ಮೈಸೂರು (ಮೇ.1): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಆರ್ಎಸ್ಎಸ್ನವರಲ್ಲ. ಹೀಗಾಗಿ ಅವರನ್ನು ಬದಲಾಯಿಸಲು ಆರ್ಎಸ್ಎಸ್ನವರು (RSS) ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಮೈಸೂರಿನಲ್ಲಿರುವ (Mysore) ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಜನತಾ ಪರಿವಾರದವರು. ನಮ್ಮ ಜತೆಯಲ್ಲೇ ಇದ್ದವರು. ಆದರೆ ಅವರು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದರು.
ರಾಜ್ಯ ಸರ್ಕಾರ ಸತ್ತು ಹೋಗಿದೆ
ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತು ಹೋಗಿದೆ. ಸಿಎಂ, ಗೃಹ ಸಚಿವರು ಇಬ್ಬರೂ ಅಶಕ್ತರು. ಗೃಹ ಸಚಿವರು ಅತ್ಯಂತ ಅಸಮರ್ಥ ಸಚಿವ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಆದರೆ ಸರ್ಕಾರಕ್ಕೆ ಅದನ್ನು ನಿಭಾಯಿಸಲು ಬರುತ್ತಿಲ್ಲ.
ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ?
ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಇಂತಹ ಆಡಳಿತದಿಂದ ರಾಜ್ಯಕ್ಕೆ ಕಷ್ಟ ಎದುರಾಗುತ್ತಿದೆ. ಕೃತಕ ಕೊರತೆ ಸೃಷ್ಟಿ ಮಾಡುತ್ತಿದ್ದಾರೆ. ದಿಢೀರನೆ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಿಂದ ವಂಶಪಾರಂಪರ್ಯ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು? ಅಪ್ಪ- ಮಕ್ಕಳು ಅಲ್ವಾ?. ಅಂದರೆ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ? ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: PSI Recruitment Scam: ತನಿಖಾ ವರದಿಗೂ ಮುನ್ನವೇ ಪರೀಕ್ಷೆ ರದ್ದು ಮಾಡಿದ್ದು ತಪ್ಪು; ಡಿ.ಕೆ ಶಿವಕುಮಾರ್
ಕಲ್ಲಿದ್ದಲು ಉತ್ಪಾದನೆಯೇನು ಕಡಿಮೆಯಾಗಿಲ್ಲ. ಕಲ್ಲಿದ್ದಲು ಕೊರತೆ ಬೇಕೆಂದೇ ಸೃಷ್ಟಿಯಾಗಿರುವುದು ಎಂದು ನನಗನಿಸುತ್ತಿದೆ. ಉತ್ಪಾದನೆ ಆಗದಿರುವುದಕ್ಕೆ ಕಾರಣವಿಲ್ಲ. ಅನೈತಿಕ ಆಡಳಿತ, ಭ್ರಷ್ಟಾಚಾರದಿಂದ ಕಲ್ಲಿದ್ದಲು ಕೊರತೆ ರಾಜ್ಯದಲ್ಲಿ ಉಂಟಾಗಿದೆ ಎಂದು ನನಗನಿಸುತ್ತಿದೆ ಎಂದರು.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ
ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರಿದ್ದಾರೆ. ಬೆರಳೆಣಿಕೆ ಮಂದಿ ಮಾಡಿದ ತಪ್ಪಿನಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಎರಡು ವರ್ಷ ಕಾದು ಕುಳಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹಿಂದಿನ ಸರ್ಕಾರದಲ್ಲಿ ಅಕ್ರಮವಾಗಿದ್ದರೆ ಸರ್ಕಾರ ತನಿಖೆ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಬಿ.ಎಸ್ ವೈ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಕುಟುಂಬ ರಾಜಕಾರಣ ಕಾಂಗ್ರೆಸ್ ನಲ್ಲಿದೆ ಎನ್ನುವವರು ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು, ಬಿ ಎಲ್ ಸಂತೋಷ್ ಮತ್ತು ಸಿ ಟಿ ರವಿಯವರ ಹೇಳಿಕೆ ಮಧ್ಯೆ ಬಿ ಎಲ್ ಸಂತೋಷ್ ಅವರ ಹೇಳಿಕೆ ಮುಖ್ಯವಾಗುತ್ತದೆ ಎಂದರು.
ಇದನ್ನೂ ಓದಿ: PSI Recruitment Scam: ಮರುಪರೀಕ್ಷೆಗೆ ಸರ್ಕಾರದ ನಿರ್ಧಾರ, ನಮಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳ ಕಣ್ಣೀರು
ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ
ಆಸಿಡ್ ಪ್ರಕರಣ ಒಂದೇ ಅಲ್ಲ, ಅನೇಕ ಪ್ರಕರಣಗಳಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ. ಅವರ ಸರ್ಕಾರದ ಮಂತ್ರಿಯೇ ಸೆಕ್ಷನ್ 144ನ್ನು ಉಲ್ಲಂಘಿಸಿದ್ದಾರೆ. ಬಿಜೆಪಿಯಲ್ಲಿ ಈಗ ದುರ್ಬಲ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿದ್ದಾರೆ ಎಂದರು. ಬಸವರಾಜ ಬೊಮ್ಮಾಯಿ RSS ನವನು ಅಲ್ಲ. ಹೀಗಾಗಿ ಅವನನ್ನು ಬದಲಾಯಿಸಲು ಆರ್ ಎಸ್ ಎಸ್ನವರು ಹೊರಟಿದ್ದಾರೆ. ಬಸವರಾಜ ಬೊಮ್ಮಾಯಿ ಜನತಾ ಪರಿವಾರದವನು. ನಮ್ಮ ಜೊತೆಯಲ್ಲೇ ಇದ್ದ. ಆದರೆ ಅವನು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ