛ ಸ್ವೀಕರಿಸದೇ ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಫುಲ್ ಗರಂ ಆಗಿ, ನಿಮ್ಮ ಸರ್ಕಾರವಿದೆ ಎಂದು ಹೀಗೆ ಮಾಡುವುದು ಸರಿನಾ, ನಮ್ಮ ಸಾಹೇಬರು ಸಿದ್ದರಾಮಯ್ಯರಿಗೆ ಹೇಳಿದ್ದೀವಿ .ಕಿರಿಕಿರಿ ಮಾಡುವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹರಿಹಾಯ್ದಿದರು.
ಈ ವೇಳೆ ಶಾಸಕ ವೀರಣ್ಣ ಚರಂತಿಮಠ ಸಮಾಧಾನ ಮಾಡಲು ಯತ್ನಿಸಿದರೂ ಸುಮ್ಮನಾಗದ ಬಾಯಕ್ಕ ಮೇಟಿ ಹಾಗೂ ಕಾಂಗ್ರೆಸ್ ಜಿಪಂ ಮಹಿಳಾ ಸದಸ್ಯೆಯರು ಒಟ್ಟಾಗಿ, ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರು ಪಕ್ಷಾತೀತವಾಗಿ ನೂತನ ಸಭಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಿದ್ದರಾಮಯ್ಯ ಸೇರಿದಂತೆ ನಮ್ಮ ನಾಯಕರು ನೂತನ ಸಭಾಂಗಣಕ್ಕೆ ಅನುದಾನ ಕೊಟ್ಟಿದ್ದಾರೆ. ನಾವು ನೂತನ ಸಭಾಂಗಣ ಉದ್ಘಾಟಿಸಿ, ಅಲ್ಲೆ ಸಭೆ ನಡೆಸಬೇಕೆಂದುಕೊಂಡಿದ್ದೀವೆ. ಆದರೆ ಡಿಸಿಎಂ ಗೋವಿಂದ ಕಾರಜೋಳ ಶಾಸಕ ವೀರಣ್ಣ ಚರಂತಿಮಠ ತಣ್ಣೀರೆರಚಿ ತರಾತುರಿಯಲ್ಲಿ ನೂತನ ಸಭಾಂಗಣ ಉದ್ಘಾಟಿಸಿ, ಕೆಡಿಪಿ ಸಭೆ ಮಾಡಲು ಮುಂದಾಗಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಸಮಾಧಾನ ಹೊರಹಾಕಿದರು.
ಉದ್ಘಾಟನೆ ಕಾರ್ಯಕ್ರಮದಿಂದ ಹೊರ ಉಳಿಯಲು ಮುಂದಾದಾಗ ಹೈಡ್ರಾಮಾ!
ನೂತನ ಸಭಾಂಗಣದಲ್ಲಿ ಉದ್ಘಾಟನಾ, ಸನ್ಮಾನ ಕಾರ್ಯಕ್ರಮದಿಂದ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಕಾಂಗ್ರೆಸ್ ಸದಸ್ಯರು ಗೈರಾಗಲು ಮುಂದಾಗುತ್ತಿದ್ದಂತೆ ಬಿಜೆಪಿ ಸದಸ್ಯರಾದ ಹೂವಪ್ಪ ರಾಠೋಡ ಶಶಿಕಾಂತ ಪಾಟೀಲ್ ಬಂದು ಕಾಂಗ್ರೆಸ್ ಸದಸ್ಯರನ್ನು ಮನವೊಲಿಸಲು ಮುಂದಾದರು. ಆಗ ಬಿಜೆಪಿ ಸದಸ್ಯ ಶಶಿಕಾಂತ ಪಾಟೀಲ್ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಕೈ ಹಿಡಿದು ಬನ್ನಿರೀ ಎಂದು ಕರೆದುಕೊಂಡು ಹೋದರು. ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ ಅಸಮಾಧಾನಗೊಂಡಿದ್ದ ಬಾಯಕ್ಕ ಮೇಟಿ ಅವರನ್ನು ಭಾಷಣದ ವೇಳೆಯೂ ಸಮಾಧಾನಪಡಿಸಲು ಪ್ರಯತ್ನಿಸಿದರು..
ಹೈಟೆಕ್ ಸಭಾಂಗಣ!
ಜಿಲ್ಲಾ ಪಂಚಾಯತ್ ನೂತನ ಸಭಾಂಗಣವನ್ನು 4.65ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಕೆಳಮಹಡಿ, ನೆಲಮಹಡಿ, ಮೊದಲ ಮಹಡಿಗೆ ಎಸಿ ಅಳವಡಿಸಲಾಗಿದೆ. ಜೊತೆಗೆ ಹೈ ರೆಜ್ಯೂಲೇಶನ್ ಪ್ರೋಜೆಕ್ಟರ್ ಅಳವಡಿಸಲಾಗಿದ್ದು, ನೆಲಮಹಡಿ-200 ಆಸನ,ವೀಕ್ಷಕರ ಗ್ಯಾಲರಿ ಸೇರಿದಂತೆ 100ಆಸನಗಳ ದೊಡ್ಡ ಹೈಟೆಕ್ ಮೀಟಿಂಗ್ ಹಾಲ್ ಕಣ್ಮನ ಸೆಳೆಯುತ್ತಿದೆ. ಹೈಟೆಕ್ ಶೌಚಾಲಯ, ಪ್ರತಿಧ್ವನಿ ನಿಯಂತ್ರಣ, ಪಿಒಪಿಗಳನ್ನು ಅಳವಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ