• Home
 • »
 • News
 • »
 • state
 • »
 • Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!

Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!

ಬಿಎಸ್​ವೈ-ಬೊಮ್ಮಾಯಿ

ಬಿಎಸ್​ವೈ-ಬೊಮ್ಮಾಯಿ

Basavaraj Bommai: ಬಹುತೇಕ ಎಲ್ಲಾ ವಿಚಾರಗಳ ಬಗ್ಗೆಯೂ ಬಿಎಸ್​ವೈ ಬೊಮ್ಮಾಯಿಯ ಬಳಿ ಚರ್ಚಿಸುತ್ತಿದ್ದರು. ಆದ್ರೆ ಮುಖ್ಯಮಂತ್ರಿಯ ಜೊತೆಗೆ ಇಷ್ಟು ಆಪ್ತವಾಗಿದ್ದರೂ ಬೊಮ್ಮಾಯಿ ಅದನ್ನು ಎಲ್ಲೂ ತೋರಿಸಿಕೊಳ್ಳುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಎಂಬಂತಿದ್ದರು. ಅದೆಲ್ಲವೂ ಈಗ ಫಲ ಕೊಟ್ಟಿದೆ.

ಮುಂದೆ ಓದಿ ...
 • Share this:

  ಬೆಂಗಳೂರು: 2008ನೇ ಇಸವಿ ಬಸವರಾಜ್ ಎಸ್ ಬೊಮ್ಮಾಯಿ ಪಾಲಿಗೆ ಬಹಳ ಕಷ್ಟದ ವರ್ಷವಾಗಿತ್ತು. ಒಂದು ಕಡೆ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಮತ್ತೊಂದೆಡೆ ಜನತಾ ದಳದ ಜೊತೆಗೆ ಅವರ ಸಂಬಂಧ ಹಳಸಿತ್ತು. ಒಂದು ರೀತಿಯಲ್ಲಿ ಅವರದ್ದು ದಿಕ್ಕು ತೋಚದಂತಾ ಪರಿಸ್ಥಿತಿ ಇತ್ತು. ಅವರ ಕೆಲ ಆಪ್ತರ ಪ್ರಕಾರ ಬೊಮ್ಮಾಯಿಗೆ ಆಗ ಕಾಂಗ್ರೆಸ್ ಕಡೆ ಒಲವಿತ್ತು. ಆದ್ರೆ ಆಗಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನಸ್ಸು ಮಾಡಿರಲಿಲ್ಲ. ನಂತರ ಕೆಲ ಸಮಯದ ನಂತರ ಬಿ ಎಸ್ ಯಡ್ಯೂರಪಪ್ಪನವರನ್ನು ಭೇಟಿ ಮಾಡಿದ್ದರು ಬಸವರಾಜ ಬೊಮ್ಮಾಯಿ. ಆಗಿನ ಸಂದರ್ಭದಲ್ಲಿ ಜೆಡಿಎಸ್​ ಮೇಲೆ ಅಕ್ಷರಶಃ ಯುದ್ಧ ಸಾರಿದ್ದರು ಬಿಎಸ್​ವೈ. ದೇವೇಗೌಡ ಕುಟುಂಬದವರು ತನಗೆ ಮಾಡಿದ ದ್ರೋಹದ ವಿರುದ್ಧ ಸಿಡಿದೆದ್ದಿದ್ದ ಬಿ ಎಸ್ ಯಡ್ಯೂರಪ್ಪ ಸಿಎಂ ಚುಕ್ಕಾಣಿ ಹಿಡಿಯೋಕೆ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದರು. ತಮ್ಮ ಬಳಿ ಬಂದ ಬಸವರಾಜ ಬೊಮ್ಮಾಯಿಯನ್ನು ಖುಷಿಯಿಂದಲೇ ಬಿಜೆಪಿಗೆ ಸ್ವಾಗತಿಸಿದ್ದು ಮಾತ್ರವಲ್ಲ, ಶಿಗ್ಗಾವ್​ನಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್​​ನ್ನೂ ನೀಡಿದ್ದರು. ಈ ನಿರ್ಧಾರ ಅವರ ಪಾಲಿಗೆ ಅತ್ಯಂತ ಯಶಸ್ವಿಯಾಗಿ ಪರಿಣಮಿಸಿತ್ತು.


  ಬಿಜೆಪಿಗೆ ಆಗ ಸರ್ಕಾರದ ಚುಕ್ಕಾಣಿ ಹಿಡಿದಿದ್ದು ಮಾತ್ರವಲ್ಲ, ಬೊಮ್ಮಾಯಿಯನ್ನು ಬಿಎಸ್​ವೈ ತಮ್ಮ ಸಂಪುಟದಲ್ಲಿ ನೀರಾವರಿ ಸಚಿವರನ್ನಾಗಿ ಮಾಡಿದ್ದರು. ಇದಾದ ನಂತರ ಬೊಮ್ಮಾಯಿ ಬಿ ಎಸ್ ಯಡ್ಯೂರಪ್ಪನ ನಂಬಿಕಸ್ಥ ವ್ಯಕ್ತಿಯಾಗಿ ಆಪ್ತವಲಯದಲ್ಲಿದ್ದರು. ಬಿಎಸ್​ವೈ ಸಮಸ್ಯೆಯ ಸುಳಿಯಲ್ಲಿದ್ದಾಗೆಲ್ಲಾ ಜೊತೆಗೇ ಇದ್ದು ಬಲ ತುಂಬಿದ್ದರು ಬೊಮ್ಮಾಯಿ. ಆದರೆ 2012ರಲ್ಲಿ ಬಿಜೆಪಿಯಿಂದ ಹೊರನಡೆದು ಯಡ್ಯೂರಪ್ಪ ಕೆಜಿಪಿ ಪಕ್ಷ ಕಟ್ಟಿದಾಗ ಮಾತ್ರ ಬೊಮ್ಮಾಯಿ ಅವರೊಂದಿಗೆ ಹೋಗಿರಲಿಲ್ಲ. ಬಿಎಸ್​ವೈ ಬೆಂಬಲಿಗರು ಆಗ ಬೊಮ್ಮಾಯಿಯನ್ನು ವಿಶ್ವಾಸಘಾತುಕ ಎಂದೆಲ್ಲಾ ಜರಿದಿದ್ದರು. ಆದ್ರೆ ರಾಜಕಾರಣದಲ್ಲಿ ಪಳಗಿದ್ದ ಬಸವರಾಜ ಬೊಮ್ಮಾಯಿ ಬಿಎಸ್​ವೈ ನೂತನ ಪಕ್ಷಕ್ಕೆ ಭವಿಷ್ಯ ಇಲ್ಲ ಎನ್ನುವುದನ್ನು ಮನಗಂಡಿದ್ದರು. ಬಿಜೆಪಿಯಲ್ಲೇ ಉಳಿದುಕೊಂಡು ಗೆದ್ದಿದ್ದರು ಕೂಡಾ.. ಒಂದು ವರ್ಷದ ನಂತರ ಸೋಲುಂಡ ಬಿಎಸ್​ವೈ ಸಹಾ ಬಿಜೆಪಿಗೆ ಮರಳಿದ್ದರು.


  ಇದನ್ನೂ ಓದಿ: Karnataka Politics: ಸಿಎಂ ಮಕ್ಕಳು ಸಿಎಂ ಆದವರಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರು


  ಕೆಲವರು ಬಿಎಸ್​ವೈ ಬೊಮ್ಮಾಯಿಯನ್ನು ಕ್ಷಮಿಸೋದಿಲ್ಲ ಎಂದೇ ಭಾವಿಸಿದ್ದರು. ಆದ್ರೆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಅವರಿಬ್ಬರೂ ಜೊತೆಯಾದರು. 2019ರಲ್ಲಿ ಜೆಡಿಎಸ್​-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಹೊಡೆದುರುಳಿಸಲು ಬಿ ಎಸ್ ಯಡ್ಯೂರಪ್ಪ ಪ್ರಯತ್ನಿಸುತ್ತಿದ್ದಾಗ ಸಂಪೂರ್ಣ ಬೆಂಬಲ ನೀಡಿ ಜೊತೆಗೇ ಇದ್ದರು ಬಸವರಾಜ ಬೊಮ್ಮಾಯಿ. ನಂತರ ಬಿಎಸ್​ವೈ ಅಧಿಕಾರ ವಹಿಸಿಕೊಂಡಾಗ ಬೊಮ್ಮಾಯಿ ಗೃಹಸಚಿವರಾಗಿ ಬಿಎಸ್​ವೈ ನೆರಳಾಗಿ ಇದ್ದರು. ಬಹುತೇಕ ಎಲ್ಲಾ ವಿಚಾರಗಳ ಬಗ್ಗೆಯೂ ಬಿಎಸ್​ವೈ ಬೊಮ್ಮಾಯಿಯ ಬಳಿ ಚರ್ಚಿಸುತ್ತಿದ್ದರು. ಆದ್ರೆ ಮುಖ್ಯಮಂತ್ರಿಯ ಜೊತೆಗೆ ಇಷ್ಟು ಆಪ್ತವಾಗಿದ್ದರೂ ಬೊಮ್ಮಾಯಿ ಅದನ್ನು ಎಲ್ಲೂ ತೋರಿಸಿಕೊಳ್ಳುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಎಂಬಂತಿದ್ದರು. ಅದೆಲ್ಲವೂ ಈಗ ಫಲ ಕೊಟ್ಟಿದೆ.


  ಬಿಜೆಪಿಯ ಅನೇಕರು ಮುಖ್ಯಮಂತ್ರಿ ಪದವಿಗೆ ಲಾಬಿ ಮಾಡುತ್ತಿರುವಾಗ ಬೊಮ್ಮಾಯಿ ಮಾತ್ರ ಅದ್ಯಾವುದನ್ನೂ ಮಾಡದೇ ಸುಮ್ಮನೇ ಇದ್ದರು. ಬಹುಶಃ ಯಡ್ಯೂರಪ್ಪನ ಆಶೀರ್ವಾದ ಇರದಿದ್ದರೆ ಉತ್ತರಾಧೀಕಾರಿಯಾಗೋಕೆ ಸಾಧ್ಯವಿಲ್ಲ ಎನ್ನುವುದನ್ನು ಅವರು ಅರಿತಿದ್ದರು ಎನಿಸುತ್ತದೆ. ಅವರ ಲೆಕ್ಕಾಚಾರ ಮತ್ತೊಮ್ಮೆ ಸರಿಯಾಗಿದೆ. ವಿಶ್ವಾಸಘಾತವನ್ನು ಯಡ್ಯೂರಪ್ಪ ಎಂದಿಗೂ ಕ್ಷಮಿಸೋದಿಲ್ಲ, ಮರೆಯೋದೂ ಇಲ್ಲ…ಬೊಮ್ಮಾಯಿಯನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದರು!


  ಸಿಎಂ ಪದವಿ ಪಡೆದ ಬೊಮ್ಮಾಯಿ ಅನೇರನ್ನು ಆಶ್ಚರ್ಯಕ್ಕೆ ದೂಡಿದ್ದಂತೂ ಸತ್ಯ. ಆರ್​ಎಸ್​ಎಸ್​ ಹಿನ್ನೆಲೆ ಇಲ್ಲದೆ, ಬಿಜೆಪಿಯಲ್ಲಿ ಅನೇಕರಿಗಿಂತ ಹೊಸಬರೇ ಆಗಿರುವ ಬೊಮ್ಮಾಯಿಯ ಈ ಅಧಿಕಾರ ಸಾಮಾನ್ಯ ಸಾಧನೆಯಲ್ಲ. ಬೊಮ್ಮಾಯಿಯ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಸರಿಯಾದ ಸಮಯಕ್ಕೆ ತೆಗೆದುಕೊಂಡ ನಿರ್ಧಾರಗಳು ಮತ್ತು ಅದೃಷ್ಟ ಸದಾ ಅವರ ಕೈಹಿಡಿದಿದೆ.


  ಇದನ್ನೂ ಓದಿ: BS Yediyurappa :ಬಿಎಸ್​ವೈಗೆ ಶರಣಾಯ್ತು ಹೈಕಮಾಂಡ್..!ಇಷ್ಟು ದಿನ ಕಿಂಗ್ ಆಗಿದ್ದ ರಾಜಾಹುಲಿ ಇನ್ಮುಂದೆ ಕಿಂಗ್ ಮೇಕರ್..!


  1988ರಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪದತ್ಯಾಗ ಮಾಡಿದಾಗ ಉಳಿದವರೆಲ್ಲಾ ಸಿಎಂ ಖುರ್ಚಿಗೆ ಲಾಬಿ ಮಾಡುತ್ತಿದ್ದರೆ ಹಿರಿಯ ರಾಜಕಾರಣಿ ಎಸ್​ ಆರ್​ ಬೊಮ್ಮಾಯಿ ತಮ್ಮ ಮನೆಯಲ್ಲಿ ಸಿಗರೇಟ್ ಸೇದುತ್ತಾ ಹಿಂದಿ ಸಿನಿಮಾ ಜಂಜೀರ್ ನೋಡ್ತಾ ಇದ್ರು. ಕೊನೆಗೆ ಹೆಗಡೆ, ಬೊಮ್ಮಾಯಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ರು!


  ತಂದೆ ಮತ್ತು ಮಗ ಇಬ್ಬರೂ ಇಂಥಾ ನಾಟಕೀಯ ಬೆಳವಣಿಗೆಗಳಲ್ಲೇ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದು ಕಾಕತಾಳಿಯವಷ್ಟೇ.


  ಇತಿಹಾಸ ಮರುಕಳಿಸಿದೆ.


  ಡಿ ಪಿ ಸತೀಶ್

  Published by:Soumya KN
  First published: