ಮಂಗಳೂರು: ದೇಶದಲ್ಲಿ ಕೊರೊನಾ ಮಹಾಮಾರಿ (COVID-19 Pandemic) ಆವರಿಸಿದ ಬಳಿಕ ಜನರ ಜೀವನ ಪದ್ಧತಿಯನ್ನೇ ಬದಲಾಯಿಸಿದೆ. ಜೀವನಕ್ಕಾಗಿ ಬೇರೊಬ್ಬರ ಬಳಿ ಉದ್ಯೋಗ (Job) ಮಾಡುತ್ತಿದ್ದ ಹಲವರು ಇಂದು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಕೊರೊನಾ (Corona Virus) ಮಾಡಿದೆ. ಇದೇ ರೀತಿ ತಮ್ಮ ಉದ್ಯೋಗಕ್ಕೆ ಪೆಟ್ಟು ಬಿದ್ದಾಗ, ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಇದೀಗ ಮನೆ ಮಾತಾಗಿರುವ ದಂಪತಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿದ್ದಾರೆ. ಉಪಯೋಗಿಸಿ ಎಸೆಯುವ ತೆಂಗಿನ ಗೆರಟೆಯಲ್ಲಿ (ತೆಂಗಿನಕಾಯಿ ಚಿಪ್ಪು) (Coconut shell) ಕರಕುಶಲ ವಸ್ತುಗಳನ್ನು ಮಾಡುವ ಮೂಲಕ ಈ ದಂಪತಿ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಆತ್ಮನಿರ್ಭರತೆಯ (Aatmanirbhar) ಕರೆ ಓಗೊಟ್ಟು ಯಶಸ್ವಿನ ಮೆಟ್ಟಲೇರಲಿ ಹೊರಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುಕ್ಕಾಜೆ ನಿವಾಸಿಗಳಾದ ಸಚ್ಚೀಂದ್ರ ಮತ್ತು ಜಯಲಕ್ಷ್ಮಿ ದಂಪತಿ ತಮ್ಮ ಅಪೂರ್ವ ಕರಕುಶಲ ವಸ್ತುಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
ಜೀವನ ನಿರ್ವಹಣೆಗಾಗಿ ಆರಂಭವಾದ ಕೆಲಸ
ದೇಶದಲ್ಲಿ ಕೊರೊನಾ ಲಾಕ್ಡೌನ್ ಹೇರಿಕೆಯಾದ ಸಂದರ್ಭದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸಚ್ಚೀಂದ್ರ ಕುಟುಂಬ ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸಿತ್ತು. ಮನೆಯಲ್ಲೇ ಇರುವ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ಸಿಮೆಂಟ್ ಹೂ ಕುಂಡಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದ ಸಚ್ಚೀಂದ್ರ ಅವರಿಗೆ ಅದರಿಂದ ಹೆಚ್ಚಿನ ಅನುಕೂಲವಾಗಿರಲಿಲ್ಲ.
ಇದೇ ಸಂದರ್ಭದಲ್ಲಿ ಪತ್ನಿ ಜಯಲಕ್ಷ್ಮಿ ತೆಂಗಿನ ಗೆರಟೆಯಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದಕ್ಕೆ ನಿರ್ಧರಿಸಿದ್ದರು. ಮೊದಲಿಗೆ ತಮ್ಮ ಮನೆಗೆ ಬೇಕಾಗುವ ಕರಕುಶಲ ವಸ್ತುಗಳನ್ನು ಗೆರಟೆಯಲ್ಲಿ ತಯಾರಿಸಿದ್ದ ಜಯಲಕ್ಷ್ಮಿ ಅವರಿಗೆ ಈ ವಸ್ತುಗಳಿಗೆ ಬೇಡಿಕೆ ದೊರೆಯುತ್ತಿರುವುದು ಕಂಡು ಬಂದಿದೆ.
ಆಸರೆಯಾದ ಸಂಜೀವಿನಿ ಸಾಲ
ಈ ಕಾರಣಕ್ಕಾಗಿ ಗೆರಟೆಗಳಿಂದ ಆಲಂಕಾರಿಕ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವುದಕ್ಕೆ ನಿರ್ಧರಿಸಿದ್ದರು. ಮೊದ ಮೊದಲು ಕೈಯಿಂದಲೇ ಗೆರಟೆಗಳನ್ನು ಕತ್ತರಿಸುವ, ಹೊಳಪಿಸುವ ಕೆಲಸವನ್ನು ನಿರ್ವಹಿಸಲಾಗುತ್ತಿತ್ತು. ಬಳಿಕ ತಮ್ಮ ಈ ಕಸುಬನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಕಾರಣಕ್ಕಾಗಿ ಸರಕಾರದಿಂದ ದೊರೆಯುವ ಮಂದಾರ ಸಂಜೀವಿನಿ ಸಾಲವನ್ನೂ ಪಡೆದುಕೊಂಡಿದ್ದಾರೆ.
75 ಸಾವಿರ ರೂಪಾಯಿ ಹೂಡಿಕೆ
75 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿರುವ ಜಯಲಕ್ಷ್ಮಿ ಇಂದು ಯಂತ್ರಗಳ ಮೂಲಕ ತನ್ನ ಬಹುಪಾಲು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಪತಿ ಸಚ್ಚೀಂದ್ರರಿಗೆ ಕೆಲಸ ನಿರ್ವಹಿಸುವ ಜಾಗದಲ್ಲಿ ಅವಘಡವೊಂದು ಸಂಭವಿಸಿದ ಕಾರಣ ಹಲವು ತಿಂಗಳು ಮನೆಯಲ್ಲೇ ಉಳಿಯುವಂತಾಗಿತ್ತು.
ಇದೇ ಸಮಯದಲ್ಲಿ ಪತಿಯೂ ಜಯಲಕ್ಷ್ಮಿಯವರಿಗೆ ಸಹಕಾರ ನೀಡುವ ಮೂಲಕ ಗೆರಟೆಯಲ್ಲಿ ಹಲವು ರೀತಿಯ ವಸ್ತುಗಳನ್ನು ಇಬ್ಬರೂ ಸೇರಿ ತಯಾರಿಸಿದ್ದಾರೆ. ಗೆರಟೆಯ ವಿವಿಧ ಬಗೆಯ ದೀಪಗಳು, ಸ್ಯಾನಿಟೈಜರ್ ಬಾಟಲಿ, ಆಕರ್ಷಣೆಯಾಗಿ ದೊಡ್ಡ ಆಕಾರದ ಇರುವೆ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ತಯಾರಿಸಿದ್ದಾರೆ.
ತೆಂಗಿನಕಾಯಿ ಗೆರಟೆಯಲ್ಲಿ ವಿವಿಧ ಕಲಾಕೃತಿಗಳು
ಅಲ್ಲದೆ ಪ್ರತೀ ಮನೆಗೆ ಬೇಕಾಗಿರುವ ಹೂದೋಟಕ್ಕೆ ಅಗತ್ಯವಿರುವ ವಸ್ತುಗಳನ್ನೂ ಗೆರಟೆಯನ್ನೇ ಬಳಸಿ ತಯಾರಿಸಿದ್ದಾರೆ. ಗೆರಟೆಯನ್ನೇ ಬಳಸಿ ತಯಾರಿಸಿದಂತಹ ಹ್ಯಾಂಗಿಗ್ ಪಾಟ್ಗಳು ಇದೀಗ ಭಾರೀ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.
ಈ ಕರಕುಶಲ ವಸ್ತುಗಳ ತಯಾರಿಕೆಗೆ ಬೇಕಾದ ಮೂಲವಸ್ತುವಾದ ಗೆರಟೆಯನ್ನು ಮನೆಯ ಪಕ್ಕದ ಕೃಷಿಕರಿಂದಲೇ ಸಂಗ್ರಹಿಸುತ್ತಾರೆ. ದಂಪತಿಗಳ ಈ ಗೆರಟೆ ಕರಕುಶಲತೆಯನ್ನು ಅರಿತ ಗ್ರಾಮಸ್ಥರು ತಮ್ಮಲ್ಲಿರುವ ತೆಂಗಿನ ಗೆರಟೆಗಳನ್ನೂ ನೀಡುವ ಮೂಲಕ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ.
ಈಗಾಗಲೇ ಹಲವು ರೀತಿಯ ವಸ್ತುಗಳನ್ನು ತಯಾರಿಸಿರುವ ದಂಪತಿ ಇದೀಗ ವಿದ್ಯುತ್ ದೀಪಗಳನ್ನು ಜೋಡಿಸಿಡಬಹುದಾದ ಹ್ಯಾಂಗಿಗ್ ಲೈಟ್ ಗಳನ್ನು ಮಾಡಲು ಆರಂಭಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಗೆರಟೆ ಹ್ಯಾಂಗಿಗ್ ಲೈಟ್ ಗಳೂ ಸಿದ್ಧಗೊಳ್ಳಲಿವೆ.
ಮಾರುಕಟ್ಟೆ ಅನುಭವದ ಕೊರತೆ
ಕೊರೊನಾ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ಆರಂಭಗೊಂಡ ಗೆರಟೆ ಕಲೆ ಇದೀಗ ಒಂದು ಸಣ್ಣ ಉದ್ಯಮದ ರೀತಿಯಲ್ಲಿ ಬದಲಾಗಲಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ್ ಕರೆಗೆ ಅನುಗುಣವಾಗಿ ಪ್ರಕೃತಿಯಲ್ಲೇ ಸಿಗುವ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಸಣ್ಣ ಉದ್ಯಮವನ್ನೂ ದಂಪತಿಗಳು ಆರಂಭಿಸಿದ್ದಾರೆ. ಆದರೆ ಸಮರ್ಪಕವಾದ ಮಾರುಕಟ್ಟೆಯ ಅನುಭವದ ಕೊರತೆಯಿಂದಾಗಿ ಜನರನ್ನು ಸಂಪರ್ಕಿಸುವ ಹಂತಕ್ಕೆ ಈ ದಂಪತಿ ಮುಟ್ಟಿಲ್ಲ.
ಇದನ್ನೂ ಓದಿ: Pearl Farming: ಕೊರೊನಾದಿಂದ ಕೆಲಸ ಹೋಯ್ತು; 25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯ ವ್ಯಕ್ತಿ
ಕರಕುಶಲ ವಸ್ತುಗಳಿಗೆ ಹೆಚ್ಚಿನ ಆದ್ಯತೆಯನ್ನು ಸರಕಾರ ನೀಡುತ್ತಿದ್ದು, ಈ ದಂಪತಿ ತಯಾರಿಸುತ್ತಿರುವ ವಸ್ತುಗಳಿಗೂ ಆದ್ಯತೆ ನೀಡುವ ಮೂಲಕ ಇವರ ಸ್ವ ಉದ್ಯೋಗವನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ ಸರಕಾರ ಮುಂದಾಗಬೇಕಿದೆ.
ಇನ್ನೊಬ್ಬರ ಬಳಿ ದುಡಿಯುವುದಕ್ಕಿಂತ ತಾವೇ ಏನಾದರೂ ಮಾಡಿ ತೋರಿಸಬೇಕು ಎನ್ನುವ ಛಲದಿಂದ ಬಂದ ಈ ದಂಪತಿ ತಮ್ಮ ಸ್ವಂತ ಪ್ರಯತ್ನದ ಮೂಲಕ ಸ್ವಾವಲಂಬಿಗಳಾಗುವತ್ತ ಮುನ್ನಡಿ ಇಡುವ ಮೂಲಕ ಇತರರಿಗೂ ಮಾರ್ಗದರ್ಶಕರಾಗಿ ಹೊರಹೊಮ್ಮಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ