ಬೀದಿ ಬದಿಯ ಪ್ರಾಣಿಗಳಿಗೆ ಬದುಕು ಕೊಟ್ಟ ಟೆಕ್ಕಿಯ ಬದುಕೇ ಈಗ ದುಸ್ಥರ; ಶ್ವಾನಗಳ ಆರೈಕೆಗೆ ಬೇಕು 2 ಲಕ್ಷ ರೂಪಾಯಿ!

ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ‌ ಸಂಬಳ ಬರುತ್ತಿದ್ದ ಇವರ ಕಾರ್ಪೊರೇಟ್ ಕೆಲಸವನ್ನು ಕೋವಿಡ್ ಕಿತ್ತುಕೊಂಡಿದೆ. ತಮ್ಮ ಸಂಬಳದಲ್ಲೇ 70 ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ, ಆಶ್ರಯ ನೀಡುತ್ತಿದ್ದ ಆಕೆಯ ತಲೆ ಮೇಲಿನ ಸೂರು ಯಾವ ಕ್ಷಣದಲ್ಲಾದರೂ ಕೈತಪ್ಪಿ ಹೋಗುವಂಥಾ ಪರಿಸ್ಥಿತಿ ಇದೆ.ಇಷ್ಟೆಲ್ಲಾ ಆದರೂ ಮತ್ತಷ್ಟು ಜೀವಗಳಿಗೆ ಆಸರೆಯಾಗುವ ಹಂಬಲ ಅವರದ್ದು.  

ಶ್ವಾನಗಳಿಗೆ ಆಶ್ರಯ ನೀಡಿದ ಮಹಿಳೆ

ಶ್ವಾನಗಳಿಗೆ ಆಶ್ರಯ ನೀಡಿದ ಮಹಿಳೆ

  • Share this:
ಈ ಮನೆಯೊಳಗೆ ಕಾಲಿಟ್ಟ ಕೂಡಲೇ ನಿಮಗೆ ಹತ್ತಾರು ನಾಯಿಗಳು ಬೊಗಳೋದು ಕೇಳಿಸುತ್ತೆ.. ನಂತರ ಎದುರಿಗೆ ಬರುತ್ತವೆ ಒಂದೊಂದೇ ನಾಯಿಗಳು. ಒಂದರ ಕಾಲು ವಾಹನಕ್ಕೆ ಸಿಕ್ಕು ಮುರಿದಿದ್ರೆ, ಮತ್ತೊಂದಕ್ಕೆ ಮನುಷ್ಯರನ್ನು ಕಂಡರೇ ಭಯ. ಇನ್ನೊಂದಕ್ಕೆ ಮೈಯ ರೋಮಗಳೆಲ್ಲಾ ಉದುರಿ ಹೋಗುವ ಕಾಯಿಲೆ. ಹೀಗೆ ಯಾರಿಗೂ ಬೇಡವಾದ ನಾಯಿಗಳ ಪಾಲಿಗೆ ಈಕೆ ಅಮ್ಮನಾಗಿಬಿಟ್ಟಿದ್ದಾರೆ.

ಈಕೆ ಜೆನಿ ಲೋಪೆಜ್. 50 ವರ್ಷ ವಯಸ್ಸಿನ ಟೆಕ್ಕಿ. ಪ್ರತಿಷ್ಠಿತ ಸಂಸ್ಥೆಯೊಂದರ ಬೆಂಗಳೂರು ವಿಭಾಗದ ಮುಖ್ಯಸ್ಥರಾಗಿ ತಿಂಗಳಿಗೆ ಮೂರು ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಿದ್ದವರು. ಕೋವಿಡ್, ಲಾಕ್ ಡೌನ್ ಶುರುವಾಗಿ ಎಲ್ಲೆಡೆ ವರ್ಕ್ ಫ್ರಂ ಹೋಮ್ ಶುರುವಾದಾಗ ಮಾರ್ಚ್ ತಿಂಗಳಲ್ಲಿ ಜೆನಿ ತಮ್ಮ ಕೆಲಸ ಕಳೆದುಕೊಂಡರು. ಎರಡು ಮನೆಗಳನ್ನು ಬಾಡಿಗೆಗೆ ಪಡೆದು ಅವುಗಳ ತುಂಬಾ ನಾಯಿಗಳ ಜೊತೆ‌ ವಾಸಿಸುತ್ತಿರೋ ಇವರಿಗೆ ಅಕ್ಷರಶಃ ದಿಕ್ಕು ತೋಚದಂತಾಗಿದೆ.

ಸುಮಾರು 70ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಆಶ್ರಯ ಕೊಡುತ್ತಿರುವ ಇವರಿಗೆ ತಿಂಗಳಿಗೆ ಏನಿಲ್ಲವೆಂದರೂ 2.7 ಲಕ್ಷ ರೂ ಖರ್ಚಾಗುತ್ತದೆ. ಆದರೆ ಕೆಲಸ ಕಳೆದುಕೊಂಡ ಮೇಲೆ ಕೆಲಸದವರನ್ನು ಬಿಡಿಸಿ ಎಲ್ಲಾ ಕೆಲಸ ತಾವೇ ಮಾಡಿಕೊಳುತ್ತಿದ್ದಾರೆ. ಆದರೂ ನಾಯಿಗಳ ಆಹಾರ, ಔಷಧ, ಮನೆ ಬಾಡಿಗೆ ಹೀಗೆ ಎಲ್ಲಾ ಸೇರಿ 2.2 ಲಕ್ಷ ರೂಪಾಯಿಗಳಾದರೂ ಬೇಕೇ ಬೇಕು ಎನ್ನುತ್ತಾರಿವರು.ಇದುವರಗೆ ಇವರ ತಂದೆ-ತಾಯಿ, ಸ್ನೇಹಿತರು ಹೀಗೆ ಅನೇಕರು ದೇಣಿಗೆ ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಕೋವಿಡ್ ಕೊಟ್ಟ ಏಟಿನಿಂದ ಸಾಫ್ಟ್‌ವೇರ್ ಉದ್ಯಮ ಚೇತರಿಸಿಕೊಳ್ಳೋಕೆ ಇನ್ನೂ ಸಾಕಷ್ಟು ಸಮಯ ಬೇಕು. ಕೆಲಸ ಹುಡುಕುತ್ತಾ, ತನ್ನ ನಂತರ ನಾಯಿಗಳ ಪೋಷಣೆಗೆ ದಾರಿ ಕಲ್ಪಿಸೋಕೆ ಹೆಣಗಾಡ್ತಿದ್ದಾರೆ ಜೆನಿ. ಈಗ ಇವರು ಬಾಡಿಗೆಗೆ ಇರುವ ಮನೆಯನ್ನು ಮಾಲೀಕರು ಮಾರಿಬಿಟ್ಟಿದ್ದಾರೆ.ಹಾಗಾಗಿ ಮನೆಯನ್ನೂ ಖಾಲಿ ಮಾಡಬೇಕಿದೆ, ಇಷ್ಟೊಂದು ನಾಯಿಗಳ ಜೊತೆ ವಾಸ ಮಾಡಲು ಅನೇಕರು ಅವಕಾಶ ಮಾಡಿಕೊಡ್ತಿಲ್ಲ. ಇದೆಲ್ಲಾ ಸೇರಿ ಇವರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಈ ದಿಕ್ಕಿಲ್ಲದ ಜೀವಗಳಿಗೆ ಇರಲು ಒಂದು ಸ್ಥಳ, ಎರಡು ಹೊತ್ತಿನ ಊಟದ ವ್ಯವಸ್ಥೆಯಾದ್ರೂ ಮಾಡಲು ಜೆನಿ ಹರಸಾಹಸ ಪಡ್ತಿದ್ದಾರೆ ಇವರ ಕಷ್ಟದ ದಿನಗಳು ಕಳೆದು ಉತ್ತಮ‌ ದಿನಗಳು ಬೇಗ ಬರುತ್ತಾ ಎಂದ ಕಾದು ನೋಡಬೇಕಷ್ಟೇ.
Published by:Rajesh Duggumane
First published: