ಬೆಂಗಳೂರು ಕೇಂದ್ರದಲ್ಲಿ ರಂಗೇರಿದ ತ್ರಿಕೋನ ಸ್ಪರ್ಧೆ: ಯಾರಿಗೆ ಒಲಿಯಲಿದೆ ಗೆಲುವು?

Lok Sabha Election 2019 : ಪ್ರಬಲ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಿರುವ ಬೆಂಗಳೂರು ಕೇಂದ್ರದಲ್ಲಿ ಸಮೀಕ್ಷೆಗಳು ಏನೇ ಹೇಳಿದರೂ ಫಲಿತಾಂಶದ ದಿನದವರೆಗೆ ಮತದಾರ ಯಾವ ಅಭ್ಯರ್ಥಿಯ ಪರ ಒಲವು ತೋರುತ್ತಾನೆ ಎಂದು ಊಹಿಸುವುದು ಕಷ್ಟ.

ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು

ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು

  • News18
  • Last Updated :
  • Share this:
ಲೋಕಸಭಾ ಚುನಾವಣೆ-2019 ಗರಿಗೆದರಿದೆ. ದೇಶದ  543 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳು ಮಾತ್ರ ನಾನಾ ಕಾರಣಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಈ ಪೈಕಿ ರಾಜ್ಯದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೂ ಒಂದು.

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿ.ಸಿ. ಮೋಹನ್ ಹಾಗೂ ಕಾಂಗ್ರೆಸ್ ಪಕ್ಷದಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸುವುದು ತಿಂಗಳ ಹಿಂದೆಯೇ ಬಹುತೇಕ ಖಚಿತವಾಗಿತ್ತು. ಆದರೆ, ಎಲ್ಲಾ ವೇದಿಕೆಯಲ್ಲೂ  ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಡೆಯನ್ನು ಟೀಕಿಸುತ್ತಿದ್ದ ಚಿತ್ರನಟ ಪ್ರಕಾಶ್ ರೈ ಸ್ಪರ್ಧೆಯೊಂದಿಗೆ ಈ ಕಣ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಪ್ರಮುಖ ನಾಯಕರ ಗಮನ ಸೆಳೆದಿತ್ತು. ಪರಿಣಾಮ ಬೆಂಗಳೂರು ಕೇಂದ್ರ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ.

ಏ.18 ರಂದು ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಮತದಾರರ ಒಲವು ಯಾರ ಪರವಿದೆ? ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು? ಮತಗಟ್ಟೆ ಸಮೀಕ್ಷೆಗಳ ವಿಶ್ಲೇಷಣೆ ಏನು? ಯಾರ ಪರವಿದೆ ಜಾತಿ ಸಮೀಕರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

ಬೆಂಗಳೂರು ಕೇಂದ್ರದ ಪರಿಚಯ : ಎಲ್ಲಾ ಭಾಷಿಕರು ಹಾಗೂ ಎಲ್ಲಾ ಜಾತಿ ಧರ್ಮದ ಜನರಿಗೆ ನೆಲೆ ಕಲ್ಪಿಸುವ ಮೂಲಕ ಬೆಂಗಳೂರಿನಲ್ಲೆ ಇದ್ದಾಗ್ಯೂ ಮಿನಿ ಭಾರತದಂತೆ ಗೋಚರಿಸುವ ಬೆಂಗಳೂರು ಕೇಂದ್ರ, ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಠವಾದ ಹಾಗೂ ಅಷ್ಟು ಸುಲಭಕ್ಕೆ ಯಾರ ಅಂಕೆಗೂ ನಿಲುಕದ ಕ್ಷೇತ್ರಗಳಲ್ಲೊಂದು.

ಇದನ್ನೂ ಓದಿ : ಪ್ರಕಾಶ್ ರೈ ಸಾಧ್ಯವಾದ್ರೆ 3 ಕಾಸಿಗೆ ಮಾನಹಾನಿ ಕೇಸು ದಾಖಲಿಸಲಿ: ಪ್ರತಾಪ್ ಸಿಂಹ ತಿರುಗೇಟು

ಗಾಂಧಿ ನಗರ, ಸರ್ವಜ್ಞ ನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಮಹದೇವಪುರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಬೆಂಗಳೂರು ಕೇಂದ್ರದಲ್ಲಿ ಒಟ್ಟು 22 ಲಕ್ಷ ಮತದಾರರಿದ್ದಾರೆ. ಈ ಪೈಕಿ.5.5 ಲಕ್ಷ ತಮಿಳರು ಹಾಗೂ 4.5 ಲಕ್ಷ ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯ ಇಲ್ಲಿ ನಿರ್ಣಾಯಕ. 2 ಲಕ್ಷಕ್ಕೂ ಅಧಿಕ ತೆಲುಗು ಭಾಷಿಕರು, 3 ಲಕ್ಷ ದಲಿತರು ಹಾಗೂ ಸುಮಾರು 1.5 ಲಕ್ಷ ಕ್ರೈಸ್ತರೂ ಈ ಕ್ಷೇತ್ರದಲ್ಲಿದ್ದಾರೆ. ಇದಲ್ಲದೆ ಗಾಣಿಗ, ಕುರುಬ, ಒಕ್ಕಲಿಗ ಲಿಂಗಾಯತ ಹಾಗೂ ಉತ್ತರ ಭಾರತ ಮೂಲದ ಮಾರ್ವಾಡಿಗಳ ಸಂಖ್ಯೆಯೂ ಈ ಕ್ಷೇತ್ರದಲ್ಲಿ ಗಣನೀಯವಾಗಿದೆ. ಇಂತಿಪ್ಪ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಪಿ.ಸಿ. ಮೋಹನ್

ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಯಾರು ಗೆಲ್ಲಬೇಕು ಎಂದು ಪ್ರಬಲ ಜಾತಿಗಳು ನಿರ್ಣಯಿಸಿದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಮಾತ್ರ ಗೆಲ್ಲುವ ಅಭ್ಯರ್ಥಿಯನ್ನು ತಮಿಳು ಹಾಗೂ ತೆಲುಗು ಭಾಷಿಕರು ನಿರ್ಣಯಿಸುವುದು ವಿಶೇಷ.  2009 ಹಾಗೂ 2014ರಲ್ಲಿ ಇವರ ಆಯ್ಕೆ ಬಿಜೆಪಿಯಾಗಿತ್ತು. ಪರಿಣಾಮ ಪಿ.ಸಿ. ಮೋಹನ್ ಎರಡು ಬಾರಿ ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು.

ಇದನ್ನೂ ಓದಿ : ಲೋಕಸಭಾ ಚುನಾವಣೆ: ಸಿಎಂ ಕೇಜ್ರಿವಾಲ್​​​- ಪ್ರಕಾಶ್​​ ರೈ ಭೇಟಿ: ಸಂಪೂರ್ಣ ಬೆಂಬಲ ನೀಡುವುದಾಗಿ ಆಪ್​​ ಘೋಷಣೆ!

ಕ್ಷೇತ್ರದಲ್ಲಿ ಶೇ.50ರಷ್ಟು ಭಾಗಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸ್ಲಂ ಭಾಗದ ಜನರಿಗೆ ಹಕ್ಕುಪತ್ರವಿಲ್ಲ. ರಸ್ತೆ, ಸಾರಿಗೆ, ವೈದ್ಯಕೀಯ, ನಿರುದ್ಯೋಗ, ನೈರ್ಮಲ್ಯ ಸೇರಿದಂತೆ ಈ ಕ್ಷೇತ್ರವನ್ನು ನಾನಾ ಸಮಸ್ಯೆಗಳು ಕಾಡುತ್ತಿವೆ.

ಮೂರನೇ ಬಾರಿಯೂ ಅರಳುತ್ತಾ ಕಮಲ? : ಒಂದು ಕಾಲದಲ್ಲಿ ಕಾಂಗ್ರೆಸ್ ಕೋಟೆ ಎಂದೇ ಹೆಸರಾಗಿದ್ದ ಬೆಂಗಳೂರು ಕೇಂದ್ರ. ಕಳೆದ ಒಂದು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ಇದಕ್ಕೆ ಕಾರಣ ಬಿಜೆಪಿ ಕಡೆಗೆ ವಾಲಿರುವ ತಮಿಳು ಮತದಾರರು ಎನ್ನುತ್ತಿವೆ ಚುನಾವಣಾ ವಿಶ್ಲೇಷಣೆಗಳು.

ಒಂದು ಕಾಲದಲ್ಲಿ ಕಾಂಗ್ರೆಸ್ ಪರವಾಗಿದ್ದ ತಮಿಳು, ತೆಲುಗು ಹಾಗೂ ದಲಿತ ಮತಗಳು ಕಳೆದೆರಡು ಚುನಾವಣೆಯಲ್ಲಿ ಬಿಜೆಪಿ ಪರ ಚಲಾವಣೆಯಾಗುತ್ತಿದೆ. ಅದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಎರಡೂ ರಾಜ್ಯಗಳ ಸಾಮರಸ್ಯಕ್ಕಾಗಿ ಬಹುಪಾಲು ತಮಿಳರೇ ಇರುವ ಸರ್ವಜ್ಞ ನಗರದಲ್ಲಿ ತಮಿಳಿನ ದಾರ್ಶನಿಕ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ರಾಜ್ಯ ಸರಕಾರದ ಈ ನಡೆಯಿಂದಾಗಿ ಬಹುಪಾಲು ತಮಿಳರೇ ಇರುವ ಈ ಕ್ಷೇತ್ರದ ಮತಗಳು ಬಿಜೆಪಿಯ ಕಡೆ ವಾಲಿತ್ತು. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಎರಡೆರಡು ಬಾರಿ ಗೆಲುವು ಸಾಧಿಸಿದ್ದರು.

ಆದರೆ, ಈ ಬಾರಿ ಮೋಹನ್ ಗೆಲುವು ಅಷ್ಟು ಸುಲಭವಲ್ಲ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.

ಇದನ್ನೂ ಓದಿ : ನಾನೇಕೆ ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಸುತ್ತಿದ್ದೇನೆ ಗೊತ್ತೇ? ಪ್ರಕಾಶ್​ ರೈ

ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ ಮೋಹನ್​ ಬಗ್ಗೆ ಕ್ಷೇತ್ರದಲ್ಲಿ ಎಲ್ಲಾ ಜನರ ನಡುವೆ ಒಳ್ಳೆಯ ಹೆಸರೇನೋ ಇದೆ. ಆದರೆ ಇದರ ಜತೆಗೆ 10 ವರ್ಷದಿಂದ ಸರಿಯಾದ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಅಪವಾದವೂ ಅಂಟಿಕೊಂಡಿದೆ.

ಪಿ.ಸಿ. ಮೋಹನ್ ತಮ್ಮ ಅವಧಿಯಲ್ಲಿಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಕಿರು ಅರಣ್ಯ ಹಾಗೂ ಕೆಲವು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿದ್ದು ಬಿಟ್ಟರೆ ಮೋಹನ್ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಅಲ್ಲದೆ ಸಂಸದರ ನಿಧಿಯನ್ನೂ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬುದು ಅವರ ಮೇಲಿನ ಗುರುತರ ಆರೋಪ.

ಬೆಂಗಳೂರಿನ ಸ್ಲಂಗಳ ಪೈಕಿ ಶೇ. 60 ಸ್ಲಂ ಪ್ರದೇಶಗಳು ಗಾಂಧಿನಗರ, ಸರ್ವಜ್ಞನಗರ, ಶಾಂತಿನಗರ ಹಾಗೂ ಸಿ.ವಿ ರಾಮನ್ ನಗರದಲ್ಲೇ ಇದೆ. ಇಲ್ಲಿ ವಾಸಿಸುವ ಬಹುಪಾಲು ಜನ ನಿರ್ಣಾಯಕರಾದ ತಮಿಳು ಹಾಗೂ ತೆಲುಗು ಮತದಾರರು. ಇಲ್ಲಿನ ನಿವಾಸಿಗಳಿಗೆ ಈವರೆಗೆ ಯಾವ ಸರ್ಕಾರವೂ ಹಕ್ಕುಪತ್ರ ನೀಡಿಲ್ಲ. ಕಳೆದ ಚುನಾವಣೆ ವೇಳೆ ಪಿ.ಸಿ.ಮೋಹನ್ ಹಕ್ಕುಪತ್ರ ನೀಡುವ ಆಶ್ವಾಸನೆ ನೀಡಿದ್ದರಾದರೂ ಕೊಟ್ಟ ಮಾತು ಈಡೇರಿಸಿಲ್ಲ. ಹೀಗಾಗಿ ತಮಿಳು ಹಾಗೂ ತೆಲುಗು ಮತದಾರರು ಈಬಾರಿ ಬಿಜೆಪಿಗೆ ಬೆನ್ನು ತೋರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಇದಲ್ಲದೆ ಬಹುತೇಕ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕ ಸಮುದಾಯದವರನ್ನೇ ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವ ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮೋದಿ ವಿರೋಧಿ ಅಲೆ ಇದೆ ಎನ್ನಲಾಗುತ್ತಿದೆ. ಮೋದಿ ಕೊಟ್ಟ ಭರವಸೆಗಳು ಈಡೇರಿಸಿಲ್ಲ ಎಂಬುದು ಇಲ್ಲಿನ ಸಾಮಾನ್ಯ ಮತದಾರರ ಅಂಬೋಣ. ಜನರ ಇಂತಹ ಮನಸ್ಥಿತಿ ಈಬಾರಿ ಬಿಜೆಪಿಗೆ ದುಬಾರಿಯಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ : ಸಮೀಕ್ಷೆಯೇ ಬೇರೆ, ನಿಜಾಂಶವೇ ಬೇರೆ, ಮೋದಿ ಗೆದ್ದು ತೋರಿಸಲಿ; ಪ್ರಕಾಶ್​ ರೈ ಸವಾಲು

ಪ್ರಭಾವ ಬೀರತ್ತಾ ರೈ ಸವಾರಿ :  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ #Just Asking ಸಂಘಟನೆ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಾ ಬಿಜೆಪಿಯ ಬೆವರಿಳಿಸಿದವರು ಚಿತ್ರ ನಟ ಪ್ರಕಾಶ್ ರಾಜ್. ಆದರೆ, ತೀರಾ ಅನಿರೀಕ್ಷಿತವಾದ ಪ್ರಕಾಶ್ ರೈ ರಾಜಕೀಯ ಪ್ರವೇಶವನ್ನು ಯಾರೆಂದರೆ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಪ್ರಕಾಶ್ ರೈ ದಿನದಿಂದ ದಿನಕ್ಕೆ ಜನರ ನಡುವಿನ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಪ್ರಣಾಳಿಕೆ ಬಿಡುಗಡೆ ಮಾಡಿರುವ ಅವರು, ಪ್ರತಿದಿನ ಸ್ಲಂಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ಸ್ಲಂ ನಿವಾಸಿಗಳಿಗೂ ಹಕ್ಕುಪತ್ರ ನೀಡುವ ಸ್ವಚ್ಚ ನಿರ್ಮಲ ನಗರ ನಿರ್ಮಾಣದ ಭರವಸೆಯನ್ನೂ ನೀಡುತ್ತಿದ್ದಾರೆ. ಇಂತಹ ಆಶ್ವಾಸನೆಗಳು ಸಾಮಾನ್ಯವಾಗಿ ಜನರಲ್ಲಿ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಪರಿಣಾಮ ರೈ ಪ್ರಚಾರಕ್ಕೆ ಅಸಂಖ್ಯಾತ ಜನ ಸೇರುತ್ತಿದ್ದಾರೆ. ಈ ಬೆಳವಣಿಗೆ ಸಾಮಾನ್ಯವಾಗಿ ಬಿಜೆಪಿಗೆ ಕಂಟಕವಾದರೂ ಅಚ್ಚರಿ ಇಲ್ಲ. ಆದರೆ, ಇದು ಬಿಜೆಪಿಗಿಂತ ಕಾಂಗ್ರೆಸ್​ಗೆ ಹೆಚ್ಚು ಕಂಟಕ ಎಂಬುದು ಕಟು ವಾಸ್ತವ.

ರಿಜ್ವಾನ್ ಅರ್ಷದ್ ಮುಂದಿದೆ ದೊಡ್ಡ ಸವಾಲು : ಎನ್​ಎಸ್​ಯುಐ ಕಾಲೇಜು ಅಧ್ಯಕ್ಷನಾಗುವ ಮೂಲಕ ತನ್ನ ರಾಜಕೀಯ ಪಯಣ ಆರಂಭಿಸಿದ್ದ ರಿಜ್ವಾನ್ ಅರ್ಷದ್ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು. ತದನಂತರ 2014ರ ಲೋಕಸಭಾ ಟಿಕೆಟ್ ಸಹ ಅವರನ್ನು ಅರಸಿ ಬಂದಿತ್ತು. ಆದರೆ ಕ್ಷೇತ್ರದ ಜನರ ನಡುವೆ ಅವರಿಗೆ ಸಾಕಷ್ಟು ಪರಿಚಯವಿರಲಿಲ್ಲ. ಪರಿಣಾಮ ಆ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಎದುರು ಬರೋಬ್ಬರಿ 1.4 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಇದನ್ನೂ ಓದಿ : ಎಲ್ಲೀದ್ದೀರಿ ಪಿ.ಸಿ. ಮೋಹನ್?: ಚುನಾವಣೆ ಸಂದರ್ಭದಲ್ಲೂ ಜನರ ಕೈಗೆ ಸಿಗದಿದ್ದರೆ ಹೇಗೆ? ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪ್ರಶ್ನೆ

ಆದರೆ, ಈ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಕ್ಷೇತ್ರದ ಅಭ್ಯರ್ಥಿ ಜೊತೆಗೆ ಮತದಾರರ ಭೇಟಿ ಮಾಡಿಸುವ ಸಲುವಾಗಿ ‘ನ್ಯೂಸ್​ 18 ಕನ್ನಡ’ ‘ಲೋಕಸಭಾ ಚುನಾವಣೆ-2019 ಮಹಾ ಡಿಬೇಟ್’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಜನರ ಪ್ರಶ್ನೆಗಳಿಗೆ ಹೆದರಿದ್ದ ಸಂಸದ ಪಿ.ಸಿ.ಮೋಹನ್ ಕಾ್ರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಎಂದರೆ ಕ್ಷೇತ್ರದಲ್ಲಿ ಬಿಜೆಪಿ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದನ್ನು ನೀವೆ ಊಹಿಸಿಕೊಳ್ಳಿ.

ಇವೆಲ್ಲಾ ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಬಾರಿ ಕಾಂಗ್ರೆಸ್​ ಪಾಲಿಗೆ ಧನಾತ್ಮಕ ಅಂಶಗಳಾಗಿದ್ದವು. ಇದಲ್ಲದೆ ಕ್ಷೇತ್ರದಲ್ಲಿರುವ 4.5 ಲಕ್ಷ ಮುಸ್ಲಿಂ ಮತದಾರರು ಕಾಂಗ್ರೆಸ್​ನ ಪಾರಂಪರಿಕ ಮತವಾಗಿದ್ದು ಈ ಬಾರಿ ಕಾಂಗ್ರೆಸ್ ಬಿಜೆಪಿಗೆ ಕಠಿಣ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳೂ ಇವೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಪ್ರಕಾಶ್ ರೈ ಪ್ರವೇಶದೊಂದಿಗೆ ಕ್ಷೇತ್ರದ ಚಿತ್ರಣ ಬದಲಾಗಿದೆ.

ಚಿತ್ರ ನಟ ಪ್ರಕಾಶ್ ರೈ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕ ಮತದಾರರ ಪೆಟ್ಟಿಗೆ ಕೈ ಹಾಕುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಇದು ಸಾಮಾನ್ಯವಾಗಿ ಕಾಂಗ್ರೆಸ್​ಗೆ ನುಂಗಲಾರದ ತುತ್ತಾದರೆ ಬಿಜೆಪಿಗೆ ಇದರಿಂದ ಲಾಭವಾಗುವುದು ಖಚಿತ ಎನ್ನಲಾಗುತ್ತಿದೆ.

ಆದರೂ, ಪ್ರಬಲ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಿರುವ ಬೆಂಗಳೂರು ಕೇಂದ್ರದಲ್ಲಿ ಸಮೀಕ್ಷೆಗಳು ಏನೇ ಹೇಳಿದರೂ ಫಲಿತಾಂಶದ ದಿನದವರೆಗೆ ಮತದಾರ ಯಾವ ಅಭ್ಯರ್ಥಿಯ ಪರ ಒಲವು ತೋರುತ್ತಾನೆ ಎಂದು ಊಹಿಸುವುದು ಕಷ್ಟ.
First published: