• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DJ Halli Riot Case: ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್​ರಾಜ್ 2 ದಿನ ಸಿಸಿಬಿ ವಶಕ್ಕೆ

DJ Halli Riot Case: ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್​ರಾಜ್ 2 ದಿನ ಸಿಸಿಬಿ ವಶಕ್ಕೆ

ಸಂಪತ್ ರಾಜ್

ಸಂಪತ್ ರಾಜ್

DJ Halli Riot Case : ವಿಚಾರಣೆಗಾಗಿ ಅವರನ್ನು 10 ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಸಲ್ಲಿಸಿತು. ಆದರೆ, ನ್ಯಾಯಾಲಯ ಎರಡು ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದೆ.

  • Share this:

ಬೆಂಗಳೂರು (ನ.17): ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿ ಬಿಬಿಎಂಪಿ ಮಾಜಿ ಮೇಯರ್​ ಸಂಪತ್​ ರಾಜ್​ ಅವರನ್ನು ಎರಡು ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ. ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅವರನ್ನು ಬಂಧಿಸಿದ್ದ ಸಿಸಿಬಿ ಇಂದು ಮಧ್ಯಾಹ್ನ ಅವರನ್ನು ಸಿಟಿ ಸಿವಿಲ್​ ನ್ಯಾಯಾಲಯದ ಮುಂದೆ ಹಾಜರು ಪಡಿಸಿತು. ಈ ವೇಳೆ ಪ್ರಕರಣ ಕುರಿತ ವಿಚಾರಣೆಗಾಗಿ ಅವರನ್ನು 10 ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಸಲ್ಲಿಸಿತು. ಆದರೆ, ನ್ಯಾಯಾಲಯ ಎರಡು ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಸಂಪತ್​ ರಾಜ್​ ಕೊರೋನಾ ನಾಟಕವಾಡಿ ನಾಪತ್ತೆಯಾಗಿದ್ದರು. ತಲೆ ಮರೆಸಿಕೊಂಡಿದ್ದ ಸಂಪತ್​ ರಾಜ್​ ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದರು. ನಿನ್ನೆ ರಾತ್ರಿ ಬೆನ್ಸನ್ ಟೌನ್​ನಲ್ಲಿರುವ ತನ್ನ ಸ್ನೇಹಿತನ ಮನೆಗೆ ಸಂಪತ್ ರಾಜ್ ಬಂದಿರುವ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.


ಸಂಪತ್​ ರಾಜ್​ ಸಹಾಯಕರಾಗಿದ್ದ ರಿಯಾಜುದ್ದೀನ್​ ನನ್ನು ಕೂಡ ಇತ್ತೀಚಿಗೆ ಪೊಲೀಸರು ಬಂಧಿಸಿದ್ದರು. ಈತ ಗಲಭೆ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ರಕೀಬ್​ ಜಕೀರ್​ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ. ಈತನಿಗೆ ನಾಗರಹೊಳೆಯ ಬಳಿ ರಿಯಾಜುದ್ದೀನ್​ ಆಶ್ರಯ ನೀಡಿದ್ದ ಎನ್ನಲಾಗಿದೆ.


ಆಗಸ್ಟ್ 11ರ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ಗಲಭೆಗಳಾಗಿದ್ದವು. ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಮ್ ಪ್ರವಾದಿ ಬಗ್ಗೆ ನಿಂದನಾತ್ಮಕ ಪ್ರತಿಕ್ರಿಯೆ ನೀಡಿದ ಕಾರಣವೊಡ್ಡಿ ಗಲಭೆಗಳು ನಡೆದು ಹಲವು ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಯಿತು. ಶಾಸಕ ಅಖಂಡರ ಮನೆಯನ್ನ ಕಿಡಿಗೇಡಿಗಳು ಸುಟ್ಟುಹಾಕಿದರು. ಅದೃಷ್ಟಕ್ಕೆ ಅಖಂಡರ ಮನೆಯ ಸದಸ್ಯರು ಸಕಾಲಕ್ಕೆ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದರು.


ಇದನ್ನು ಓದಿ: ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ


ಈ ಪ್ರಕರಣಕ್ಕೆ ಸ್ಥಳೀಯ ರಾಜಕೀಯ ಪೈಪೋಟಿ ಕಾರಣ ಎಂಬ ಶಂಕೆ ಇದೆ. ಜೆಡಿಎಸ್​ನಿಂದ ಕಾಂಗ್ರೆಸ್​ಗೆ ವಲಸೆ ಬಂದಿದ್ದ ಅಖಂಡ ಶ್ರೀನಿವಾಸಮೂರ್ತಿ ಪುಲಿಕೇಶಿನಗರದಲ್ಲಿ ಹೊಂದಿದ್ದ ಹಿಡಿತವನ್ನು ದುರ್ಬಲಗೊಳಿಸಲು ಸಂಪತ್ ರಾಜ್ ಮತ್ತಿತರರು ಮಾಡಿದ ಪಿತೂರಿ ಇದು ಎಂಬ ಅನುಮಾನ ಇದೆ. ಸಿಸಿಬಿ ಅಧಿಕಾರಿಗಳೂ ಕೂಡ ಈ ಸಂಬಂಧ ಸಾಕ್ಷ್ಯಾಧಾರಗಳನ್ನ ಕಲೆಹಾಕಿದ್ದಾರೆ. ಈಗಾಗಲೇ ಹಲವರನ್ನ ಬಂಧಿಸಿ ವಿಚಾರಣೆ ಕೂಡ ನಡೆಸಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಮಾಜಿ ಮೇಯರ್​ ಸಂಪತ್​ ರಾಜ್​, ರಾಜ್​ ಸಹಾಯಕ ಅರುಣ್​, ಕಾರು ಚಾಲಕ ಸಂತೋಷ್​, ಮುಜಾಹೀದ್​ ಖಾನ್​ ಮತ್ತು ಪುಲಕೇಶಿ ನಗರ ಮಾಜಿ ಕೌನ್ಸುಲರ್​ ಅಬ್ದುಲ್​ ರಕೀಬ್​ ಅವರ ಮೇಲೆ ಸಿಸಿಬಿ ಜಾರ್ಜ್​ಶೀಟ್​ ದಾಖಲಿಸಿದೆ.

Published by:Seema R
First published: