ಅಪಾಯದ ಮಟ್ಟ ಮೀರಿರುವ ಬೆಂಗಳೂರು ಟ್ರಾಫಿಕ್; ಪರಿಸ್ಥಿತಿ ಹೀಗೆ ಮುಂದುವರೆದರೆ ಡೆಡ್​ ಸಿಟಿ ಆಗುವ ಭೀತಿಯಲ್ಲಿ ಮಹಾನಗರ!

Bengaluru Traffic: ನಗರದಲ್ಲಿ 25 ಹೆವಿ ಜಂಕ್ಷನ್​ಗಳಿವೆ. ಸಾಮಾನ್ಯವಾಗಿ ಜಂಕ್ಷನ್​ ಭಾಗಗಳಲ್ಲಿ ಎಲ್ಲಾ ಸಮಯದಲ್ಲೂ ವಾಹನ ದಟ್ಟಣೆ ಅಧಿಕವಾಗಿರುತ್ತಿದ್ದು, ಸವಾರರು ಇಲ್ಲಿನ ವಾಹನ ದಟ್ಟಣೆಯನ್ನು ಕ್ರಮಿಸಿ ಮನೆಗೆ ಸಾಗುವುದೇ ದೊಡ್ಡ ಸಾಹಸವಾಗಿರುತ್ತದೆ. ಆದರೆ, ಈ ಟ್ರಾಫಿಕ್ ಸಮಸ್ಯೆಯನ್ನು ನಿರ್ವಹಿಸಲು ನಿಯೋಜಿಸಲಾಗಿರುವ ಟ್ರಾಫಿಕ್ ಪೊಲೀಸರ ಸಂಖ್ಯೆ ಕೇವಲ 4718 ಮಾತ್ರ.

MAshok Kumar | news18-kannada
Updated:December 3, 2019, 5:20 PM IST
ಅಪಾಯದ ಮಟ್ಟ ಮೀರಿರುವ ಬೆಂಗಳೂರು ಟ್ರಾಫಿಕ್; ಪರಿಸ್ಥಿತಿ ಹೀಗೆ ಮುಂದುವರೆದರೆ ಡೆಡ್​ ಸಿಟಿ ಆಗುವ ಭೀತಿಯಲ್ಲಿ ಮಹಾನಗರ!
ಬೆಂಗಳೂರು ಟ್ರಾಫಿಕ್.
  • Share this:
ಮಹಾನಗರ ಬೆಂಗಳೂರನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಅತಿದೊಡ್ಡ ಮತ್ತು ಯಾತನಾಮಯ ಸಮಸ್ಯೆ ಎಂದರೆ ಟ್ರಾಫಿಕ್..! ಇಲ್ಲಿನ ಶಾಲಾ ಮಕ್ಕಳು ಸೇರಿದಂತೆ ರಾಜಧಾನಿಯ ನಿವಾಸಿಗಳು ತಮ್ಮ ಕೆಲಸಗಳಿಗಾಗಿ ಪ್ರತಿನಿತ್ಯ 10 ರಿಂದ 15 ಕಿಮೀ ಕ್ರಮಿಸುವುದು ಅನಿವಾರ್ಯ. ಆದರೆ, ದಿನೇ ದಿನೇ ಮಿತಿಮೀರುತ್ತಿರುವ ವಾಹನ ದಟ್ಟಣೆಯಿಂದಾಗಿ ನಗರ ವಾಸಿಗಳು ದಿನದ ಕನಿಷ್ಟ 4 ಗಂಟೆ ಟ್ರಾಫಿಕ್​ನಲ್ಲೇ ಕಳೆದು ಹೋಗುತ್ತಿರುವುದು ಅರಗಿಸಿಕೊಳ್ಳಲು ಸಾಧ್ಯವಾಗದ ಕಹಿಸತ್ಯ.

ಅಸಲಿಗೆ ಬೆಂಗಳೂರು ಮಹಾನಗರಕ್ಕೆ ಈ ಟ್ರಾಫಿಕ್ ಸಮಸ್ಯೆ ಎಂಬುದು ಹೊಸತೇನಲ್ಲ. ಕಳೆದ 30 ವರ್ಷಗಳಿಂದಲೂ ನಗರ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಂತೆ ಟ್ರಾಫಿಕ್ ಕಿರಿಕಿರಿ ಸಹ ಮಿತಿಮೀರುತ್ತಲೇ ಇದೆ. ಇದರ ಪರಿಹಾರಕ್ಕಾಗಿಯೇ ರಸ್ತೆಗಳ ವಿಸ್ತರಣೆ, ಫ್ಲೈಓವರ್, ಮೆಟ್ರೋ ರೈಲು, ಟೋಲ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಏನೇ ಆದರೂ ಮಾತ್ರ ಟ್ರಾಫಿಕ್ ಸಮಸ್ಯೆಗೆ ಮಾತ್ರ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ದಿನೇ ದಿನೇ ಅಧಿಕವಾಗುತ್ತಿರುವ ವಾಹನ ದಟ್ಟಣೆ.

ಹಾಗಾದರೆ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಎಷ್ಟು? ಟ್ರಾಫಿಕ್ ಸಮಸ್ಯೆಗೆ ನಿಜವಾದ ಕಾರಣವೇನು? ಇದರಿಂದಾಗುವ ಪರಿಣಾಮವೇನು? ಅಸಲಿಗೆ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ರಮಿಸಲು ಎಷ್ಟು ಸಮಯ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಹನ ದಟ್ಟನೆಯಲ್ಲಿ ಬೆಂಗಳೂರಿಗಿದೆ ಅಗ್ರಸ್ಥಾನ:

2019ರ ಜುಲೈ ತಿಂಗಳಿನ ಅಂಕಿ ಅಂಶದ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಕನಿಷ್ಟ 82 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ನಡುವೆ ಓಲಾ, ಊಬರ್ ಗಳಂತಹ ಟ್ಯಾಕ್ಸಿ ಕಂಪೆನಿಗಳ ಅಸ್ಥಿತ್ವದ ನಂತರ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಕಳೆದ 40 ವರ್ಷದಲ್ಲಿ ಬೆಂಗಳೂ ರಿನ ವಾಹನಗಳ ಸಂಖ್ಯೆ 65 ಪಟ್ಟು ಹೆಚ್ಚಾಗಿದೆ! ಪರಿಣಾಮ ರಾಜ್ಯ ರಾಜಧಾನಿ ರಸ್ತೆಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣ ಶೇ.64 ರಷ್ಟು. ಇನ್ನೂ ವಾಹನದ ಸರಾಸರಿ ವೇಗ ಸೆಕೆಂಡಿಗೆ ಕೇವಲ 8.35 ಮೀಟರ್.

ಇತ್ತೀಚೆಗೆ ಬ್ಯಾಂಕುಗಳು ಹಾಗೂ ಕೆಲವು ಖಾಸಗಿ ಕಂಪೆನಿಗಳು ಬೈಕ್ ಮತ್ತು ಕಾರುಗಳನ್ನು ಕೊಳ್ಳಲು ಅತಿ ಕಡಿಮೆ ಬಡ್ಡಿ ದರದಲ್ಲಿ ಹಣವನ್ನು ಸಾಲವನ್ನಾಗಿ ನೀಡುತ್ತಿರುವುದು ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಇಂದು ಬೆಂಗಳೂರಿನ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ಜನರ ಮನೆಯಲ್ಲಿ ಕನಿಷ್ಟ ಒಂದು ಕಾರು ಎರಡು ಬೈಕ್ ಇರುವುದನ್ನು ನಾವು ಕಾಣಬಹುದು.ಪರಿಣಾಮ ನಗರದ ರಸ್ತೆಗಳು ತನ್ನ ಸಾಮರ್ಥ್ಯಕ್ಕಿಂತ ಅಧಿಕ ವಾಹಣ ದಟ್ಟಣೆ ನಿಭಾಯಿಸಲು ಸಾಧ್ಯವಾಗದೆ ಹೆಣಗುತ್ತಿವೆ. ಪರಿಣಾಮ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಉಲ್ಭಣಿಸುತ್ತಲೇ ಇದೆ.

ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಭಾರತೀಯ ನಗರಗಳಲ್ಲಿನ ಟ್ರಾಫಿಕ್ ಕಾರಣದಿಂದಲೇ ವರ್ಷಕ್ಕೆ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ಆದಾಯ ನಷ್ಟವಾಗುತ್ತಿದೆ. 2019ರ ಅವಧಿಯಲ್ಲಿ ಟ್ರಾಫಿಕ್ ಮತ್ತು ರಸ್ತೆ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 2015 ಎನ್ನುತ್ತಿದೆ ಕೇಂದ್ರ ಅಪರಾಧ ವಿಭಾಗಗಳ ವರದಿ. ಇನ್ನೂ ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯದಿಂದಾಗಿ ಉಂಟಾಗುವ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯಗುತ್ತಿಲ್ಲ. ಜನರ ಪಾಡಂತೂ ಹೇಳತೀರದಾಗಿದೆ.

ನರಕದ ಹೆದ್ದಾರಿಗಳಾಗಿರುವ ಬೆಂಗಳೂರಿನ ರಸ್ತೆಗಳು, ರೋಲ್ ಕಾಲ್​ ನಿರತ ಪೊಲೀಸರು:

ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆಯನ್ನು ಹೊಂದಿರುವ ಮಹಾನಗರದ ಪೈಕಿ ಬೆಂಗಳೂರು ಸಹ ಒಂದು. ಆದರೆ, ಬೆಂಗಳೂರಿನಲ್ಲೇ ಹೆಬ್ಬಾಳ, ಯಲಹಂಕ, ಕೋರಮಂಗಲ, ಮೈಸೂರು ರಸ್ತೆ, ಕೆ.ಆರ್. ಪುರಂ, ಬಳ್ಳಾರಿ ರಸ್ತೆ, ಸಿಲ್ಕ್​ಬೋರ್ಡ್​ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಕುಖ್ಯಾತ ಭಾಗಗಳು.

ಇದಲ್ಲದೆ ನಗರದಲ್ಲಿ 25 ಹೆವಿ ಜಂಕ್ಷನ್​ಗಳಿವೆ. ಸಾಮಾನ್ಯವಾಗಿ ಜಂಕ್ಷನ್​ ಭಾಗಗಳಲ್ಲಿ ಎಲ್ಲಾ ಸಮಯದಲ್ಲೂ ವಾಹನ ದಟ್ಟಣೆ ಅಧಿಕವಾಗಿರುತ್ತಿದ್ದು, ಸವಾರರು ಇಲ್ಲಿನ ವಾಹನ ದಟ್ಟಣೆಯನ್ನು ಕ್ರಮಿಸಿ ಮನೆಗೆ ಸಾಗುವುದೇ ದೊಡ್ಡ ಸಾಹಸವಾಗಿರುತ್ತದೆ. ಆದರೆ, ಈ ಟ್ರಾಫಿಕ್ ಸಮಸ್ಯೆಯನ್ನು ನಿರ್ವಹಿಸಲು ನಿಯೋಜಿಸಲಾಗಿರುವ ಟ್ರಾಫಿಕ್ ಪೊಲೀಸರ ಸಂಖ್ಯೆ ಕೇವಲ 4718 ಮಾತ್ರ.

ಹೀಗೆ ಟ್ರಾಫಿಕ್ ನಿರ್ವಹಣೆಗಾಗಿ ಕಾನ್ಸ್​ಟೇಬಲ್​ಗಳನ್ನು ನಿಯೋಜಿಸಲಾಗಿದ್ದರೂ ಸಹ ಸಿಗ್ನಲ್​ಗಳ ಬಳಿ ವಾಹನ ದಟ್ಟಣೆ ಅಧಿಕವಾಗಿರುವ ಜಾಗದಲ್ಲಿ ಪೊಲೀಸರನ್ನು ಕಾಣುವುದು ಇತ್ತೀಚೆಗೆ ತೀರಾ ವಿರಳವಾಗಿದೆ.

ನೂತನ ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ರಸ್ತೆ ಪಕ್ಕ ಮರದ ನೆರಳಿನಲ್ಲಿ ತಮ್ಮ ಅಂಗಡಿ ತೆರೆಯುತ್ತಿರುವ ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆ ಹಾಗೂ ಬಿಸಿಲಿನಿಂದ ಹೈರಾಣಾಗಿರುವ ವಾಹನ ಸಾವಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾರೀ ಮೊತ್ತದ ದಂಡ ವಿಧಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ವಾಹನ ಸವಾರರು ಪ್ರತಿನಿತ್ಯ ಪೊಲೀಸರ ಭೀತಿಯಲ್ಲೇ ಸಂಚರಿಸುವಂತಾಗಿದೆ.

ಬೆಂಗಳೂರಿನಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುವ ಸಮಯದಲ್ಲಿ ದೇಶದ ಯಾವ್ಯಾವ ಭಾಗಕ್ಕೆ ಸಂಚರಿಸಬಹುದು ಗೊತ್ತಾ?

ಸಿಲ್ಕ್​ಬೋರ್ಡ್​ ಫ್ಲೈಓವರ್​ನಿಂದ ಮಡಿವಾಳ ಮಾರ್ಗವಾಗಿ ಗಿರಿನಗರ ನೈಸ್​ ರಸ್ತೆಗೆ ಕೇವಲ 14 ಕಿಮೀ ಮಾತ್ರ. ಆದರೆ, ನಗರದ ಟ್ರಾಫಿಕ್​ನಲ್ಲಿ ಇಷ್ಟು ದೂರ ಕ್ರಮಿಸಲು ನಮಗೆ ಕನಿಷ್ಟ 2 ರಿಂದ 2.30 ಗಂಟೆ ಅಗತ್ಯ. ಈ ಅವಧಿಯಲ್ಲಿ ನೀವು ವಿಮಾನ ಮಾರ್ಗವಾಗಿ ನೆರೆಯ ದುಬೈಗೆ ಸಂಚರಿಸಬಹುದು.

ಮೆಜೆಸ್ಟಿಕ್​ನಿಂದ ಮೈಸೂರು ರಸ್ತೆ ಮಾರ್ಗವಾಗಿ ನಾಯಂಡಹಳ್ಳಿಗೆ ಕೇವಲ 10 ಕಿಮೀ ಮಾತ್ರ. ಆದರೆ, ಇದನ್ನು ಕ್ರಮಿಸಲು ನಿಮಗೆ ಕನಿಷ್ಟ 1 ರಿಂದ 1.30 ಗಂಟೆ ಬೇಕಾಗುತ್ತದೆ. ಈ ಅವಧಿಗಿಂತ ಒಂದರ್ಧ ಗಂಟೆ ಹೆಚ್ಚು ಸಮಯದಲ್ಲಿ ನೀವು ರಾಷ್ಟ್ರ ರಾಜಧಾನಿ ದೆಹಲಿಗೆ ಕ್ರಮಿಸಬಹುದು.

ಮೆಜೆಸ್ಟಿಕ್​ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 34 ಕಿಮೀ. ಆದರೆ ಇದನ್ನು ಕ್ರಮಿಸಲು ಕನಿಷ್ಟ 2 ರಿಂದ 3 ಗಂಟೆ ಬೇಕು. ಈ ಸಮಯದಲ್ಲಿ ನೀವು ಅರಾಮಾಗಿ ನೆರೆ ರಾಷ್ಟ್ರ ಶ್ರೀಲಂಕಾಗೆ ಹೋಗಬಹುದು.

ನಗರದ ಕೇಂದ್ರ ಭಾಗದಿಂದ ಕೆ.ಆರ್​. ಪುರಂಗೆ ಕೇವಲ 15 ಕಿಮೀ. ಆದರೆ, ಇದನ್ನು ಕ್ರಮಿಸಲು ಕನಿಷ್ಟ 2 ಗಂಟೆ ಬೇಕು. 

ಎಲೆಕ್ಟ್ರಾನಿಕ್​ ಸಿಟಿಯಿಂದ ಕಾರ್ಪೊರೇಷನ್​ ಸರ್ಕಲ್​ಗೆ 22 ಕಿಲೋಮೀಟರ್​. ಮಂಗಳವಾರದಿಂದ ಸಿಲ್ಕ್​ಬೋರ್ಡ್​ ಜಂಕ್ಷನ್​ ಬಳಿ ಆರಂಭವಾಗಿರುವ ವೈಟ್​ ಟಾಪಿಂಗ್​ ಕೆಲಸ ಮುಗಿಯುವ ವರೆಗೂ ನೀವು ಈ ಮಾರ್ಗವನ್ನು ಬಳಸುವರಾದರೆ ಕನಿಷ್ಟ 4 ಗಂಟೆ ಅದಕ್ಕಾಗಿಯೇ ಮೀಸಲಿಡಿ. ಅಂದರೆ ಒಂದು ದಿನದ ಸುಮಾರು 8 ಗಂಟೆಗಳನ್ನು ಸಂಚಾರಕ್ಕೆ ಮೀಸಲಿಡಬೇಕಾಗುತ್ತದೆ. ಇಷ್ಟಾದ ನಂತರವೂ ನಿಮ್ಮಲ್ಲಿ ಚೈತನ್ಯ ಉಳಿದಿದ್ದರೆ ಕೆಲಸ ಮಾಡಿ. ಈ ಅವಧಿಯಲ್ಲಿ ನೀವು ಸಿಂಗಾಪುರಕ್ಕೆ ಹೋಗಬಹುದು. 

ನಾಲ್ಕು ಗಂಟೆಯಲ್ಲಿ 300 ಕಿಲೋಮೀಟರ್​ ದೂರ ಇರುವ ಶಿವಮೊಗ್ಗಕ್ಕೆ ಹೋಗಬಹುದು. ಮೈಸೂರಿಗೆ ಹೋಗಿ ವಾಪಸ್​ ಬರಬಹುದು. ಆದರೆ ಎಲೆಕ್ಟ್ರಾನಿಕ್​ ಸಿಟಿಯಿಂದ ಮೆಜೆಸ್ಟಿಕ್​ಗೆ ಬರಲು ಕನಿಷ್ಟ 4 ಗಂಟೆ ಬೇಕು. ಇನ್ನು ಎಲೆಕ್ಟ್ರಾನಿಕ್​ ಸಿಟಿಯಿಂದ ಕೆಐಎಎಲ್​ ವಿಮಾನ ನಿಲ್ದಾಣಕ್ಕೆ ಹೋಗುವುದಾದರೆ ವಿಮಾನ ಪ್ರಯಾಣದ ನಾಲ್ಕು ಪಟ್ಟು ಸಮಯ ರಸ್ತೆಯಲ್ಲೇ ವ್ಯರ್ಥವಾಗುವುದು ಖಚಿತ. ಪ್ರತಿ ಬಾರಿ ಬೆಂಗಳೂರಿಗೆ ನೂತನ ಪೊಲೀಸ್​ ಆಯುಕ್ತರು ಬಂದಾಗ, ನಗರದ ಟ್ರಾಫಿಕ್​ ನಿಯಂತ್ರಣದ ಬಗ್ಗೆ ಮಾತನಾಡುತ್ತಾರೆ. ಟ್ರಾಫಿಕ್​ ಪೊಲೀಸರ ಕೆಲಸ ವಾಹನ ಸಂಚಾರ ನಿರ್ವಹಿಸುವುದೇ ಹೊರತು ದಂಡ ವಸೂಲಿಯಲ್ಲ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದು ಬರೀ ಶುಲ್ಕ ವಸೂಲಾತಿಯ ಕೆಲಸ.

ಒಂದರ್ಥದಲ್ಲಿ ನೋಡಿದರೆ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಹೆಲ್ಮೆಟ್​ ಅವಶ್ಯಕತೆಯೇ ಇಲ್ಲ. ವಾಹನಕ್ಕಿಂತ ವೇಗವಾಗಿ ಪಾದಚಾರಿಗಳೇ ಹೋಗುವಾಗ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್​ ಅವಶ್ಯಕತೆ ಏಕೆ? ಈ ಪ್ರಶ್ನೆ ಕೂಡ ಸಾರ್ವಜನಿಕವಾಗಿ ಕೇಳಿ ಬರುತ್ತದೆ.

ಈ ಟ್ರಾಫಿಕ್​ ಸಮಸ್ಯೆಗೆ ಇನ್ನೊಂದು ಬಲವಾದ ಕಾರಣವೆಂದರೆ ಸಂಚಾರಿ ಪೊಲೀಸರು ಮತ್ತು ಬಿಡಿಎ, ಬಿಬಿಎಂಪಿ ಮೊದಲಾದ ನಾಗರಿಕ ಸಂಸ್ಥೆಗಳ ನಡುವೆ ಸೂಕ್ತ ಸಂವಹನ ಇಲ್ಲದಿರುವುದು. ವೈಟ್​ ಟಾಪಿಂಗ್​, ರಸ್ತೆ ಅಗಲೀಕರಣ ಮತ್ತಿತರ ಕೆಲಸ ಮಾಡುವ ಮುನ್ನ ಟ್ರಾಫಿಕ್​ ಪೊಲೀಸರು ಮತ್ತು ಸಾರ್ವಜನಿಕ ಸಂಸ್ಥೆಗಳು ಒಟ್ಟಾಗಿ ಕುಳಿತು ಪ್ಲಾನ್​ ಮಾಡಬೇಕು. ಆದರೆ ಅವರ ಪಾಡಿಗೆ ಅವರು, ಇವರ ಪಾಡಿಗೆ ಇವರು ಕೆಲಸ ಮಾಡುತ್ತಾರೆ. ಇದರಿಂದಾಗುವ ಸಮಸ್ಯೆಯನ್ನು ವಾಹನ ಸವಾರರು ಅನುಭವಿಸಬೇಕು. ಮತ್ತೆ ಬಹುತೇಕ ಮುಂದುವರೆದ ನಗರಗಳಲ್ಲಿ ರಸ್ತೆ ದುರಸ್ಥಿಯನ್ನು ಹಗಲು ಹೊತ್ತು ಮಾಡುವುದೇ ಇಲ್ಲ. ರಾತ್ರೋರಾತ್ರಿ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಮುಗಿಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಸಾರ್ವಜನಿಕ ಸಂಸ್ಥೆಗಳಿಗೆ ನಾಗರಿಕರ ಮೇಲೆ ಯಾವುದೇ ಕನಿಕರವಿಲ್ಲ. ಅದು ಅವರ ಕಾರ್ಯ ವೈಖರಿಯಿಂದಲೇ ತಿಳಿಯುತ್ತದೆ.

ಇನ್ನೂ ನಗರದ ಕೋರಮಂಗಲ, ಬಳ್ಳಾರಿ ರಸ್ತೆ ಹಾಗೂ ಕೆಂಗೇರಿ ರಸ್ತೆಗಳಲ್ಲಿ ಕ್ರಮಿಸುವುದು ವಾಹನ ಸವಾರರ ಪಾಲಿಗೆ ನಿಜಕ್ಕೂ ಸಾಹಸವೇ ಸರಿ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರು ನಗರದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಧ್ಯವಾಗಲಿದೆ. ದೇಶದ ಐಟಿ ಸಿಟಿ, ಗ್ರೀನ್ ಸಿಟಿ ಖ್ಯಾತಿಯ ಬೆಂಗಳೂರು ಟ್ರಾಫಿಕ್​ನಿಂದಾಗಿ 'ಡೆಡ್ ಸಿಟಿ' ಯಾಗಿ ಬದಲಾಗಲಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
First published: December 3, 2019, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading