ವಿಜಯಪುರ: ನಾನು ಏನಾದರೂ ಸಿಎಂ (Chief Minister) ಆಗಿ ಇದ್ದಿದ್ದರೆ ಕರ್ನಾಟಕ (Karnataka) ರಾಜ್ಯವನ್ನು ನಂಬರ್ ಒನ್ (Number 1) ಮಾಡಿ ಬಿಡುತ್ತಿದ್ದೆ ಎಂದು ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. ಯಾವುದೇ ನಿರ್ಣಯವನ್ನು ಮುಲಾಜಿಲ್ಲದೆ ತೆಗೆದುಕೊಳ್ಳಬೇಕು. ನಿರ್ಣಯ ಗಟ್ಟಿ ಇರಬೇಕು ಅಲುಗಾಡಬಾರದು. ಇಲ್ಲಿ ಜಾಗ ಕೊಡಬೇಕು ಎಂದರೆ ಕೊಡಬೇಕು, ಕಥೆ ಹೇಳುವಂತಿಲ್ಲ ಎಂದು ಯತ್ನಾಳ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ನಾವೇ ಮುಂದಿನ ಸಲ ಅಧಿಕಾರಕ್ಕೆ ಬರುತ್ತೇವೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದು ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನೀವು ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬೇಡಿ. ಅಧಿಕಾರಿಗಳು ಹೇಳುತ್ತಿರುತ್ತಾರೆ. ಅದೇನು ಸುಡುಗಾಡ ಇರಲಿ, ನಿಮಗೆ ಏನು ತಿದ್ದ ಬೇಕು ತಿದ್ದಿ ಬಿಡಿ. ಕರ್ನಾಟಕ ಅಲುಗಾಡಿಸುವ ಶಕ್ತಿ ಕೇಂದ್ರ ವಿಜಯಪುರದಲ್ಲಿದೆ.
ಇದನ್ನೂ ಓದಿ: DK Shivakumar: ಸ್ವಂತ ಜಿಲ್ಲೆಯಲ್ಲೇ ಡಿಕೆಶಿಗೆ ಮುಖಭಂಗ, 'ಕೈ'ಕೊಟ್ಟು ಜೆಡಿಎಸ್‌ಗೆ ಜೈ ಎಂದ ಚನ್ನಪಟ್ಟಣ ಸಂಭಾವ್ಯ ಅಭ್ಯರ್ಥಿ!
ಮೊದಲು ಹೋಗಿ ಸರ್ ಸರ್ ಅಂತ ಕೈವೊಡ್ಡಿ ಕೇಳುತ್ತಿದ್ದರು. ಆಗ ಏನೋ ನಡಿ ಅಂತ ಹೇಳುತ್ತಿದ್ದರು, ಆದರೆ ಈಗ ನಾವು ಹೋಗಿ ನಿಂತರೆ ಬಸನಗೌಡರದಾ ತಗೊಂಡು ಬಾ ಅಂತ ಸಹಿ ಮಾಡಿಬಿಡುತ್ತಾರೆ. ಇಷ್ಟೆಲ್ಲ ರೊಕ್ಕಾವನ್ನು ಸುಮ್ಮನೆ ತಂದಿವೇನು? ಬೈತಿವಿ ಅಂತ ತಂದಿದ್ದೇವೆ. ಮಂತ್ರಿ ಮಾಡದಿದ್ದರೇನು? ಸಾವಿರಾರು ಕೋಟಿ ರೂಪಾಯಿ ಕೆಲಸ ತಂದಿದ್ದೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಮುಸ್ಲಿಂರ ಮೀಸಲಾತಿ ಕಡಿತ ವಿಚಾರವಾಗಿ ಮಾತನಾಡಿ, ಮುಸ್ಲಿಂ ಸಮುದಾಯದವರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆಗೆ ಲಾಭ ಸಿಗಬೇಕು. ಮೀಸಲಾತಿ ಇವರಪ್ಪನ ಮನೆಯದಾ? ದಲಿತರಿಗೆ ನಾವು ಇನ್ನೂ 2 ಪರ್ಸೆಂಟ್ ಮೀಸಲಾತಿ ಹೆಚ್ಚು ಮಾಡುತ್ತೇವೆ.
ದಲಿತರಿಗೆ ಈಗ ಶೇಕಡಾ 17 ಮಾಡಿದ್ದೇವೆ ಮುಂದೆ ನರೇಂದ್ರ ಮೋದಿ ಸರ್ಕಾರದ 21 ಪರ್ಸೆಂಟ್ ಮಾಡುತ್ತದೆ. ನಮ್ಮ ಐತಿಹಾಸಿಕ ನಿರ್ಣಯದಿಂದ ಕಾಂಗ್ರೆಸ್ ಕಂಗಾಲಾಗಿದೆ. ಕಾಂಗ್ರೆಸ್ ಅಲುಗಾಡಿ ಹೋಗಿದೆ, ಡಿಕೆ ಶಿವಕುಮಾರ್ಗೆ ತಾಕತ್ತಿದ್ದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಚುನಾವಣೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು.
ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು ಸುಲಭ ಅಲ್ಲ
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ವ್ಯಂಗ್ಯವಾಡಿದ ಯತ್ನಾಳ್ ಅವರು, 5 ವರ್ಷ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ, ಅವರನ್ನು ಬಲಿಪಶು ಮಾಡಲಿದ್ದಾರೆ. ಸಿದ್ದರಾಮಯ್ಯ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಬಾರದು, ಏಕೆಂದರೆ ನಾಳೆ ಗೂಂಡಾನನ್ನು ಸಿಎಂ ಮಾಡಿದರೆ ನಾವು, ನೀವು ಸೇರಿಯೇ ಸಾಯುತ್ತೇವೆ ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆ ಕಿಡಿಕಾರಿದರು.
ಅತಿಯಾದ ಮುಸ್ಲಿಂ ತುಷ್ಟೀಕರಣವೇ ಸಿದ್ದರಾಮಯ್ಯ ಅವರ ಈ ಸ್ಥಿತಿಗೆ ಕಾರಣ. ಸಿದ್ದರಾಮಯ್ಯ ಒನ್ ಸೈಡ್ ಹೋಗಿದ್ದಾರೆ, ಎಲ್ಲಾ ಜನಾಂಗಗಳನ್ನು ಪ್ರೀತಿ ಮಾಡಬೇಕು. ಒಂದೇ ಜನಾಂಗವನ್ನು ತಲೆ ಮೇಲೆ ಕೂರಿಸಿಕೊಂಡರೆ ಉಳಿದವರು ಬುದ್ಧಿ ಕಲಿಸುತ್ತಾರೆ. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಗೆಲ್ಲುವುದು ಅಷ್ಟು ಸುಲಭ ಇಲ್ಲ. ಸೋಶಿಯಲ್ ಇಂಜಿನಿಯರಿಂಗ್ ಅಷ್ಟು ಸರಿ ಇಲ್ಲ. ಮೊದಲು ಜನ ಮುಗ್ಧರಿದ್ದರು ವೋಟು ಹಾಕುತ್ತಿದ್ದರು, ಈಗ ಯಾರು ಏನು ಮಾಡಿದ್ದಾರೆ ಎನ್ನುವ ಲಿಸ್ಟ್ ಜನರ ಬಳಿ ಇದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ