news18-kannada Updated:January 21, 2021, 3:44 PM IST
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಆನೇಕಲ್(ಜ.21): ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್. ಇದೇ ತಿಂಗಳು 26 ನೇ ತಾರೀಖು ರಜೆ ಇದ್ದರೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ, ಚಿಟ್ಟೆ ಪಾರ್ಕ್ ಮತ್ತು ಸಫಾರಿ ಭೇಟಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲಾಗಿದೆ. ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗೆ ವಾಡಿಕೆಯಂತೆ ಪ್ರತಿ ಮಂಗಳವಾರ ವಾರದ ರಜೆ ನೀಡಲಾಗುತ್ತದೆ. ಈ ಬಾರಿ ಗಣರಾಜ್ಯೋತ್ಸವ ಸಹ ಮಂಗಳವಾರ ಇರುವುದರಿಂದ ಉದ್ಯಾನವನದ ಅಧಿಕಾರಿಗಳು ಉದ್ಯಾನವನದ ಸಿಬ್ಬಂದಿಗೆ ರಜೆ ರದ್ದುಗೊಳಿಸಿದ್ದು, ಎಂದಿನಂತೆ ಪ್ರವಾಸಿಗರು ಇದೇ ತಿಂಗಳ 26 ರಂದು ಉದ್ಯಾನವನಕ್ಕೆ ಭೇಟಿ ನೀಡಿ ಅಪರೂಪದ ವನ್ಯಜೀವಿಗಳಗಳನ್ನು ಕಂಡು ಖುಷಿಪಡಬಹುದು ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾ ಹೊಡೆತಕ್ಕೆ ಸಿಲುಕದವರಿಲ್ಲ. ಅದಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಹೊರತಾಗಿಲ್ಲ. ಕೊರೋನಾ ಹಾವಳಿಯಿಂದಾಗಿ ಐದಾರು ತಿಂಗಳು ಕಾಲ ಉದ್ಯಾನವನವನ್ನೇ ಬಂದ್ ಮಾಡಲಾಗಿತ್ತು. ಆದಾಯವಿಲ್ಲದೇ ವನ್ಯಜೀವಿಗಳ ಪೋಷಣೆ ಮಾಡುವುದು ಸಹ ಉದ್ಯಾನವನದ ಅಧಿಕಾರಿಗಳಿಗೆ ಕಷ್ಟವಾಗಿತ್ತು. ಕೊನೆಗೆ ಸರ್ಕಾರದ ಮಾರ್ಗಸೂಚಿ ಮತ್ತು ಕೊರೋನಾ ನಿಯಮಗಳ ಪಾಲನೆ ಮೇರೆಗೆ ಕಳೆದ ನಾಲ್ಕೈದು ತಿಂಗಳಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ, ಚಿಟ್ಟೆ ಪಾರ್ಕ್ ಮತ್ತು ಸಫಾರಿಯಲ್ಲಿನ ಪ್ರಾಣಿ ಪಕ್ಷಿಗಳನ್ನು ಪ್ರವಾಸಿಗರು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.
ಇದೀಗ ಆದಾಯ ಹೆಚ್ಚಿಸುವುದು ಮತ್ತು ಪ್ರವಾಸಿಗರ ಅಪೇಕ್ಷೆ ಮೇರೆಗೆ
ಗಣರಾಜ್ಯೋತ್ಸವದಂದು ಉದ್ಯಾನವನದ ಮೃಗಾಲಯ, ಚಿಟ್ಟೆ ಪಾರ್ಕ್ ಮತ್ತು ಸಫಾರಿ ಸಹ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ ಚಿಟ್ಟೆ ಪಾರ್ಕ್ ಮತ್ತು ಸಫಾರಿಗೆ ಭೇಟಿ ನೀಡಬಹುದು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇನ್ನೂ ಗಣರಾಜ್ಯೋತ್ಸವ ದಿನದಂದು ಸಾರ್ವಜನಿಕ ರಜಾ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಉದ್ಯಾನವನದ ವೀಕ್ಷಣೆಗೆ ಬರುವ ನಿರೀಕ್ಷೆಯಿರುವುದರಿಂದ, ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ ಆನ್ಲೈನ್ ಮೂಲಕವು ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ (http://www.bannerghattabiologicalpark.org) ಎಂದು ಮಾಹಿತಿ ನೀಡಿದ್ದಾರೆ.
Published by:
Latha CG
First published:
January 21, 2021, 3:44 PM IST