ಅಂದು ಹರಿಹರ ಶ್ರೀಗಳಿಂದ ಸಚಿವ ಸ್ಥಾನಕ್ಕೆ ಬೇಡಿಕೆ, ಇಂದು ಕೂಡಲಸಂಗಮ ಶ್ರೀಗಳಿಂದ ಸಿಎಂ ಸ್ಥಾನಕ್ಕೆ ಬೇಡಿಕೆ!

ಈ ಬಾರಿ ಪಂಚಮಸಾಲಿ ಸಮಾಜದ ಶಾಸಕರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಉಭಯ ಸ್ವಾಮೀಜಿಗಳು ತಮ್ಮ ಸಮಾಜದ ನಾಯಕರ ಪರ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಇಡೀ ಸಮಾಜದ ಮೇಲೆ ಪ್ರಬಲ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದೇ ಅರ್ಥೈಸಲಾಗುತ್ತಿದೆ.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ.

  • Share this:
ವಿಜಯಪುರ: ಅರೇ ಇದೇನಿದು ಹೊಸ ವರಸೆ ಅಂದುಕೊಳ್ಳಬೇಡಿ. ಅಷ್ಟಕ್ಕೂ ಕೂಡಲಸಂಗಮ ಸ್ವಾಮೀಜಿ ಹೇಳಿದ್ದೇನೆಂದರೆ, ರಾಜ್ಯ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮಾಜಕ್ಕೆ ಸೇರಿದ ಮೂರ್ನಾಲ್ಕು ಜನರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಸಮಾಜ ನಿರೀಕ್ಷಿಸಿತ್ತು. ಆದರೆ, ಒಬ್ಬರಿಗೂ ಸಚಿವ ಸ್ಥಾನ ನೀಡಲಿಲ್ಲ. ಈಗ ಕನಿಷ್ಠ ಇಬ್ಬರಿಗಾದರೂ ಸಚಿವ ಸ್ಥಾನ ನೀಡಿ. ಇಲ್ಲದಿದ್ದರೆ 2024ಕ್ಕೆ ಪಂಚಮಸಾಲಿ ಸಮಾಜದವರನ್ನೇ ಸಿಎಂ ಎಂದು ಘೋಷಣೆ ಮಾಡಿ ಎಂದು ಕೇಂದ್ರವನ್ನು ಆಗ್ರಹಿಸಿದ್ದಾರೆ. 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನವರ 191ನೇ  ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಈ ಸಮಾವೇಶದಲ್ಲಿ ಮಾತನಾಡಿದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಬೇಕು ಎಂದು ಸಿಎಂಗೆ ಆಗ್ರಹಿಸಿದರು. ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಲಿಂಗಾಯತರಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿದೆ. ಮೂರ್ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಪೇಕ್ಷೆ ಸಮಾಜಕ್ಕಿದೆ. ಪಂಚಮಸಾಲಿ ಸಮಾಜದಿಂದ ಕನಿಷ್ಠ ಇಬ್ಬರನ್ನಾದರೂ ಸಚಿವರನ್ನಾಗಿ ಮಾಡಿ. ಇಬ್ಬರಿಗೆ ಸಚಿವ ಸ್ಥಾನ ಕೊಡಿ, ಇಲ್ಲದಿದ್ದರೆ 2024ಕ್ಕೆ ಪಂಚಮಸಾಲಿ ಸಮುದಾಯದವರನ್ನು ಸಿಎಂ ಮಾಡಿ ಎಂದು ಕೇಂದ್ರ ಬಿಜೆಪಿ ನಾಯಕರನ್ನು ಆಗ್ರಹಿಸಿದರು.

ಈ ಹಿಂದೆ ಹರಿಹರದಲ್ಲಿ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿಯೇ ವಚನಾನಂದ ಸ್ವಾಮೀಜಿ ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ಎಚ್ಚರಿಕೆ ನೀಡಿದರು. ಈಗ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಅದೇ ಪಂಚಮಸಾಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ರೀತಿ ಬೇಡಿಕೆ ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ: ನಿರಾಣಿ ಮಂತ್ರಿ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದ.. ಸ್ವಾಮಿಗೆ ಬೆದರಿಸಬೇಡಿ ಎಂದು ಎಚ್ಚರಿಸಿದ ಯಡಿಯೂರಪ್ಪ!

ಹೇಳಿ ಕೇಳಿ ಲಿಂಗಾಯತರ ಸಮಾಜವೆಂದರೆ ಬಿಜೆಪಿ ಬೆನ್ನಿಗಿದೆ ಎಂಬ ಭಾವನೆ ಬಹುತೇಕರಲ್ಲಿದೆ. ಅಲ್ಲದೇ, ಈ ಲಿಂಗಾಯತರಲ್ಲಿ ಪಂಚಾಮಸಾಲಿ ಸಮಾಜದ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ಈ ಬಾರಿ ಪಂಚಮಸಾಲಿ ಸಮಾಜದ ಶಾಸಕರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಉಭಯ ಸ್ವಾಮೀಜಿಗಳು ತಮ್ಮ ಸಮಾಜದ ನಾಯಕರ ಪರ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಇಡೀ ಸಮಾಜದ ಮೇಲೆ ಪ್ರಬಲ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದೇ ಅರ್ಥೈಸಲಾಗುತ್ತಿದೆ.
First published: