‘ನಿರಾಣಿಗೆ ಮಂತ್ರಿ ಸ್ಥಾನ ನೀಡಿ ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗಬೇಕಾ?‘: ಯತ್ನಾಳ್​​

ಮುಖ್ಯಮಂತ್ರಿಗಳೇ ಮುರುಗೇಶ್ ನಿರಾಣಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಮ್ಮ ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ಕೈ ಬಿಡಲು ಹೋಗಬೇಡಿ. ಒಂದು ವೇಳೆ ನೀವು ನಿರಾಣಿಯನ್ನು ಕೈಬಿಟ್ಟರೆ ಇಡೀ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದರು.

news18-kannada
Updated:January 15, 2020, 1:55 PM IST
‘ನಿರಾಣಿಗೆ ಮಂತ್ರಿ ಸ್ಥಾನ ನೀಡಿ ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗಬೇಕಾ?‘: ಯತ್ನಾಳ್​​
ಬಸನಗೌಡ ಯತ್ನಾಳ್​​​, ಮುರುಗೇಶ್​​ ನಿರಾಣಿ
  • Share this:
ವಿಜಯಪುರ(ಜ.15): ಮುರುಗೇಶ್​ ನಿರಾಣಿಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ನಿನ್ನೆ ಬೆದರಿಕೆ ಹಾಕಿದ್ದ ಶ್ವಾಸಗುರು ವಚನಾನಂದ ಸ್ವಾಮೀಜಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್​​, ಯಾರು ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಗೊಡ್ಡು ಬೆದರಿಕೆ ಹಾಕಬಾರದು. ನಾನು ಮುಖ್ಯಮಂತ್ರಿಗಳ ಪರ ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.

ಇನ್ನು ಶ್ವಾಸಗುರು ವಚನಾನಂದ ಅವರು ಮಠಾಧೀಶರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲಾ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡಬೇಕು. ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮವೊಂದಕ್ಕೆ ಕರೆಸಿ ಅವಮಾನ ಮಾಡುವುದು ಸರಿಯಲ್ಲ ಎಂದು ಕುಟುಕಿದರು ಯತ್ನಾಳ್.

ಶ್ವಾಸಗುರು ವಚನಾನಂದ ಸ್ವಾಮೀಜಿ ತಮ್ಮ ವರ್ತನೆ ಬದಲಿಸಿಕೊಳ್ಳಬೇಕಿದೆ. ಈ ಹಿಂದೆ ಎಸ್​​. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಂತಹ ಲಿಂಗಾಯತ ನಾಯಕರಿಗೆ ನಮ್ಮವರೇ ಮುಳುವಾದರು. ಉತ್ತರ ಕರ್ನಾಟಕ ಪ್ರವಾಹ ಬಂದಾಗ ಸ್ವಾಮೀಜಿ ಯಾಕೆ ಧ್ವನಿ ಎತ್ತಲಿಲ್ಲ? ಇವರ ಮಾರ್ಗದರ್ಶನದಲ್ಲೇ ಸಚಿವರಾದರೆ ಪ್ರತಿದಿನ ತಮ್ಮ ಮಠದ ಎದುರೇ ನಿಲ್ಲಬೇಕಾಗುತ್ತದೆ ಎಂದು ಮುರುಗೇಶ್​​ ನಿರಾಣಿಗೆ ಎಚ್ಚರಿಸಿದರು.

ಮಾಜಿ ಸಚಿವ ಮುರುಗೇಶ್​ ನಿರಾಣಿ ಯಡಿಯೂರಪ್ಪ ತಂದೆ ಸಮಾನ ಎನ್ನುತ್ತಾರೆ. ಹಾಗಿದ್ದರೆ ಹೀಗ್ಯಾಕೆ ಮಾಡಿದರು. ಮುರುಗೇಶ್​ ನಿರಾಣಿ ಕೂಡಲ ಸಂಗಮ ಮತ್ತು ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ಹೊರಟಿದ್ದಾರೆ. ನಿರಾಣಿ ಮತ್ತು ಸ್ವಾಮೀಜಿಗಳ ಈ ನಡೆಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಇಬ್ಬರು ನಿರಾಣಿ ಸಹೋದರರು‌ ಕೂಡಲ ಸಂಗಮ ಮಠವನ್ನು ನಿಯಂತ್ರಿಸುತ್ತಿದ್ದಾರೆ. ನಿರಾಣಿ ತನ್ನ ಮನೆಯ ನಾಯಿ ಮತ್ತು ಬೆಕ್ಕಿಗೂ ಸ್ಥಾನಮಾನ ಕೇಳುತ್ತಾರೆ. ಉಳಿದ ಪಂಚಮಸಾಲಿ ಮುಖಂಡರು ಮಾತ್ರ ಕತ್ತೆ ಕಾಯಲು ಹೋಗಬೇಕಾ? ನಿರಾಣಿ ಏನು ಉಪಕಾರ ಮಾಡಿದ್ದಾರೆ? ತಮ್ಮ ಹೆಸರಿನಲ್ಲಿ ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿಕೊಂಡಿದ್ಧಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ‘ನಿರಾಣಿಯನ್ನು ಮಂತ್ರಿ ಮಾಡಲೇಬೇಕೆಂದು ಸಿಎಂಗೆ ಸ್ವಾಮೀಜಿ ಬೆದರಿಕೆ ಹಾಕುವುದು ಸರಿಯಲ್ಲ‘: ದಿನೇಶ್​​ ಗುಂಡೂರಾವ್​​

ನಿನ್ನೆ ಹರಿಹರದಲ್ಲಿ ವೇದಿಕೆ ಮೇಲೆ ಶ್ವಾಸಗುರು ವಚನಾನಂದ ಸ್ವಾಮೀಜಿ ಅವರು ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಸಿಎಂ ಬಿಎಸ್​ವೈ, ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು, ಎಂದು ಕುರ್ಚಿಯಿಂದ ಮೇಲೆದ್ದು ಹೇಳಿದರು. ಈ ವೇಳೆ ಸಿಎಂ ಮತ್ತು ಸ್ವಾಮೀಜಿ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.

ಮುಖ್ಯಮಂತ್ರಿಗಳೇ ಮುರುಗೇಶ್ ನಿರಾಣಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಮ್ಮ ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ಕೈ ಬಿಡಲು ಹೋಗಬೇಡಿ. ಒಂದು ವೇಳೆ ನೀವು ನಿರಾಣಿಯನ್ನು ಕೈಬಿಟ್ಟರೆ ಇಡೀ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದರು.ಸಿಡಿಮಿಡಿಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಅವರ ಮಾತನ್ನು ತಡೆದು, ಕುರ್ಚಿಯಿಂದ ಎದ್ದು, ನೀವು ಹೀಗೆಲ್ಲಾ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ, ಎಂದು ನಿಂತಾಗ, ಸ್ವಾಮೀಜಿಗಳು "ಅಲ್ಲಾ, ನಾವು ಸತ್ಯವನ್ನು ಹೇಳುತ್ತಿದ್ದೇವೆ. ಕುಳಿತುಕೊಳ್ಳಿ ನೀವು ಕುಳಿತುಕೊಳ್ಳಿ," ಎಂದು ಹೇಳಿದರು. ಆಗ ಸಿಎಂ, "ತಾವು ಹೀಗೆಲ್ಲಾ ಮಾತನಾಡಬಾರದು. ನಿಮ್ಮಿಂದ ಈ ಮಾತು ಬರುತ್ತದೆ ಎಂದುಕೊಂಡಿರಲಿಲ್ಲ. ಈಗಾದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ತಾವು ಸಲಹೆ ನೀಡಬಹುದೇ ಹೊರತು ಬೆದರಿಸಬಾರದು," ಎಂದು ಸಿಎಂ ಗರಂ ಆಗಿ ಹೇಳಿದ್ದರು.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ