Bengaluru Weather: ಬೆಂಗಳೂರಲ್ಲಿ ರಾತ್ರಿಯಿಡೀ ವರುಣನ ಅಬ್ಬರ; ಮಳೆ ಇನ್ನೂ ಎಷ್ಟು ದಿನ ಮುಂದುವರಿಯಲಿದೆ ಗೊತ್ತಾ?

ಅಬ್ಬರದ ಮಳೆಗೆ ರಸ್ತೆಗಳೆಲ್ಲ ಬಹುತೇಕ ನದಿಗಳಂತಾಗಿದ್ದವು. ರಾತ್ರಿಯಾದ್ದರಿಂದ ಯಾರಿಗೂ ಅಷ್ಟೊಂದು ಸಮಸ್ಯೆ ಉಂಟಾಗಿಲ್ಲ. ಇನ್ನು, ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಆಗಸ್ಟ್​ 31): ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ವರುಣ ಆರ್ಭಟಿಸಿದ್ದಾನೆ. ಭಾನುವಾರ ರಾತ್ರಿ ಆರಂಭವಾದ ಮಳೆ ಸೋಮವಾರ ಮುಂಜಾನೆವರೆಗೂ ಮುಂದುವರಿದೇ ಇತ್ತು. ಮಳೆಯ ಜೊತೆಗೆ ಗುಡುಗು-ಮಿಂಚು ಕೂಡ ಜೋರಾಗಿಯೇ ಇತ್ತು.

    ಭಾನುವಾರ ರಾತ್ರಿ 8 ಗಂಟೆ ಸುಮಾರಿ ಮಿಂಚು ಆರಂಭವಾಗಿತ್ತು. ನಂತರ ನಿಧಾನವಾಗಿ ದೊಡ್ಡ ಪ್ರಮಾಣದಲ್ಲಿ ಗುಡುಗಲು ಆರಂಭವಾಗಿತ್ತು. ಏಕಾಏಕಿ ಕರಿಮೋಡಗಳೆಲ್ಲ ಒಂದೆಡೆ ಸೇರಿ 11 ಗಂಟೆ ಸುಮಾರಿಗೆ ಅಬ್ಬರದ ಮಳೆ ಸುರಿಯಲು ಆರಂಭವಾಗಿತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.

    ಇನ್ನು, ಅಬ್ಬರದ ಮಳೆಗೆ ರಸ್ತೆಗಳೆಲ್ಲ ಬಹುತೇಕ ನದಿಗಳಂತಾಗಿದ್ದವು. ರಾತ್ರಿಯಾದ್ದರಿಂದ ಯಾರಿಗೂ ಅಷ್ಟೊಂದು ಸಮಸ್ಯೆ ಉಂಟಾಗಿಲ್ಲ. ಇನ್ನು, ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಜನರು ಫ್ಯಾನ್​, ಎಸಿ ಇಲ್ಲದೆ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.

    ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಸೆಖೆ ಕಾಣಿಸಿಕೊಂಡಿತ್ತು. ಯಾಕಿಷ್ಟು ಸೆಖೆಯಪ್ಪ ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ರಾತ್ರಿಯಿಡೀ ಸುರಿದ ಮಳೆ ಬೆಂಗಳೂರನ್ನು ತಂಪಾಗಿಸಿದೆ.

    ಇನ್ನೂ ಮೂರು ದಿನ ಮಳೆ?:

    ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿತ್ಯ ಸಂಜೆ ಹಾಗೂ ರಾತ್ರಿ ವೇಳೆಗೆ ಮಳೆ ಆಗುವ ಸಾಧ್ಯತೆ ಇದೆ ಎಂಬುದು ಹವಾಮಾನ ಇಲಾಖೆಯ ಎಚ್ಚರಿಕೆ. ಹೀಗಾಗಿ ಕಚೇರಿಗೆ ಬೈಕ್​ನಲ್ಲಿ ತೆರಳುವವರು ಈ ಬಗ್ಗೆ ಕೊಂಚ ಗಮನಸವಹಿಸಬೇಕು.

    ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
    Published by:Rajesh Duggumane
    First published: