Bangalore Tech Summit: ಬೆಂಗಳೂರು ತಂತ್ರಜ್ಞಾನ ಮೇಳಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ; ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟನೆ​

Bengaluru Tech Summit: ಇಂದು ಬೆಳಿಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ಬೆಂಗಳೂರು(ನ. 19): ಕೋವಿಡ್ ಸವಾಲಿನ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಭಾರತದ ಮಹತ್ವದ ತಾಂತ್ರಿಕ ಕಾರ್ಯಕ್ರಮವಾದ “ಬೆಂಗಳೂರು ತಂತ್ರಜ್ಞಾನ ಮೇಳ-2020 (ಬಿಟಿಎಸ್-2020)” ಕ್ಕಾಗಿ  ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಈ ಮೇಳವನ್ನು  ಜನೋಪಯೋಗಕ್ಕೆ ತಂತ್ರಜ್ಞಾನ ಬಳಸುವ ಬಗ್ಗೆ ಪ್ರಧಾನಿ ಮೋದಿ ಸ್ವತಃ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.  ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಸ್ವಿಸ್​ ಗಣರಾಜ್ಯದ ಉಪರಾಷ್ಟ್ರಾಧ್ಯಕ್ಷ ಗೈ ಪರ್ಮೆಲಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಆನ್ ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಐಟಿ/ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಜಗದೀಶ್ ಶೆಟ್ಟರ್ ಸಮಾರಂಭದಲ್ಲಿ ಹಾಜರಿರಲಿದ್ದಾರೆ.  ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ 22 ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದಾದ್ಯಂತ ಗಮನ ಸೆಳೆದಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕುಮಾರಿಯ ಹಿನ್ನೆಲೆಯಲ್ಲಿ ವರ್ಚುಯಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ-ವಿದೇಶಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಫಿನ್ಲೆಂಡ್, ಇಸ್ರೇಲ್, ನೆದರ್ ಲೆಂಡ್ಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಸ್ವೀಡನ್, ಸ್ವಿಟ್ವರ್ ಲೆಂಡ್, ಡೆನ್ಮಾರ್ಕ್, ತೈವಾನ್, ಜಪಾನ್, ಲಿಥುವಾನಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳು ಈ ಮೇಳವನ್ನು ಕಾತರದಿಂದ ಎದುರು ನೋಡುತ್ತಿವೆ. 100ಕ್ಕೂ ಹೆಚ್ಚು ನವೋದ್ಯಮಗಳು, 4000ಕ್ಕೂ ಹೆಚ್ಚು ಉದ್ಯಮ ಗಣ್ಯರು, ಸುಮಾರು 270 ವಿಷಯ ಪರಿಣತರು ಹಾಗೂ 70ಕ್ಕೂ ಹೆಚ್ಚು ಗೋಷ್ಠಿಗಳಿಗೆ ಮೇಳ ಸಾಕ್ಷಿಯಾಗಲಿದೆ. 250ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿವೆ. 20,000ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ಕರ್ನಾಟಕ ಸರ್ಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ 7 ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.

  ವೈವಿಧ್ಯಮಯ ಗೋಷ್ಠಿ:

  ನಾಲ್ಡೇಜ್ ಹಬ್, ಇನ್ನೊವೇಷನ್ ಕಾರ್ನರ್, ಒನ್ ಹೆಲ್ತ್, ಕಂಟ್ರಿ ಸೆಷನ್ಸ್ ವಿಭಾಗಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಜನರ ದೈನಂದಿನ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿರುವ ತಾಂತ್ರಿಕ ನಾವೀನ್ಯತೆಗಳನ್ನು  ಗಮನದಲ್ಲಿರಿಸಿಕೊಂಡು ವಿಷಯ ಗೋಷ್ಠಿಗಳನ್ನು ಆಯ್ಕೆ ಮಾಡಲಾಗಿದೆ. ಕೃಷಿ ತಾಂತ್ರಿಕತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಆಹಾರ ಮತ್ತು ಪೌಷ್ಟಿಕತೆ,  ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಡ್ರೋನ್, 5ಜಿ, ಸೈಬರ್ ಸುರಕ್ಷತೆ, ಸ್ಮಾರ್ಟ್ ಸಿಟಿಗಳು ಹಾಗೂ ನಗರ ಸುಸ್ಥಿರತೆ, ಲಸಿಕೆಗಳು (ಆವಿಷ್ಕಾರ ಮತ್ತು ಅಭಿವೃದ್ಧಿ), ಕೊರೋನಾ ನಂತರದ ಸನ್ನಿವೇಶದಲ್ಲಿ ನಾಯಕತ್ವದ ಪುನರ್ ವ್ಯಾಖ್ಯಾನ, ರಾಷ್ಟ್ರೀಯ ಶಿಕ್ಷಣ ನೀತಿ, ಫಿನ್ ಟೆಕ್ ಇತ್ಯಾದಿ ವಿಷಯಗಳನ್ನು ಇವು ಒಳಗೊಂಡಿವೆ.

  ‘ಹಸಿರು ಪುನರ್ ಸೃಷ್ಟಿಯಲ್ಲಿ ತಂತ್ರಜ್ಞಾನದ ಪಾತ್ರ ಹಾಗೂ ಸುಸ್ಥಿರ ಭವಿಷ್ಯ’ ಕುರಿತು (ಯುಕೆ), “ಸೈಬರ್ ಸ್ಪೇಸ್ ನಿಂದ ಔಟರ್ ಸ್ಪೇಸ್ ವರೆಗೆ” ಕುರಿತು (ಆಸ್ಟ್ರೇಲಿಯಾ), “ಆಹಾರ ಮತ್ತು ಪೌಷ್ಟಿಕತೆಯ ಭವಿಷ್ಯದ ಡ್ರೈವಿಂಗ್” ಕುರಿತು (ಸ್ವಿಟ್ಜರ್ ಲೆಂಡ್), “ಇ-ಮೊಬಿಲಿಟಿ, ಭವಿಷ್ಯದೆಡೆಗೆ ಹೆಜ್ಜೆ” ಕುರಿತು (ಜರ್ಮನಿ) ವಿಷಯ ಮಂಡನೆಗೆ ಉತ್ಸುಕವಾಗಿವೆ. ಕರ್ನಾಟಕ ಸೇರಿದಂತೆ ಭಾರತದ 50ಕ್ಕೂ ಹೆಚ್ಚು ನವೋದ್ಯಮಗಳಿಗೆ ಯುರೋಪ್ ಮಾರುಕಟ್ಟೆ ಪ್ರವೇಶಿಸುವುದಕ್ಕೆ ನೆರವಾಗಲು ನೆದರ್ ಲೆಂಡ್ಸ್ ಒತ್ತು ನೀಡಲಿದೆ. ಈ ಮೇಳವು ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು, ಉದ್ದಿಮೆಗಳು, ಸಂಶೋಧನಾ ಕೇಂದ್ರಗಳು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಕಾರ್ಯವನ್ನೂ ಮಾಡುತ್ತದೆ. ಆಸಕ್ತರು ರಾಜ್ಯ ಸೇರಿದಂತೆ ಜಗತ್ತಿನ ಯಾವುದೇ ಭಾಗದಿಂದ ಬಿಟಿಎಸ್ ಮೇಳಕ್ಕಾಗಿ ಸೃಜಿಸಲಾಗಿರುವ ಆನ್ ಲೈನ್ ಕೊಂಡಿಗಳ ಮೂಲಕ ಪಾಲ್ಗೊಳ್ಳಬಹುದು.
  Published by:Seema R
  First published: