ಇನ್ಫೋಸಿಸ್ ಅಧ್ಯಕ್ಷರಿಗೆ ವಿಶಿಷ್ಟ ಗೌರವ - ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ ಸುಧಾಮೂರ್ತಿ ಹೆಸರು ನಾಮಕರಣ

ವನ್ಯಜೀವಿ ಸಂರಕ್ಷಣೆ ಮತ್ತು ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ಅಂತಿಮವಾಗಿ ಸುಧಾ ಎಂಬ ಹೆಸರನ್ನು ಆನೆ ಮರಿಗೆ ನಾಮಕರಣ ಮಾಡಿರುವುದಾಗಿ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್ ತಿಳಿಸಿದ್ದಾರೆ

news18-kannada
Updated:August 28, 2020, 7:55 AM IST
ಇನ್ಫೋಸಿಸ್ ಅಧ್ಯಕ್ಷರಿಗೆ ವಿಶಿಷ್ಟ ಗೌರವ - ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ ಸುಧಾಮೂರ್ತಿ ಹೆಸರು ನಾಮಕರಣ
ಸುಧಾ ಮೂರ್ತಿ
  • Share this:
ಆನೇಕಲ್(ಆ.28): ಕೊರೋನಾ ನಡುವೆಯು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಿಹಿಸುದ್ದಿ ಮೇಲೆ ಸಿಹಿಸುದ್ದಿ ನೀಡುತ್ತಿದೆ. ಇತ್ತೀಚೆಗೆ ತಾನೇ ಕೇವಲ ತಿಂಗಳ ಅಂತರದಲ್ಲಿ ಉದ್ಯಾನವನದ ಎರಡು ಸಾಕಾನೆಗಳು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದವು. ಎರಡು ಮರಿಗಳು ಆರೋಗ್ಯವಾಗಿದ್ದು, ಪ್ರವಾಸಿಗರಿಲ್ಲದೆ ಕಳೆಗುಂದಿದ್ದ ಉದ್ಯಾನವನಕ್ಕೆ ಹೊಸ ಕಳೆ ತಂದಿವು. ಇದೀಗ ಆನೆ ಮರಿಯೊಂದಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿರವರ ಹೆಸರಿಡುವ ಮೂಲಕ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ‌. 

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ಸುವರ್ಣ(45) ಕಳೆದ ಸೋಮವಾರ ಹೆಣ್ಣು ಮರಿಗೆ ಜನ್ಮ ನೀಡಿತ್ತು. ತಾಯಿ ಆನೆ ಮತ್ತು ಮರಿ ಆನೆ ಆರೋಗ್ಯವಾಗಿದ್ದು, ಅಂದಿನಿಂದ ಸೀಗೆಕಟ್ಟೆ ಆನೆ ಬಿಡಾರದಲ್ಲಿ ಮಾವುತರು ಕಾವಾಡಿಗಳು ಹಾರೈಕೆ ಮಾಡುತ್ತಿದ್ದರು. ತಾಯಿ ಸುವರ್ಣ ಮತ್ತು ಇತರೆ ಆನೆಗಳೊಂದಿಗೆ ಮರಿ ಆನೆ ಸ್ವಚ್ಛಂದವಾಗಿ ವಿಹರಿಸುತ್ತಿತ್ತು. ತಾಯಿ ಮತ್ತು ಇತರ ಆನೆಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಉದ್ಯಾನವನದ ಸಿಬ್ಬಂದಿಯ ಕಣ್ಮನ ಸೆಳೆಯುತ್ತಿದ್ದ ಆನೆ ಮರಿಗೆ ಯಾವ ಹೆಸರಿಡಬೇಕು ಎಂದು ಯೋಚಿಸುತ್ತಿದ್ದ ಉದ್ಯಾನವನದ ಅಧಿಕಾರಿಗಳು ಸಾರ್ವಜನಿಕರಿಂದ ಆನ್ಲೈನ್​​ನಲ್ಲಿ ಹೆಸರು ಸೂಚಿಸುವಂತೆ ಮನವಿ ಮಾಡಿದ್ದರು.

ಅದರಲ್ಲಿ ಬಹುತೇಕ ಮಂದಿ ಸರಳ ವ್ಯಕ್ತಿತ್ವದ ಸುಧಾಮೂರ್ತಿರವರ ಹೆಸರು ಸೂಚಿಸಿದ್ದರು. ವನ್ಯಜೀವಿ ಸಂರಕ್ಷಣೆ ಮತ್ತು ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ಅಂತಿಮವಾಗಿ ಸುಧಾ ಎಂಬ ಹೆಸರನ್ನು ಆನೆ ಮರಿಗೆ ನಾಮಕರಣ ಮಾಡಿರುವುದಾಗಿ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್ ತಿಳಿಸಿದ್ದಾರೆ. ಅಂದಹಾಗೆ  ಆನೆ ಮರಿಗೆ ಸುಧಾ ಮೂರ್ತಿ ಹೆಸರು ನಾಮಕರಣ ಮಾಡಿರುವುದು ಸುಧಾಮೂರ್ತಿ ಅಭಿಮಾನಿ ಬಳಗ ಮಾತ್ರವಲ್ಲದೆ ಉದ್ಯಾನವನದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿ ಸಂತಸ ಮನೆ ಮಾಡಿದೆ.

ಇನ್ನೂ ತಿಂಗಳ ಹಿಂದೆ ಉದ್ಯಾನವನದ ಸಾಕಾನೆ ರೂಪಾ(12) ಸಹ ಮುದ್ದಾದ ಗಂಡು ಮರಿಗೆ ಜನ್ಮ ನೀಡಿದ್ದು, ರೂಪಾ ಆನೆಗೆ ಇದು ಎರಡನೇ ಮರಿಯಾಗಿದೆ. 2016ರಲ್ಲಿ ಜನಿಸಿದ ಹೆಣ್ಣು ಮರಿಗೆ ಗೌರಿ ಎಂದು ನಾಮಕರಣ ಮಾಡಲಾಗಿತ್ತು. ಈಗ ಜನಿಸಿರುವ ಗಂಡು ಮರಿಗೆ ಯಾರ ಹೆಸರಿಡಲಿದ್ದಾರೆ ಎಂಬ ಕೂತೂಹಲ ಪ್ರಾಣಿ ಪ್ರಿಯರಲ್ಲಿದ್ದು, ಆನೆ ಮರಿಗೆ ನಾಮಕರಣ ಮಾಡುವವರೆಗೆ ಕಾಯಬೇಕಿದೆ.

ಇದನ್ನೂ ಓದಿ: ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆ ರದ್ಧತಿ?; ಸುಪ್ರೀಂನಿಂದ ಇಂದು ಮಹತ್ವದ ತೀರ್ಪು
Published by: Ganesh Nachikethu
First published: August 28, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading