ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತರುವಾಯ ಶುಕ್ರವಾರದಂದು ಮೊದಲ ಬಾರಿಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬೆಳಿಗ್ಗೆಯೇ ದೆಹಲಿ ತಲುಪಿದ್ದಾರೆ. ಆದರೆ ನೂತನ ಸಿಎಂಗೆ ಯಾವುದೇ ರೀತಿಯ ಭವ್ಯ ಸ್ವಾಗತ ಮಾಡದೆ ಕರ್ನಾಟಕದ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ.
ಸಿಎಂ ಆಗಿ ದೆಹಲಿಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಇದಾಗಿದ್ದು, ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿರುವ ಬೊಮ್ಮಾಯಿ ಅವರು ತಮ್ಮನ್ನು ಆಯ್ಕೆ ಮಾಡಿದ ನಾಯಕರಿಗೆ ಧನ್ಯವಾದ ತಿಳಿಸಲಿದ್ದು, ಇದೆ ಜೊತೆಗೆ ನೂತನ ಸಚಿವ ಸಂಪುಟದ ಬಗ್ಗೆಯೂ ಕೂಡ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ಭವನದಲ್ಲಿ ಮೂವರು ಐಎಎಸ್ ಓರ್ವ ಐಎಫ್ಎಸ್ ಅಧಿಕಾರಿಗಳು ಇದ್ದರು ಸಿಎಂ ಬಸವರಾಜ ಬೊಮ್ಮಾಯಿ ಅವರ ಸ್ವಾಗತಕ್ಕೆ ಯಾರು ಕೂಡ ಹಾಜರಿರಲಿಲ್ಲ, ಸಿಎಂ ಅವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರು ಮಾತ್ರ ಸ್ವಾಗತಿಸಿದರು. ನಿವಾಸಿ ಆಯುಕ್ತೆ ಇಂಕೊಂಗ್ಲಾ ಜಮೀರ ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದು ಪುಷ್ಟಗುಚ್ಚ ನೀಡಿ ಸ್ವಾಗತಿಸಿದ್ದಾರೆ.
ದೆಹಲಿಯ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಹಾಗೂ ಸಂಸದ ಉಮೇಶ್ ಜಾಧವ್ ಅವರು ಮಾತ್ರ ಬೊಮ್ಮಾಯಿ ಅವರ ಸ್ವಾಗತಕ್ಕೆ ನಿಂತಿದ್ದರು, ಇದೇ ವೇಳೆ ಭೇಟಿಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬೊಮ್ಮಾಯಿ ಅವರನ್ನು ಸ್ವಾಗತಿಸಲು ಬಂದಿದ್ದರು. ಎಂ.ಪಿ. ಕುಮಾರಸ್ವಾಮಿ ಸಚಿವಾಕಾಂಕ್ಷಿಯಾಗಿದ್ದು, ಸಿಎಂ ಮೂಲಕ ಹೈಕಮಾಂಡಿಗೆ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ವಿಮಾನ ನಿಲ್ದಾಣದಿಂದ ಕರ್ನಾಟಕ ಭವನಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಶಿವಕುಮಾರ್ ಉದಾಸಿ, ಬಿಎಸ್ವೈ ಪುತ್ರ ಸಂಸದ ರಾಘವೇಂದ್ರ ಅವರುಗಳು ಸಹ ಬಂದಿದ್ದರು. ತದ ನಂತರ ಸಿಎಂ ಬೊಮ್ಮಾಯಿ ಭೇಟಿಗೆ ಸಂಸದ ಬಳ್ಳಾರಿ ಸಂಸದ ದೇವೇಂದ್ರಪ್ಪ ಆಗಮಿಸಿ ಶುಭಕೋರಿದರು.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ನನ್ನ ಮೊದಲ ಭೇಟಿಯಾಗಿದ್ದು, ಮೊದಲಿಗೆ ಹಿರಿಯರಾದ ರಾಜ್ನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದೇನೆ. ಆನಂತರ ಮಧ್ಯಾಹ್ನ 12ಗಂಟೆಗೆ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಧನ್ಯವಾದ ತಲೀಸಲಿದ್ದೇನೆ, 1ಕ್ಕೆ ರಾಜ್ಯದ ಎಲ್ಲಾ ಸಂಸದರ ಜೊತೆ ಸಭೆ ಏರ್ಪಡಿಸಲಾಗಿದ್ದು, ರಾಜ್ಯದ ಸಮಸ್ಯೆಗಳ ಬಗ್ಗೆ ಅವರ ಜೊತೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಬಂದಿಳಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ
4ಕ್ಕೆ ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದೇನೆ, ಆನಂತರ
ಸಂಸತ್ ಭವನಕ್ಕೆ ಭೇಟಿ ಕೊಡಲಿದ್ದೇನೆ. ಇದು ಒಂದು ದಿನದ ಕಾರ್ಯಕ್ರಮವಾಗಿದ್ದು ಆನಂತರ ಶನಿವಾರದಂದು ಜಲಸಂಪನ್ಮೂಲ ಸಚಿವರ ಭೇಟಿ ಮಾಡಿ ಚರ್ಚೆ ನಡೆಸಲಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡ ಜೊತೆ ಸಂಪುಟ ರಚನೆ ಬಗ್ಗೆ
ಸ್ಥೂಲವಾಗಿ ಅವರು ನೀಡುವ ಮಾರ್ಗದರ್ಶನ ಎದುರು ನೋಡುತ್ತಿದ್ದೇನೆ. ಸಂಪುಟ ರಚನೆ ಮೊದಲ ಆದ್ಯತೆಯಾಗಿದ್ದು, ಆನಂತರ ಪ್ರವಾಹ ಪರಿಸ್ಥಿತಿ ಬಗ್ಗೆ ಅಧಿಕಾರಗಳ ಜೊತೆ ಚರ್ಚೆ ನಡೆಸಲಿದ್ದು, ಶನಿವಾರದಂದು ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ