ಪ್ರಯಾಣಿಕರೇ ಎಚ್ಚರ! ಮೈಸೂರಿನಿಂದ ಬೆಂಗಳೂರಿಗೆ ಡ್ರಾಪ್ ನೀಡುವ ಆಮಿಷವೊಡ್ಡಿ ಹಣ, ಚಿನ್ನ ದೋಚಿದ ಕಳ್ಳರು

ಮೈಸೂರಿನಲ್ಲಿ ಬಸ್ ಸ್ಟಾಂಡ್​ನಲ್ಲಿ ನಿಂತಿದ್ದ ಟೆಕ್ಕಿಗೆ ಮೂವರು ಕಾರಿನಲ್ಲಿ ಡ್ರಾಪ್ ನೀಡುವುದಾಗಿ ಹೇಳಿದ್ದರು. ಬೆಂಗಳೂರಿಗೆ ಬೇಗ ತಲುಪುವ ಉದ್ದೇಶದಿಂದ ಕಾರು ಹತ್ತಿದ ಟೆಕ್ಕಿಗೆ ಚಾಕು ತೋರಿಸಿ ಚೈನ್, ಉಂಗುರ ದೋಚಿ, ಎಟಿಎಂನಿಂದ ಬಲವಂತವಾಗಿ 43 ಸಾವಿರ ರೂ. ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು.

news18-kannada
Updated:January 14, 2020, 9:29 AM IST
ಪ್ರಯಾಣಿಕರೇ ಎಚ್ಚರ! ಮೈಸೂರಿನಿಂದ ಬೆಂಗಳೂರಿಗೆ ಡ್ರಾಪ್ ನೀಡುವ ಆಮಿಷವೊಡ್ಡಿ ಹಣ, ಚಿನ್ನ ದೋಚಿದ ಕಳ್ಳರು
ಹಣ, ಚಿನ್ನ ಕಳೆದುಕೊಂಡ ಮಧುವಿಕಾಸ್
  • Share this:
ಮೈಸೂರು (ಜ. 14): ಬೆಂಗಳೂರು ಮತ್ತು ಮೈಸೂರಿನ ನಡುವೆ ಪ್ರತಿದಿನ ಸಾವಿರಾರು ಜನ ಓಡಾಡುತ್ತಾರೆ. ಬಸ್, ರೈಲುಗಳಿದ್ದರೂ ಬೈಕ್, ಕಾರಿನಲ್ಲಿ ಓಡಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಎರಡೂ ನಗರಗಳ ನಡುವೆ ಹೆಚ್ಚೇನೂ ಅಂತರವಿಲ್ಲದ ಕಾರಣ ಪ್ರತಿದಿನ ಅಥವಾ ವಾರಕ್ಕೊಮ್ಮೆಯಾದರೂ ಮೈಸೂರು- ಬೆಂಗಳೂರಿಗೆ ಓಡಾಡುವವರು ಇದ್ದೇ ಇರುತ್ತಾರೆ. ಅಂಥವರು ಈ ಸುದ್ದಿಯನ್ನು ಓದಲೇಬೇಕು. ಯಾಕೆ ಅಂತೀರಾ?

ಬೆಂಗಳೂರು- ಮೈಸೂರು ನಡುವೆ ಓಡಾಡುವವರಿಗೆ ರೈಲು ಬೆಸ್ಟ್​. ಆದರೆ, ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದವರು ಸ್ವಂತ ವಾಹನ ಅಥವಾ ಬಸ್​ಗಳ ಮೊರೆಹೋಗುತ್ತಾರೆ. ಆದರೆ, ಕೆಲವೊಮ್ಮೆ ಯಾವುದೇ ವಾಹನ ಸಿಗದೆ ಯಾರ ಬಳಿಯಾದರೂ ಡ್ರಾಪ್ ಕೇಳಬೇಕಾಗುತ್ತದೆ. ಈ ರೀತಿ ಡ್ರಾಪ್ ನೀಡುವ ನೆಪದಲ್ಲಿ ನಿಮ್ಮಲ್ಲಿದ್ದ ಹಣ, ಬೆಲೆಬಾಳುವ ವಸ್ತುಗಳನ್ನು ದೋಚುವವರ ಗುಂಪೇ ಇದೆ. ಹೀಗಾಗಿ, ಪ್ರಯಾಣಿಕರು ಎಚ್ಚರಿಕೆಯಿಂದಿರುವುದು ಉತ್ತಮ.

ಇದನ್ನೂ ಓದಿ: ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆಯ ಆರೋಪ; ನಿರ್ಮಾಪಕರಿಂದ ದೂರು ದಾಖಲು

ಬೆಂಗಳೂರಿನಿಂದ ವೀಕೆಂಡ್​ಗೆಂದು ಮೈಸೂರಿಗೆ ತೆರಳಿದ್ದ ಸಾಫ್ಟ್​ವೇರ್ ಇಂಜಿನಿಯರ್ ಸೋಮವಾರ ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದರು. ಆಫೀಸಿಗೆ ಲೇಟಾಗುತ್ತದೆ ಎಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಹೊರಟಿದ್ದ ಟೆಕ್ಕಿಗೆ ಡ್ರಾಪ್ ಕೊಡುವುದಾಗಿ ಹೇಳಿದ ಕಾರು ಚಾಲಕ ಮತ್ತು ಆತನ ಜೊತೆಗಿದ್ದ ಇಬ್ಬರು ಚಾಕು ತೋರಿಸಿ ಸುಲಿಗೆ ಮಾಡಿದ್ದಾರೆ.

ಮೈಸೂರಿನಲ್ಲಿ ಬಸ್ ಸ್ಟಾಂಡ್​ನಲ್ಲಿ ನಿಂತಿದ್ದ ಟೆಕ್ಕಿಗೆ ತಾವೂ ಬೆಂಗಳೂರಿನ ಕಡೆ ಹೋಗುತ್ತಿರುವುದಾಗಿ ಹೇಳಿದ್ದ ಮೂವರ ಗುಂಪು ಆತನನ್ನು ಕಾರು ಹತ್ತಿಸಿಕೊಂಡಿತ್ತು. ನಂತರ ಕಾರಿನಲ್ಲಿ ಚಾಕು ತೋರಿಸಿ ಚೈನ್, ಉಂಗುರ ದೋಚಿದ ಆ ಮೂವರು ಎಟಿಎಂನಿಂದ ಬಲವಂತವಾಗಿ 43 ಸಾವಿರ ರೂ. ಡ್ರಾ ಮಾಡಿಸಿ ಹಣ ಪಡೆದುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ನಮ್ಮ ಬಲಿದಾನಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯ ನಾಶ; ಡಿಕೆಶಿಗೆ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ

ಮೈಸೂರಿನ ಗೌರಿಶಂಕರ ನಗರದ ನಿವಾಸಿ ಮಧುವಿಕಾಸ್ ಹಣ, ಚಿನ್ನ ಕಳೆದುಕೊಂಡ ಟೆಕ್ಕಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರೋ ಮಧುವಿಕಾಸ್ ಸೋಮವಾರ ಮುಂಜಾನೆ ಬೆಂಗಳೂರಿಗೆ ತೆರಳಲು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಕಾರಿನಲ್ಲಿದ್ದ ಮೂವರು ಡ್ರಾಪ್ ಕೊಡುವುದಾಗಿ ಹೇಳಿದ್ದರಿಂದ ಬೇಗ ಬೆಂಗಳೂರಿಗೆ ತಲುಪುವ ಉದ್ದೇಶದಿಂದ ಮಧುವಿಕಾಸ್ ಕಾರು ಹತ್ತಿದ್ದರು. ಕೊಲಂಬಿಯಾ ಏಷಿಯಾ ಬಳಿ ರಿಂಗ್ ರಸ್ತೆ ಮೂಲಕ ಕೆ.ಆರ್.ಎಸ್ ರಸ್ತೆ ಕಡೆಗೆ ಕಾರು ಹೊರಟಿತ್ತು. ಅಲ್ಲೇ ಕಾರು ನಿಲ್ಲಿಸಿ ಚಾಕು ತೋರಿಸಿ 5 ಗ್ರಾಂ ಉಂಗುರ, 10 ಗ್ರಾಂ ತೂಕದ ಸರ, ಮೊಬೈಲ್ ಕಸಿದ ದುಷ್ಕರ್ಮಿಗಳು ಒಂಟಿಕೊಪ್ಪಲಿನ ಎಟಿಎಂನಲ್ಲಿ 20 ಸಾವಿರ ರೂ. ಮತ್ತು ಅಶೋಕ ರಸ್ತೆಯ ಎಟಿಎಂನಲ್ಲಿ 23 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದರು.ಎಟಿಎಂ ಪಿನ್ ತಪ್ಪಾಗಿ ಹೇಳಲು ಯತ್ನಿಸಿದ ಮಧುವಿಕಾಸ್ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು ಹಣ ಪಡೆದುಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಕನ್ನಡ ಮಾತನಾಡುತ್ತಿದ್ದರು, ಸ್ವಿಫ್ಟ್​ ಕಾರಿನಲ್ಲಿ ತನ್ನನ್ನು ಕರೆದೊಯ್ದರು ಎಂದು ತಿಳಿಸಿರುವ ಮಧುವಿಕಾಸ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Published by: Sushma Chakre
First published: January 14, 2020, 9:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading