ಹುಬ್ಬಳ್ಳಿ: ಜೆಡಿಎಸ್ ಶಾಸಕರು ಶ್ರೀಲಂಕಾ ದೆಶದ ಕ್ಯಾಸಿನೋಗೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಲು ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಇಲ್ಲಿ ಮಾತನಾಡಿದ ಅವರು, ಗಾಂಜಾ ಮತ್ತು ಡ್ರಗ್ಸ್ ವಿಚಾರದಲ್ಲಿ ಶಾಮೀಲಾಗಿರುವ ಎಲ್ಲರ ಹೆಸರು ಬಯಲಿಗೆ ಬರಲಿ ಎಂದು ಆಶಿಸಿದ್ದಾರೆ. ಜೆಡಿಎಸ್ ಶಾಸಕರು ಕೊಲಂಬೋದ ಕ್ಯಾಸಿನೊಗೆ ಹೋಗಿದ್ದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ಯಾರು ಹೋಗಿದ್ದಾರೆ ಅವರಿಗೆ ಗೊತ್ತು. ನಾನು ಹೋಗಿಲ್ಲ. ಉಳಿದವರು ಹೋಗಿದ್ದು ಗೊತ್ತು, ಪರಿಷತ್ ಚುನಾವಣೆ ಇದ್ದ ಕಾರಣಕ್ಕೆ ನಾನು ಹೋಗಿರಲಿಲ್ಲ. ಈಗ ಪ್ರವಾಸದ ವಿಚಾರ ಹೊರಗೆ ಬಂದಿದೆ ಎಂದಿದ್ದಾರೆ.
ಕ್ಯಾಸಿನೋಗೆ ತುಂಬಾ ಜನರು ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ಹೋಗಿದ್ದು ನೇರವಾಗಿ ಹೇಳಿ ಬಿಡ್ತಾರೆ. ಅವರು ಹೇಳುವ ಧೈರ್ಯ ಮಾಡಿದ್ದಾರೆ. ಅದನ್ನ ಮೆಚ್ಚಲೇಬೇಕು. ನಮ್ಮನ್ನ ಸಹ ಕ್ಯಾಸಿನೋ ಪ್ರವಾಸಕ್ಕೆ ಕರೆದಿದ್ದರು. ಆದ್ರೆ ನಾನು ಹೋಗಿರಲಿಲ್ಲ. ಹೋಗಿದ್ದು ರಾಜಕೀಯ ಚರ್ಚೆ ಮಾಡಲು. ಕ್ಯಾಸಿನೋದಲ್ಲಿ ರಾಜಕೀಯ ವಿಚಾರ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಇದೆಯಾ ಎಂದು ಹೊರಟಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಆರೋಪಿಗಳ ರಕ್ಷಣೆಗೆ ಸಿದ್ದರಾಮಯ್ಯ ಹೇಳಿಕೆ: ಡಿಸಿಎಂ ಗೋವಿಂದ ಕಾರಜೋಳ ಟೀಕೆ
ಯಡಿಯೂರಪ್ಪರನ್ನ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಸರಿಯಲ್ಲ:
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಬಿ.ಎಸ್. ಯಡಿಯೂರಪ್ಪ. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಸರಿಯಲ್ಲ ಎಂದು ಈ ವೇಳೆ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಯಡಿಯೂರಪ್ಪನವರನ್ನ ಬದಲಾವಣೆ ಮಾಡುವ ಲಾಬಿ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾಗ್ತಾರೆ ಅನ್ನೋ ವಿಚಾರವನ್ನ ಬಿಜೆಪಿಯ ಹಿರಿಯ ಮುಖಂಡರೊಬ್ಬರು ನನಗೆ ಹೇಳಿದ್ದಾರೆ. ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ವಿಚಾರವಾಗಿ ನನ್ನ ಜೊತೆ ಬಿಜೆಪಿ ಮುಖಂಡರು ಚರ್ಚೆ ಮಾಡಿದ್ದಾರೆ ಎಂದು ಜೆಡಿಎಸ್ ಎಂಎಲ್ಸಿ ಹೇಳಿದ್ದಾರೆ.
ಇದನ್ನೂ ಓದಿ: ಶಾಲೆಗೆ ಬಣ್ಣ ಬಳಿದು ಚಂದದ ರೂಪ ಕೊಟ್ಟ ಯುವಕರ ತಂಡ; ಮಕ್ಕಳನ್ನು ಸೆಳೆಯಲು ಉತ್ತಮ ಚಿಂತನೆ
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಬಿಎಸ್‌ವೈರನ್ನು ಭೇಟಿ ಆಗಿರಬೇಕು. ರಾಜ್ಯದ ಹಿತದೃಷ್ಟಿಯಿಂದ ಕುಮಾರಸ್ವಾಮಿಯವರು ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಮುಖ್ಯಮಂತ್ರಿಯಾಗಿ ಇದು ಅವರ ಕೊನೆಯ ಅವಧಿ. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವರೂ ಆದ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ವರದಿ: ಪರಶುರಾಮ ತಹಶೀಲ್ದಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ