ನಾನೂ ಸಿಎಂ ಆಗುವೆ – ಸೂಸೈಡ್ ಬಾಂಬರ್ ಸ್ಥಿತಿ ನನ್ನದು – ಮಹಾ ನಾಯಕರು ಬೆಳಗಾವಿ ತಂಟೆಗೆ ಬರದಿದ್ದರೆ ಲೇಸು: ಯತ್ನಾಳ

ಮರಾಠಿ ವಿಷಯ ಇಟ್ಟುಕೊಂಡು ನಮ್ಮ ಸಮುದಾಯವನ್ನು ಒಡೆಯುವ ಕೆಲಸ ಮಾಡಬಾರದು. ಶಿವಸೇನೆ ಬಾಳಾಸಾಹೇಬ ಠಾಕ್ರೆಯವರ ಮಾನ. ಮರ್ಯಾದೆಯನ್ನು ಹರಾಜಿಗಿಡುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡುತ್ತಿದ್ದಾರೆ ಎಂದು ಯತ್ನಾಳ ಕಿಡಿಕಾರಿದ್ಧಾರೆ.

news18
Updated:December 31, 2019, 4:42 PM IST
ನಾನೂ ಸಿಎಂ ಆಗುವೆ – ಸೂಸೈಡ್ ಬಾಂಬರ್ ಸ್ಥಿತಿ ನನ್ನದು – ಮಹಾ ನಾಯಕರು ಬೆಳಗಾವಿ ತಂಟೆಗೆ ಬರದಿದ್ದರೆ ಲೇಸು: ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ್
  • News18
  • Last Updated: December 31, 2019, 4:42 PM IST
  • Share this:
ವಿಜಯಪುರ(ಡಿ. 31): ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ.  2024-25ರಲ್ಲಿ ಸಿಎಂ ಆಗುವ ಕನಸು ಹೊಂದಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ತಮಗಿರುವ ಸಿಎಂ ಸ್ಥಾನದ ಆಕಾಂಕ್ಷೆಯನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮತನಾಡುತ್ತಾ ಅವರು, ಗಡಿ, ಭಾಷೆ ವಿವಾದ ಸೇರಿದಂತೆ ನಾನಾ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ. ಅವರು ಸಿಎಂ ಸುತ್ತ ಗಿರಕಿ ಹೊಡೆಯಬಾರದು. ಅಥಣಿ ಮತ್ತು ಕಾಗವಾಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಚಿವರಾಗಿ ಎಂದು ಬೈ ಎಲೆಕ್ಷನ್ ಸಂದರ್ಭದಲ್ಲಿಯೇ ಹೇಳಿದ್ದೆ. ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ಸಚಿವ ಸ್ಥಾನಕ್ಕಾಗಿ ನಾನೇನು ಲಾಬಿ ಮಾಡುವುದಿಲ್ಲ. ನಾನು ಕೇವಲ ಅಭಿವೃದ್ಧಿ ಪರವಾಗಿರುವುದರಿಂದ ಸಿಎಂ ನಾನು ಹೇಳಿದ ಎಲ್ಲ ಕೆಲಸಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಲಕ್ಷ್ಮಣ ಸವದಿ ಅವರ ಹಣೆಬರಹ ಚೆನ್ನಾಗಿದೆ. ಸೋತರೂ ಡಿಸಿಎಂ ಆಗಿದ್ದಾರೆ. ನನ್ನ ಹಣೆಬರಹವೂ ಚೆನ್ನಾಗಿದ್ದರೆ 2024-25ರಲ್ಲಿ ಸಿಎಂ ಆಗುತ್ತೇನೆ ಎಂದು ಯತ್ನಾಳ ತಿಳಿಸಿದರು.

ಇದನ್ನೂ ಓದಿ: ಸಬ್ಸಿಡಿ ದರದಲ್ಲಿ ಮದ್ಯ, ರಾತ್ರಿ 2 ಗಂಟೆವರೆಗೆ ಬಾರ್​​​: 21 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್​; ಸಚಿವ ನಾಗೇಶ್​

ಬಿಜೆಪಿ ಶಾಸಕ ಜಾರಕಿಹೊಳಿ ಹೇಳಿಕೆ ವಿಚಾರ:

ಬೆಳಗಾವಿ ಗ್ರಾಮಾಂತರದಲ್ಲಿ ಮರಾಠಿಗರು ಶಾಸಕರಾಗಬೇಕು ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಬೆಳಗಾವಿ ಜನಪ್ರತಿನಿಧಿಗಳ ಸಮಸ್ಯೆ ಬೇರೆಯೇ ಇದೆ. ಮರಾಠಿಗರನ್ನು ಪ್ರೀತಿ ಮಾಡದಿದ್ದರೆ ಅವರೆಲ್ಲ ಲಗಾ ಹೊಡೆಯುತ್ತಾರೆ ಎಂದು ಹಾಸ್ಯ ಮಾಡಿದರು.

ಅವರೇನು ಮನಸ್ಸಿನಿಂದ ಹೇಳುವುದಿಲ್ಲ. ಜಾರಕಿಹೊಳಿ ಸೇರಿದಂತೆ ಅಲ್ಲಿನ ನಾಯಕರಿಗೆ ಮರಾಠಿ ಭಾಷಿಕರ ಓಟು ಬೇಕು. ಆದರೆ, ನಿಜವಾದ ಮರಾಠ ಶಿವಾಜಿ ಅವರ ಕೇಂದ್ರ ಸ್ಥಾನ ಬೆಂಗಳೂರು. ಶಿವಾಜಿ ಮಹಾರಾಜರ ಶಿಕ್ಷಣ ವಿಜಯಪುರದಲ್ಲಾಗಿದೆ. ಮರಾಠಿ ನಮ್ಮ ದೇಶದ ಒಂದು ಭಾಷೆ. ಇಲ್ಲಿ ಉರ್ದು ಭಾಷೆಯ ಶಾಲೆಗಳಿವೆ. ಮರಾಠಿಗರನ್ನು ನಾವೇಕೆ ವಿರೋಧ ಮಾಡಬೇಕು? ಮರಾಠಿಗರು ನಮ್ಮ ಅಣ್ಣ-ತಮ್ಮಂದಿರಿದ್ದಂತೆ. ಇದನ್ನೆಲ್ಲ ಬಿಟ್ಟು ಅಭಿವೃದ್ಧಿಯ ಬಗ್ಗೆ ಮಾತನಾಡಲಿ. ಇತಿಹಾಸದ ಗತ ವೈಭವವನ್ನು ನೋಡಿದರೆ, ಮಹಾರಾಷ್ಟ್ರದ ಶಿರಡಿ ಬಳಿಯ ಕೋಲಾರದವರೆಗೆ ಕನ್ನಡಿಗರ ಆಡಳಿತವಿತ್ತು. ಇಂದು ದೇಶದಲ್ಲಿ ಬೇರೆ ಬೇರೆ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅವರು ವಿಷಾದಿಸಿದರು.

ಮಹಾರಾಷ್ರದ ಶಿವಸೇನೆ, ಬಿಜೆಪಿ ನಾಯಕರಿಗೆ ಯತ್ನಾಳ ಕಿವಿಮಾತು:ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಮತ್ತು ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ದೇವೇಂದ್ರ ಫಡಣವೀಸ್ ಬೆಳಗಾವಿ ಗಡಿ ಮತ್ತು ಭಾಷೆ ವಿವಾದ ಕೆದಕಿದ ಬಗ್ಗೆ ಯತ್ನಾಳ ಆಕ್ರೋಶ ಹೊರ ಹಾಕಿದ್ದಾರೆ.

ಮರಾಠಿ ವಿಷಯ ಇಟ್ಟುಕೊಂಡು ನಮ್ಮ ಸಮುದಾಯವನ್ನು ಒಡೆಯುವ ಕೆಲಸ ಮಾಡಬಾರದು. ಶಿವಸೇನೆ ಬಾಳಾಸಾಹೇಬ ಠಾಕ್ರೆಯವರ ಮಾನ. ಮರ್ಯಾದೆಯನ್ನು ಹರಾಜಿಗಿಡುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡುತ್ತಿದ್ದಾರೆ. ತಮ್ಮ ಮಗನನ್ನೇ ಮಂತ್ರಿ ಮಾಡಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಹಿಂದುತ್ವದ ಆಧಾರದ ಮೇಲೆ ಒಂದು ಪಕ್ಷ ಕಟ್ಟಿದ್ದರು. ಅವರ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡುತ್ತಿದ್ದಾರೆ. ಹಿಂದುತ್ವದಿಂದ ಹೊರಗೆ ಬಂದಿರುವುದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಗಡಿ ಮತ್ತು ಭಾಷಾ ವಿವಾದ ಕೆದಕುತ್ತಿದ್ದಾರೆ. ಮಹಾಜನ ವರದಿಯನ್ನು ಒಪ್ಪಬೇಕು ಎಂದು ಈ ಹಿಂದೆ ಹೇಳಿದ್ದ ಶರದ್ ಪವಾರ್ ಈಗ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಬಿಜೆಪಿ ಸೇರಿದಂತೆ ಮಹಾರಾಷ್ಟ್ರದ ಎಲ್ಲ ನಾಯಕರು ದೇಶದ ಬಗ್ಗೆ, ಅಖಂಡ ಭಾರತದ ಬಗ್ಗೆ ಚಿಂತನೆ ಮಾಡುವವರಾಗಿದ್ದರೆ ಗಡಿ ವಿವಾದದಲ್ಲಿ ಬೀಳಬೇಡಿ. ಮಹಾರಾಷ್ಟ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ.  ಭಾಷಾ ವಿವಾದದಿಂದ ಪರಿಹಾರ ಸಾಧ್ಯವಿಲ್ಲ ಎಂದು ಯತ್ನಾಳ ಬುದ್ಧಿವಾದ ತಿಳಿಸಿದರು.

ಇದನ್ನೂ ಓದಿ: ಕಣ್ಣು ಕಾಣದ ವಿಶೇಷಚೇತನ ಕೆಎಎಸ್​​ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ

ಜತ್, ದಕ್ಷಿಣ ಸೋಲಾಪುರ, ಅಕ್ಕಲಕೋಟ, ಹೊಸೂರ, ಕಾಸರಗೋಡು, ಆಂಧ್ರ ಪ್ರದೇಶದ ಕೆಲವು ಭಾಗಗಳು ಕರ್ನಾಟಕಕ್ಕೆ ಸೇರಬೇಕಿತ್ತು. ನಾವು ಭಾಷಾ ಸಮಸ್ಯೆಗಳನ್ನು ಪ್ರಸ್ತಾಪಿಸಿ ಜನರ ಮನಸ್ಸು ಒಡೆಯದೇ ಅಲ್ಲಿರುವ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು. ಇಂಥ ಹುಚ್ಚಾಟ ಮಾಡಬಾರದು.  ನೀವಷ್ಟೇ ಅಲ್ಲ, ನಿಮ್ಮ ಮುಂದಿನ ಮಕ್ಕಳೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಿಲ್ಲ ಎಂದು ಯತ್ನಾಳ್ ಖಡಕ್ಕಾಗಿ ಹೇಳಿದರು.

ಸೂಸೈಡ್ ಬಾಂಬರ್ ಪರಿಸ್ಥಿತಿ ನನ್ನದಾಗಿದೆ:

ನನ್ನ ಪರಿಸ್ಥಿತಿ ಸೂಸೈಡ್ ಬಾಂಬರ್ ರೀತಿ ಆಗಿದೆ ಎಂದು ಯತ್ನಾಳ ಇದೇ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದರು. ತಮ್ಮ ಮಾತುಗಳಿಂದಲೇ ಜನಪ್ರಿಯರಾಗಿದ್ದರೂ ಹೈಕಮಾಂಡ್ ಮಟ್ಟದಲ್ಲಿ ಯತ್ನಾಳ ಟೀಕೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಹಾಸ್ಯ ಚಟಾಕಿ ಹಾರಿಸಿದರು.

ಡಿಸಿಎಂ ಸ್ಥಾನದ ವಿಚಾರ ಮತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ ನನಗೆ ನೋಟೀಸ್ ನೀಡಿಲ್ಲ. ಬದಲಾಗಿ ಈ ಬಗ್ಗೆ ಮಾತನಾಡದಂತೆ ಎಸ್‌ಎಂಎಸ್ ಮತ್ತು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಆದರೆ, ನಾನು ನನ್ನ ಮಾತನ್ನು ಹಿಂಪಡೆದಿಲ್ಲ, ನಾನು ವಿಷಾದವನ್ನೂ ವ್ಯಕ್ತಪಡಿಸಿಲ್ಲ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತೊಮ್ಮೆ ತಮ್ಮ ವಾದವನ್ನು ಸಮರ್ಥಿಸಿಕೊಂಡರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 31, 2019, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading