ಬೆಂಗಳೂರು (ಜ. 21): ಕೊರೋನಾ ಲಾಕ್ ಡೌನ್ ವೇಳೆ ಇಡೀ ದೇಶವೇ ಸ್ತಬ್ಧವಾಗಿತ್ತು. ರಸ್ತೆಗಳಲ್ಲಿ ವಾಹನಗಳಿಲ್ಲದೆ ಖಾಲಿ ಖಾಲಿಯಾಗಿ ಬಿಕೋ ಎನ್ನುವಂತಿತ್ತು. ವ್ಯಾಪಾರ ವಹಿವಾಟುಗಳು ಬಂದ್ ಆಗಿ ಎಲ್ಲೆಡೆ ನಷ್ಟ ಉಂಟಾಗಿತ್ತು. ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಶುರುವಾದರೂ 2020ರಲ್ಲಿ ಅನೇಕರು ನಷ್ಟಗಳಿಸಿದ್ದೆ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಬೆಂಗಳೂರು ಸಂಚಾರಿ ಪೊಲೀಸರು ಕೋಟಿ ಕೋಟಿ ದಂಡ ವಿಧಿಸಿ ಸದ್ದು ಮಾಡಿದ್ದಾರೆ. 2020ರಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಖಜಾನೆ ಮಾತ್ರ ಸಿಕ್ಕಾಪಟ್ಟೆ ಭರ್ತಿಯಾಗಿದ್ದು, ದಾಖಲೆ ಮೊತ್ತದ ದಂಡ ಹಾಕಿ ಯಶಸ್ವಿಯಾಗಿದ್ದಾರೆ. ಕೊರೋನಾ ಮಾಹಾಮಾರಿ ಸಮಯದಲ್ಲಿ ರಾಜ್ಯ ರಾಜಧಾನಿಯಲ್ಲಿ ಖಾಕಿ ಕಟ್ಟೆಚ್ಚರ ವಹಿಸಿ ವಾಹನಗಳ ಸಾರ್ವಜನಿಕರ ಓಡಾಟಕ್ಕೆ ತಡೆ ಹಾಕಿದ್ದರು. ಸೋಂಕು ಹೆಚ್ಚಳವಾಗುವ ಹಿನ್ನಲೆ ಮುಂಜಾಗ್ರತ ಕ್ರಮವಾಗಿ ಕಠಿಣ ನಿಯಮವನ್ನು ರೂಪಿಸಿದರು. ಅಗತ್ಯ ವಾಹನಗಳ ಸಂಚಾರ ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಿದ್ದರು. ಈ ವೇಳೆ ಪೊಲೀಸರ ರೂಲ್ಸ್ ಬ್ರೇಕ್ ಮಾಡಿ ಬೇಕಾಬಿಟ್ಟಿ ಸಂಚರಿಸಿದ ವಾಹನಗಳನ್ನ ಪತ್ತೆ ಹಚ್ಚಿ ಈಗ ಪ್ರಕರಣ ದಾಖಲಿಸುತ್ತಿದ್ದಾರೆ. ಹೀಗಾಗಿ 2020ರಲ್ಲಿ ಬರೋಬ್ಬರಿ 73.24 ಲಕ್ಷ ಪ್ರಕರಣ ದಾಖಲಾಗಿದ್ದು, ನಿಯಮ ಮುರಿದ ಚಾಲಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
2020 ರಲ್ಲಿ ಒಟ್ಟು 73.24.289 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ. ಇದರಿಂದ ಒಟ್ಟು 99 ಕೋಟಿ 62 ಲಕ್ಷ 40 ಸಾವಿರ 510 ರೂಪಾಯಿ ದಂಡ ಹಾಕಿದ್ದಾರೆ. ಅದರಲ್ಲಿ ದಾಖಲಾದ ಪ್ರಮುಖ ಪ್ರಕರಣಗಳ ಸಂಖ್ಯೆ ಇಂತಿದೆ.
- ಹೆಲ್ಮೆಟ್ ರಹಿತ ಬೈಕ್ ಚಾಲನೆ 27.59 ಲಕ್ಷ.
- ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 16.62ಲಕ್ಷ.
- ಸಿಗ್ನಲ್ ಜಂಪ್ 8.12 ಲಕ್ಷ.
- ಕುಡಿದು ವಾಹನ ಚಾಲನೆ ಪ್ರಕರಣ 5 ಸಾವಿರ.
- ನೋ ಎಂಟ್ರಿಯಲ್ಲಿ ವಾಹನ ಚಾಲನೆ 3.13 ಸಾವಿರ.
ಮಾಹಾಮಾರಿ ಕೊರೊನಾ ಉಲ್ಬಣಗೊಂಡ ಹಿನ್ನೆಲೆಯಲ್ಲಿ 2020 ಮಾರ್ಚ್ ನಿಂದ ಜುಲೈ 21ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ ಹೆಲ್ಮೆಟ್ ಇಲ್ಲದೆ ಬೇಕಾಬಿಟ್ಟಿಯಾಗಿ ಸುಮಾರು 27 ಲಕ್ಷ ಮಂದಿ ಬೈಕ್ ಸವಾರರು ಸುಖಾಸುಮ್ಮನೆ ಸುತ್ತಾಡಿದ್ದಾರೆ. ಅಲ್ಲದೇ ಖಾಲಿ ರಸ್ತೆಗಳು ಅಂತ ನೋ ಎಂಟ್ರಿಯಲ್ಲಿ 3 ಲಕ್ಷ ಮಂದಿ ಸುತ್ತಾಟ ನಡೆಸಿದ್ದಾರಂತೆ.
ಲಾಕ್ ಡೌನ್ ತೆರವು ಬಳಿಕ ಸಂಚಾರ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಆಳವಡಿಸಿರುವ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ನೋ ಎಂಟ್ರಿ, ಓನ್ ವೇ ರೈಡ್, ಸಿಗ್ನಲ್ ಜಂಪ್, ದಾಖಲೆಗಳು ಇಲ್ಲದೆ ವಾಹನ ಚಾಲನೆ ಸೇರಿ ಹಲವು ಪ್ರಕರಣಗಳು ಪತ್ತೆಯಾಗಿದೆ. ಸಿಸಿಟಿವಿ ಕ್ಯಾಮೆರಾ ಗಳ ಮೂಲಕ ವಾಹನಗಳು ನಂಬರ್ ಪತ್ತೆ ಹಚ್ಚಿ ಖುದ್ದು ವಾಹನ ಸವಾರರ ವಿಳಾಸಕ್ಕೆ ನೋಟಿಸ್ ನೀಡಿ ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ 2020ರ ವರ್ಷದಲ್ಲಿ ಸುಮಾರು 99 ಕೋಟಿ ದಂಡ ಹಾಕಿದ್ದು, ಲಾಕ್ ಡೌನ್ ಇದ್ದರೂ ಸಂಚಾರಿ ಪೊಲೀಸರು ಇಷ್ಟೊಂದು ದಂಡ ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಲಾಕ್ ಡೌನ್ ಬಳಿಕ ನಗರದಲ್ಲಿ ಹಲವೆಡೆ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಗಳನ್ನ ಮಾಡಿದ್ದರು. ಈ ವೇಳೆ ವಾಹನಗಳ ದಾಖಲಾತಿ ಪರಿಶೀಲನೆ, ಇನ್ಸೂರೆನ್ಸ್, ಬಾಕಿ ಕೇಸ್ ಗಳ ಪರಿಶೀಲನೆ ನಡೆಸಿದರು. ಈ ವೇಳೆ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವ ಲಕ್ಷ ಲಕ್ಷ ಕೇಸ್ ಗಳು ಪತ್ತೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ