ಬೆಂಗಳೂರು (ಜು.21): ಬೆಂಗಳೂರಿನಲ್ಲಿ ಸೋಮವಾರ ಭಾರೀ ಮಳೆ ಸುರಿದಿದೆ. ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ. ದಾಸರಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ಹಲವು ಅಪಾರ್ಟ್ಮೆಂಟ್, ಮನೆಗಳಿಗೆ ನುಗ್ಗಿತ್ತು. ಇಲ್ಲಿಯ ರಸ್ತೆಗಳು ನದಿಗಳಂತಾಗಿದ್ದವು. ಇಂದು ಕೂಡ ಬೆಂಗಳೂರಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸೋಮವಾರ ಸಂಜೆ ಚಿಕ್ಕದಾಗಿ ಮಳೆ ಸುರಿದಿತ್ತು. ರಾತ್ರಿ 11 ಗಂಟೆ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಮಳೆ ಆಗಿತ್ತು. ಈ ಮಳೆ ಹಲವು ಗಂಟೆಗಳ ಕಾಲ ಮುಂದುವರಿದೇ ಇತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್,ಲ ಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್ ಆರ್ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.
ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ ದಾಸರಹಳ್ಳಿ ಹಾಗೂ ಸುತ್ತಮುತ್ತ ಮಳೆಯ ರೌದ್ರನರ್ತನವಾಗಿತ್ತು. ದಾಸರಹಳ್ಳಿಯ ಚೊಕ್ಕಸಂದ್ರದ ರುಕ್ಮಿಣಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿಯ ರಸ್ತೆಗಳು ಕರೆಯಂತಾಗಿ ಸ್ಥಳೀಯರು ಪರದಾಡುವಂತಾಯಿತು. ತಗ್ಗಿದ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರು ಕಂಗಾಲಾದರು.
ಇಂದು ಸಂಜೆ ಹಾಗೂ ರಾತ್ರೆ ವೇಳೆಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಇನ್ನು, ಬುಧವಾರ ಕೂಡ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
ಇನ್ನು, ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಜನರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಏಕೆಂದರೆ ಬೆಂಗಳೂರಲ್ಲಿ ಸದ್ಯ ಒಂದು ವಾರ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಜನರು ಅಷ್ಟಾಗಿ ಹೊರ ಬರುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ