ನಮ್ಮ ಹಣಕ್ಕೆ (Money) ಸುರಕ್ಷಿತ ಜಾಗ ಎಂದರೆ ಅದು ಬ್ಯಾಂಕ್. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಬೇಲಿಯೇ ಎದ್ದು ಹೊಲ ಮೇಯ್ದ ರೀತಿ ಆಗಿದೆ. ಈಗಿನ ಕಾಲದಲ್ಲಿ ಹಣ ನಮ್ಮ ಮನೆಯಲ್ಲಿ ಇಟ್ಟರೆ ಸುರಕ್ಷಿತ ಅಲ್ಲ ಅಂತ ಎಲ್ಲರೂ ಬ್ಯಾಂಕ್‌ಗಳ ಮೊರೆ ಹೋಗುತ್ತಾರೆ. ಆದರೆ ಈಗ ಈ ಮಾರ್ಗ ಕೂಡ ಯಾಕೋ ಅಸುರಕ್ಷಿತ ಎನ್ನುವಂತೆ ಕಾಣುತ್ತಿದೆ. ಹೌದು, ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಅಲ್ಲಿ ಸುರಕ್ಷಿತವಾಗಿರುತ್ತದೆ ಅಂತ ಅಂದು ಕೊಂಡರೆ ಅಲ್ಲಿಯೂ ಸಹ ಅನೇಕ ರೀತಿಯ ಮೋಸದಾಟಗಳು ನಡೆಯುತ್ತಿವೆ ಅಂತ ಕೆಲವರು ದೂರುವುದನ್ನು ನಾವು ಕೇಳಿರುತ್ತೇವೆ. ಒಟ್ಟಿನಲ್ಲಿ ನಮ್ಮ ಹಣಕ್ಕೆ ಸುರಕ್ಷಿತ ಸ್ಥಳ ಅಂತ ಇಂದಿನ ಕಾಲದಲ್ಲಿ ಯಾವುದು ಉಳಿದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದೆಲ್ಲದರ ಬಗ್ಗೆ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು (Questions) ಮೂಡಬಹುದು ಅಲ್ಲವೇ? ಇಲ್ಲಿ ಹೈದರಾಬಾದಿನಲ್ಲಿ ಒಂದು ಘಟನೆ ನಡೆದಿದೆ ನೋಡಿ. ಅದು ಏನಂತ ತಿಳಿದುಕೊಂಡರೆ ಒಂದು ಕ್ಷಣ ನಿಮಗೆ ಶಾಕ್ (Shock)ಆಗುವುದಂತೂ ನಿಜ.
ಠೇವಣಿದಾರರ ಖಾತೆಗಳಿಂದ 6 ಕೋಟಿ ರೂಪಾಯಿ ಬಾಂಡ್ ಗಳಲ್ಲಿ ಹೂಡಿಕೆ
ಐಡಿಬಿಐ ಬ್ಯಾಂಕಿನಲ್ಲಿ ಟಾರ್ಗೆಟ್ ರೀಚ್ ಮಾಡೋದಕ್ಕೆ ಠೇವಣಿದಾರರ ಹಣ ದುರ್ಬಳಕೆ ಮಾಡಿಕೊಂಡ ಘಟನೆ ನಡೆದಿದೆ. ಠೇವಣಿದಾರರ ಖಾತೆಗಳಿಂದ 6.36 ಕೋಟಿ ರೂಪಾಯಿಗಳನ್ನು ಅವರಿಗೆ ಗೊತ್ತಾಗದಂತೆ ಅಂತ ದೊಡ್ಡ ಮೊತ್ತದ ಹಣವನ್ನು ಬಾಂಡ್ ಗಳಲ್ಲಿ ಹೂಡಿಕೆ ಮಾಡಲು ಅದನ್ನು ಹಾಕಿದ್ದಾರಂತೆ ಎಂಬ ಆರೋಪದ ಮೇಲೆ ಐಡಿಬಿಐ ಬ್ಯಾಂಕಿನ 34 ವರ್ಷದ ರಿಲೇಶನ್ ಶಿಪ್ ಮ್ಯಾನೇಜರ್ ನನ್ನು ಬೆಂಗಳೂರಿನಎಸ್ ಆರ್ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಾಂಡ್ ಗಳಲ್ಲಿ ಹೂಡಿಕೆ ಮಾಡುವಂತೆ ಠೇವಣಿದಾರರನ್ನು ಮನವೊಲಿಸಲು ಆರೋಪಿಗೆ ಬ್ಯಾಂಕ್ ಟಾರ್ಗೆಟ್ ನೀಡಿತ್ತು. ಆದರೆ ಆಕೆ ಆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದಲ್ಲಿ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಆರೋಪಿ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಪ್ಯೂಟಿ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಉದ್ಯೋಗಿಯನ್ನ ಬಂಧಿಸಿದ ಪೊಲೀಸರು
ಈ ಹಗರಣಕ್ಕೆ ಕಾರಣವಾದ ಅನೈತಿಕ ವ್ಯವಹಾರ ಅಭ್ಯಾಸಗಳ ಬಗ್ಗೆ ಆಕೆಯ ಹಿರಿಯ ಉದ್ಯೋಗಿಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸರು ಯೋಜಿಸಿದ್ದಾರೆ.
ಐಡಿಬಿಐ ಬ್ಯಾಂಕಿನ ರಿಲೇಶನ್ ಶಿಪ್ ಮ್ಯಾನೇಜರ್ ಆಗಿರುವ ಭಾರತಿ ನಗರದ ನಿವಾಸಿ ಸಜಿಲಾ ಗುರುಮೂರ್ತಿ ಎಂಬಾಕೆಯನ್ನು ಡೆಪ್ಯುಟಿ ಜನರಲ್ ಮ್ಯಾನೇಜರ್ ಸಂಗಮೇಶ್ವರ್ ಎಸ್.ಎನ್ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಈ ಪ್ರಕರಣದ ಬಗ್ಗೆ ಪೊಲೀಸರು ಹೇಳುವುದೇನು?
ಪೊಲೀಸರ ಪ್ರಕಾರ, ಜೂನ್ 2022 ರಿಂದ ಆರು ತಿಂಗಳ ಕಾಲ ಬ್ಯಾಂಕಿನ ಮಿಷನ್ ರೋಡ್ ಶಾಖೆಯಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಜಿಲಾ, ಠೇವಣಿದಾರರ ಒಪ್ಪಿಗೆಯಿಲ್ಲದೆ ಎಲ್ಐಸಿ ಬಾಂಡ್ ಗಳನ್ನು ಖರೀದಿಸಲು ವಿವಿಧ ಖಾತೆಗಳಿಂದ 1.44 ಕೋಟಿ ರೂಪಾಯಿ, ಗಾಂಧಿ ನಗರ ಶಾಖೆಯಲ್ಲಿ ಒಟ್ಟು 4.92 ಕೋಟಿ ರೂಪಾಯಿಗಳನ್ನು ಅದೇ ರೀತಿಯ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲಾಗಿದೆ ಎಂದು ಅನೇಕ ಗ್ರಾಹಕರು ಶಾಖಾ ವ್ಯವಸ್ಥಾಪಕರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಇದೆಲ್ಲದರ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಯಿತು, ಅದರಲ್ಲಿ ಸಜಿಲಾ ಭಾಗಿಯಾಗಿರುವುದು ಕಂಡು ಬಂದಿದೆ ಮತ್ತು ಈಗ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ವಂಚನೆ, ದುರುಪಯೋಗ ಮತ್ತು ನಂಬಿಕೆ ಉಲ್ಲಂಘನೆಗಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಆಕೆಯನ್ನು ನ್ಯಾಯಾಂಗ ಬಂಧನಕ್ಕೂ ಸಹ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಹಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ