ನಾನು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು‌ ಹಾಕಿದ್ದಾರೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು

Bangalore Violence: ಘಟನೆ ಬಗ್ಗೆ ಸಿಬಿಐ, ಸಿಐಡಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಲು ಮನವಿ ಮಾಡಿದ್ದೇನೆ

news18-kannada
Updated:August 12, 2020, 4:33 PM IST
ನಾನು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು‌ ಹಾಕಿದ್ದಾರೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು
ಶಾಸಕ ಅಖಂಡ ಶ್ರೀನಿವಾಸಮೂರ್ತಿ
  • Share this:
ಬೆಂಗಳೂರು (ಆಗಸ್ಟ್​.12): ನಮ್ಮ ಮನೆ ಮೇಲೆ ಸುಮಾರು ನಾಲ್ಕು ಸಾವಿರ ಜನ ದಾಳಿ ಮಾಡಿದ್ದಾರೆ. ಮಾರಕಾಸ್ತ್ರ ಪೆಟ್ರೋಲ್ ‌ಬಾಂಬ್ ಬಳಸಿ ಮನೆಗೆ ಬೆಂಕಿ ಹಚ್ಚುವ ಕೃತ್ಯ ಮಾಡಿದ್ದಾರೆ. ಘಟನೆಗೆ ಕಾರಣರಾದವರು ಯಾರೇ ಆಗಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನಾನು ಹುಟ್ಟಿ ಬೆಳೆದ ಮನೆ ಸುಟ್ಟು‌ ಹಾಕಿದ್ದಾರೆ ಎಂದು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾವುಕರಾಗಿ ನುಡಿದಿದ್ದಾರೆ.

ಕಳೆದ 25 ವರ್ಷದಿಂದ ಇಂತಹ ಘಟನೆ ನಡೆದಿರಲಿಲ್ಲ. ಇದರ ಹಿಂದೆ ಯಾರೇ ಇದ್ದರೂ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ನಮ್ಮ ಮನೆಯಲ್ಲಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸಚಿವ ಅಶೋಕ್ ಮನೆಗೆ ಬಂದು ನಮಗೆ ಧೈರ್ಯ ಹೇಳಿದ್ದಾರೆ. ಘಟನೆ ಬಗ್ಗೆ ಸಿಬಿಐ, ಸಿಐಡಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಆರೋಪಿ ನವೀನ್  ನಮ್ಮ ಅಕ್ಕನ ಮಗ. ಅವನ ನಡವಳಿಕೆ ಸರಿ ಇಲ್ಲ. ಹೀಗಾಗಿ, ನವೀನ್‌ನನ್ನು ಕಳೆದ 10 ವರ್ಷದಿಂದ ನಾವು ಆತನನ್ನು ಮನೆಗೆ ಸೇರಿಸುವುದಿಲ್ಲ. ನಾನು ಕ್ಷೇತ್ರದ ಜನತೆಯ ಜೊತೆಗೆ ಇರುವವನು. ನನ್ನ ಹೆಸರು ಕೆಡಿಸುವುದಕ್ಕೆ ಹೀಗೆ ಮಾಡಿದ್ದಾರೆ. ನಾನು ಎಲ್ಲರ ಜೊತೆಗೆ ಹೋಗುತ್ತೇನೆ. ಎಲ್ಲರೂ ನನ್ನನ್ನ ಅಣ್ಣ ಎಂದೇ ಕರೆಯುತ್ತಾರೆ ಎಂದರು.

ಅಪರಾಧಿಗಳನ್ನು ಬಂಧಿಸುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ: ಸಚಿವ ಆರ್​ ಅಶೋಕ್

ಶಾಸಕ  ಅಖಂಡ ಶ್ರೀನಿವಾಸಮೂರ್ತಿ 10 ವರ್ಷದಿಂದ ನನಗೆ ಪರಿಚಯ. ಬಹಳ ಸೌಮ್ಯ ಸ್ವಭಾವದವರು. ಯಾರ ತಂಟೆಗೂ ಹೋದವರು ಅಲ್ಲ. ನಾನು ಕೂಡ ರಾತ್ರಿ 3 ಘಂಟೆಗೆ ಅಲ್ಲಿಗೆ ಹೋಗಿದ್ದೆ. ಚಿನ್ನ, ಬೆಳ್ಳಿ, ಸೀರೆ ಎಲ್ಲದಕ್ಕೂ ಬೆಂಕಿ ಹಚ್ಚಿದ್ದಾರೆ. ಶ್ರೀನಿವಾಸಮೂರ್ತಿ ಅವರೇ ಹೇಳಿದ ಪ್ರಕಾರ ಅವರನ್ನು ಮುಗಿಸಲೇಬೇಕು ಎಂದು ಬಂದಿದ್ದರು ಅನ್ನಿಸುತ್ತೆ. ಸಮಾಜ ಘಾತುಕ ಶಕ್ತಿಗಳು ನಿನ್ನೆ ಮಾಡಿದ ಘಟನೆ ಏನು ಎಂಬುದು ತನಿಖೆಯಾಗಬೇಕು ಎಂದರು.

ಘಟನೆಗೆ ಸಂಬಂಧಿಸಿ 45 ಜನರನ್ನು ನಿನ್ನೆಯೇ ಬಂಧಿಸಲಾಗಿದೆ. ಬೆಂಗಳೂರನ್ನ ತಲ್ಲಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಘಟನೆ ನಡೆದಿರಬೇಕು. ಸರ್ಕಾರ ಇಂತಹ ಘಟನೆಯನ್ನು ಮಟ್ಟ ಹಾಕುತ್ತದೆ. ನಾನು ಸಿಎಂರನ್ನು ಭೇಟಿಯಾಗುತ್ತೇನೆ. ನಾನು ಎರಡುವರೆ ಘಂಟೆಗಳ ಕಾಲ ಅಲ್ಲಿಯೇ ಇದ್ದೇ. ಪೊಲೀಸರಿಗೆ ನಾನು ಕೃತಜ್ಞತೆ ಹೇಳುತ್ತೇನೆ. ಘಟನೆ ನಡೆದ 4 ಘಂಟೆಯೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಹೇಳಿದರು.

ಮಚ್ಚು, ಕೊಡಲಿ, ಲಾಂಗ್, ಬಾಂಬ್ ಹೀಗೆ ಎಲ್ಲವನ್ನೂ ತಂದಿದ್ರು. ಪುಲಿಕೇಶಿನಗರ ಆದ ಮೇಲೆ ಶಿವಾಜಿನಗರ ಕಡೆಗೂ ಹೋಗುವವರು ಇದ್ದರು. ಇಡೀ ಬೆಂಗಳೂರನ್ನ ಬೆದರಿಸುವ ಗೂಂಡಾಗಳನ್ನು ಮಟ್ಟ ಹಾಕಬೇಕು. ನಾನು ಹೋದಾಗ ಇಡೀ ಅಂಗಡಿಯನ್ನೇ ಲೂಟಿ ಮಾಡಿದ್ರು. ಅವರು ಮಂಡ್ಯದವರು. ಎಸ್‌ಡಿಪಿಎಫ್ ಸೇರಿದಂತೆ ಹಲವರು ಅಲ್ಲಿ ಇದ್ದರು ಎಂದು ತಿಳಿಸಿದರು.ಇದನ್ನೂ ಓದಿ : DJ Halli Violence - ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ

ಇದೊಂದು ರೀತಿ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ, ಇಡೀ ಬೆಂಗಳೂರಿಗೆ ಬೆದರಿಕೆ ಕೊಡಲು ಮುಂದಾಗಿದ್ದರು. ಸಿಎಂ ಸ್ಪಷ್ಟವಾದ ಮಾಹಿತಿ ಕೊಟ್ಟಿದ್ದಾರೆ. ನಾನು ಮತ್ತು ಗೃಹ ಸಚಿವರು ಈಗ ಸಿಎಂರನ್ನು ಭೇಟಿಯಾಗುತ್ತೇವೆ. ಇದರ ಹಿಂದೆ ಯಾರಾರು ಇದ್ದಾರೆ ಎಂದು ತನಿಖೆ ಮಾಡಿಸುತ್ತೇವೆ. ಜನ, ಸಮುದಾಯ, ಪುಟ್ಟ ಪುಟ್ಟ ರಸ್ತೆ ಎಲ್ಲಾ ಕಡೆ ಗಲಾಟೆ ಮಾಡಿದ್ದಾರೆ. ನಾನು ಈಗಾಗಲೇ ಶಾಸಕರಾದ ಜಮೀರ್, ರಿಜ್ವಾನ್ ಆರ್ಷದ್ ಜೊತೆಗೂ ಮಾತನ್ನಾಡಿದ್ದೇನೆ ಎಂದರು.

24 ಘಂಟೆಯೊಳಗೆ ಅಪರಾಧಿಗಳು ಒಳಗೆ ಇರಬೇಕು. ಗಲ್ಲಿ ಗಲ್ಲಿಯಲ್ಲೂ ಅಪರಾಧಿಗಳನ್ನು ಹುಡುಕುತ್ತೇವೆ. ಅವರನ್ನು ಬಂಧಿಸುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ ಎಂದು ಸಚಿವ ಆರ್.ಅಶೋಕ್ ಎಂದು ತಿಳಿಸಿದರು.

ಗುಪ್ತಚರ ಇಲಾಖೆಯ ವೈಫಲ್ಯ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು,  ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮೂರು ಘಂಟೆ ಪೊಲೀಸರು ಶಾಂತ ರೀತಿಯಲ್ಲಿ ವರ್ತಿಸಿದ್ದಾರೆ. ಆದರೆ, ಅಲ್ಲಿ ಡಿಸಿಪಿಯನ್ನೇ ಕೂಡಿ ಹಾಕುವ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರೆ,ಅವರು ದೇಶದ್ರೋಹಿಗಳೇ. ನಾವು ಬೆಂಗಳೂರಿನ ಜನರ ಪರವಾಗಿದ್ದೇವೆ. ನಿನ್ನೆ ಗಲಾಟೆ ಮಾಡಿದವರು ಯಾವುದೇ ಬಿಲದಲ್ಲಿ ಇದ್ದರೂ ಹೆಡೆಮುರಿ ಕಟ್ಟುತ್ತೇವೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
Published by: G Hareeshkumar
First published: August 12, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading