ಮಂಗಳೂರು(ಜೂ.21): ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕವಾಗಿ ನಷ್ಟಹೊಂದಿದ ದುರ್ಬಲ ವರ್ಗದವರಿಗೆ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪನವರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಅಂತೆಯೇ ಆರ್ಥಿಕ ಸಂಕಷ್ಟಕ್ಕೊಳಗಾದವರಿಂದ ಇಎಂಐ ಅನ್ನು ವಸೂಲು ಮಾಡದಂತೆ ಬ್ಯಾಂಕುಗಳಿಗೆ ಮುಖ್ಯಮಂತ್ರಿಗಳು ಆದೇಶವನ್ನು ನೀಡಿದ್ದಾರೆ. ಆದರೆ ಮಂಗಳೂರಿನ ಬೈಕಂಪಾಡಿ ಬ್ರ್ಯಾಂಚ್‌ನ ಕೆನರಾ ಬ್ಯಾಂಕ್ ಆರ್ಥಿಕ ಪ್ಯಾಕೇಜ್‌ನಿಂದ ಬಂದ ಹಣ ಮಾತ್ರವಲ್ಲದೆ ಬ್ಯಾಂಕ್‌ನಲ್ಲಿ ಅಲ್ಪ ಸ್ವಲ್ಪ ಜಮೆ ಮಾಡಿದ್ದ ಹಣವನ್ನು ಗೃಹ ಸಾಲದ ಇಎಂಐ ಗೆ ಕಡಿತಗೊಳಿಸಿರುವ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಆದೇಶವಿದ್ದರೂ ಬ್ಯಾಂಕ್‌ನವರು ಈ ರೀತಿ ಮಾಡಿರುವುದು ನಿಜಕ್ಕೂ ಖಂಡನೀಯ.
ಅಬ್ದುಲ್ ಬಶೀರ್ ಬಡ ರಿಕ್ಷಾ ಚಾಲಕರಾಗಿದ್ದು ಜೀವನ ನಿರ್ವಹಣೆಗೆ ರಿಕ್ಷಾ ಚಲಾಯಿಸುವುದನ್ನೇ ಆಶ್ರಯಿಸಿಕೊಂಡಿದ್ದಾರೆ. ಆದರೆ ಕೋವಿಡ್ ಕಾರಣ ಮಾಡಿದ್ದ ಲಾಕ್‌ಡೌನ್‌ನಿಂದ ಬಶೀರ್ ರಿಕ್ಷಾ ಚಲಾಯಿಸುವುದನ್ನು ನಿಲ್ಲಿಸಿದ್ದರು. ಸುರಿಂಜೆ ಗ್ರಾಮದಲ್ಲಿ ಮನೆಮಾಡಿಕೊಂಡಿರುವ ಇವರು ಮನೆಕಟ್ಟುವ ಸಲುವಾಗಿ ನಾಲ್ಕು ವರ್ಷದ ಹಿಂದೆ ಕೆನರಾ ಬ್ಯಾಂಕ್‌ನಿಂದ 14 ಲಕ್ಷ ಲೋನ್ ಪಡೆದುಕೊಂಡಿದ್ದರು. ತಿಂಗಳಿಗೆ ರೂ 13,165 ಇಎಂಐ ಅನ್ನು ಪಾವತಿಸುತ್ತಿದ್ದರು.
ಆದರೆ ಈ ಬಾರಿಯ ಲಾಕ್‌ಡೌನ್‌ನಲ್ಲಿ ಬ್ಯಾಂಕ್‌ನವರು ಯಾವುದೇ ಸಾಲ ನಿಷೇಧ ಸೌಲಭ್ಯವನ್ನು ನೀಡಿಲ್ಲವಾದ್ದರಿಂದ ಅಬ್ದುಲ್ ಬ್ಯಾಂಕ್‌ನವರನ್ನು ಈ ಕುರಿತು ಕೇಳಿದ್ದಾರೆ. ಅಬ್ದುಲ್ ಅವರು ನಿಯಮಿತವಾಗಿ ಇಎಂಐ ಅನ್ನು ಪಾವತಿ ಮಾಡುತ್ತಿರುವುದರಿಂದ ಒಂದೆರಡು ತಿಂಗಳು ಇಎಂಐ ಪಾವತಿ ಮಾಡದೇ ಇದ್ದರೂ ತೊಂದರೆ ಇಲ್ಲವೆಂದು ಬ್ರ್ಯಾಂಚ್ ನಿರ್ವಾಹಕರು ತಿಳಿಸಿದ್ದಾರೆ.
ಆದಾಗ್ಯೂ ಅಬ್ದುಲ್ ಖಾತೆಯಲ್ಲಿದ್ದ ರೂ 2,738 ಹಣವನ್ನು ಇಎಂಐ ವಿಳಂಬ ದಿನಾಂಕದ ಶುಲ್ಕವನ್ನು ಬ್ಯಾಂಕ್‌ನವರು ಕಡಿತಗೊಳಿಸಿದ್ದು, ಅಬ್ದುಲ್ ಖಾತೆಯಲ್ಲಿ ಶೂನ್ಯ ಮೊತ್ತವಿತ್ತು. ಆದರೆ ಶುಕ್ರವಾರ ಅಬ್ದುಲ್ ಎಸ್‌ಎಂಎಸ್ ನೋಡುತ್ತಿದ್ದಂತೆ ಆಶ್ಚರ್ಯಚಕಿತರಾಗಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ ರೂ 3,000 ಹಣವನ್ನು ಖಾತೆಗೆ ಜಮಾ ಮಾಡಲಾಗಿತ್ತು, ಅಂತೆಯೇ ಈ ಹಣವನ್ನು ಬ್ಯಾಂಕ್‌ನವರು ಇಎಂಐಗಾಗಿ ಕಡಿತಗೊಳಿಸಿರುವ ಸಂದೇಶವೂ ಬಂದಿತ್ತು.
ನನ್ನ ಇಬ್ಬರು ಪುತ್ರರು ಲಾಕ್‌ಡೌನ್ ಕಾರಣ ಉದ್ಯೋಗವಿಲ್ಲದೆ ಮನೆಯಲ್ಲಿದ್ದಾರೆ. ನಾಲ್ಕು ಮಕ್ಕಳಿರುವ ನನ್ನ ಕುಟುಂಬದ ನಿರ್ವಹಣೆ ದುಸ್ತರವಾಗಿದೆ. ಸಾಲದಿಂದ ಮುಕ್ತಿ ಹೊಂದಲು ನನ್ನ ಮನೆಯನ್ನು ಮಾರುವ ನಿರ್ಧಾರಕ್ಕೆ ನಾನು ಬಂದಿದ್ದೇನೆ ಎಂದು ಅಬ್ಧುಲ್ ದುಃಖದಿಂದ ಹೇಳುತ್ತಾರೆ. ಬಶೀರ್ ಹೇಳುವಂತೆ ನಾನು ಬ್ಯಾಂಕ್‌ಗೆ ಇಎಂಐ ಅನ್ನು ಲಾಕ್ಡೌನ್ ಕಾರಣ ಕಟ್ಟಲಿಲ್ಲ. ಕಳೆದ ವರ್ಷದಂತೆ ಸರಕಾರವು ಇಎಂಐ ಕಟ್ಟುವುದರಿಂದ ವಿನಾಯಿತಿ ನೀಡಿದ್ದರೆ ಆಗುತ್ತಿತ್ತು.ಕಳೆದ ವರ್ಷ ವಿನಾಯಿತಿ ಇದ್ದರೂ ನಿಯಮಿತ ಇಎಂಐಯೊಂದಿಗೆ ಬ್ಯಾಂಕ್ ರೂ 7,000 ಅನ್ನು ದಂಡವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಬ್ರ್ಯಾಂಚ್ ಮ್ಯಾನೇಜರ್ ಉಮೇಶ್ ಅವರು ಬಶೀರ್ ಅವರು ಯಾವುದೇ ವಿನಂತಿಯನ್ನು ಮಾಡಿಲ್ಲ. ಅಟೋ ಡೆಬಿಟ್ ನೀತಿಯ ಪ್ರಕಾರ ನಿಗದಿತ ದಿನಾಂಕಕ್ಕೆ ಸರಿಯಾಗಿ ಇಎಂಐ ಮೊತ್ತವನ್ನು ಅವರ ಖಾತೆಯಿಂದ ಕಡಿತಗೊಳಿಸಲಾಗಿದೆ. ಇನ್ನು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಫೋನ್ ಮತ್ತು ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ.
ಅಟೋ ಡೆಬಿಟ್ ವ್ಯವಸ್ಥೆಯಡಿಯಲ್ಲಿ ಸ್ವಲ್ಪವಾದರೂ ಮೊತ್ತವನ್ನು ಇರಿಸದೇ ಸಂಪೂರ್ಣ ಪರಿಹಾರ ನಿಧಿಯ ಮೊತ್ತವನ್ನು ಪಡೆದುಕೊಳ್ಳಲಾಗಿದೆ. ನಾನು ಕಷ್ಟದಲ್ಲಿದ್ದೇನೆ ಎಂದು ಬಶೀರ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ