ಇತ್ತೀಚಿನ ದಿನಗಳಲ್ಲಿ ಕೆಲಸ, ಮನೆ ಎಲ್ಲಾ ಕಳೆದುಕೊಂಡವರ ಸಂಖ್ಯೆ ದೊಡ್ಡದೇ. ಕೆಲಸದಲ್ಲಿದ್ದವರ ಕತೆ ಒಂದು ಥರಾ ಆದರೆ ಅಂದಿನ ಊಟಕ್ಕೆ ಅಂದೇ ದುಡಿಯಬೇಕಾದ ಕೊಳಗೇರಿ ನಿವಾಸಿಗಳ ಪಾಡು ಮತ್ತೂ ಶೋಚನೀಯ. ಮಾಡೋಕೆ ಕೆಲಸವಿಲ್ಲದೇ ಅನೇಕರು ಭಿಕ್ಷಾಟನೆ, ಕಳ್ಳತನ, ಜೂಜು ಮುಂತಾದರಲ್ಲೇ ಮುಳುಗಿಹೋಗಿದ್ದಾರೆ. ಇಂಥಾ ಒಂದಷ್ಟು ಹೆಣ್ಣು ಮಕ್ಕಳನ್ನ ಒಂದುಕಡೆ ಸೇರಿಸಿ ಅವರಿಗೆ ಆದಾಯ ಮೂಲ ಸೃಷ್ಟಿಸೋದರ ಜೊತೆ ಹೊಟ್ಟೆ ತುಂಬಿಸೋ ದಾರಿ ಕಲ್ಪಿಸಿಕೊಟ್ಟಿದ್ದಾರೆ ಒಂದಷ್ಟು ಸ್ವಯಂಸೇವಕರು.
ಒಂದು ಇಕ್ಕಟ್ಟಾದ ಪ್ಯಾಸೇಜ್ ಥರದ ಸ್ಥಳ. ಅಲ್ಲೇ ನೆಲದ ಮೇಲೆ ಹಾಸಿದ ಚಾಪೆ ಮೇಲೆ ಒಂದು ಹತ್ತು ಜನ ಹೆಣ್ಮಕ್ಕಳು ಕುಳಿತುಕೊಂಡು ಕಾಟನ್ ಬಟ್ಟೆ ತುಂಡುಗಳನ್ನು ನೀಟಾಗಿ ಕೈಯಲ್ಲೇ ಹೊಲಿಯುತ್ತಿದ್ದಾರೆ. ಇವರು ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್ ಗಳನ್ನು ಹೊಲೆಯುತ್ತಿದ್ದಾರೆ. ಈ ಪ್ಯಾಡ್ ಗಳು ಬುಟ್ಟಕಟ್ಟು ಜನಾಂಗದ ಮಹಿಳಯರ ಬಳಕೆಗಾಗಿ ಕಳಿಸಲಾಗುತ್ತದೆ.. ಇದೆಲ್ಲವನ್ನೂ ಮಾಡ್ತಿರೋದು ದ ಗುಡ್ ಕ್ವೆಸ್ಟ್ ಫೌಂಡೇಶನ್ ಎನ್ನುವ ಸ್ವಯಂಸೇವಾ ಸಂಘಟನೆ. ಸ್ಲಂನ ಕೆಲ ಮಹಿಳೆಯರನ್ನು ಒಂದು ಕಡೆ ಸೇರಿಸಿ, ಅವರಿಗೆ ಬಟ್ಟೆಯನ್ನು ಹೇಗೆ ಹೊಲಿಯಬೇಕು ಎಂದು ಮೊದಲು ಕಲಿಸ್ತಾರೆ. ನಂತರ ಅವರು ಮಾಡಿದ ಪ್ರತೀ ಪ್ಯಾಡ್ ಗೆ ಬದಲಾಗಿ ಆರೂವರೆ ರೂಪಾಯಿ ಹಣ ಕೂಡಾ ನೀಡುತ್ತಾರೆ. ಅಷ್ಟೇ ಅಲ್ಲ, ಭಿಕ್ಷೆ ಬೇಡೋಕೆ ಅಥವಾ ಜೂಜಾಡೋಕೆ ಹೋದರೆ ಅಂಥವರನ್ನು ಇಲ್ಲಿ ಸೇರಿಸಿಕೊಳ್ಳಲ್ಲ ಎಂದು ಎಚ್ಚರಿಕೆ ಕೊಡಲಾಗಿದೆ. ಹಾಗಾಗಿ ಚಿಕ್ಕ ಆದಾಯವೇ ಆದರೂ ಗೌರವದಿಂದ ಬದುಕುವ ಆಸೆಯಿಂದಲೇ ಅನೇಕರು ಇಲ್ಲಿಗೆ ಬರುತ್ತಾರೆ.
ಓರ್ವ ಮಹಿಳೆ ಒಂದು ದಿನಕ್ಕೆ ಸುಮಾರು 30 ಪ್ಯಾಡ್ ಗಳನ್ನು ತಯಾರಿಸಬಲ್ಲಳು. ಇನ್ನು, ಪುಟ್ಟ ಮಕ್ಕಳಿದ್ದರೆ ಅವರನ್ನು ಇಲ್ಲೇ ನೋಡಿಕೊಳ್ತಾರೆ. ಹಾಗಾಗಿ ತಾಯಂದಿರು ಕೂಡಾ ಕೆಲಸ ಮಾಡಲು ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಇಂಥಾ ನೂರಾರು ಮಹಿಳೆಯರನ್ನು ಹುಡುಕಿ ಅವರಿಗೆ ಕೆಲಸದ ಜೊತೆಗೆ ಆತ್ಮಗೌರವ ಕೊಡೋ ಪ್ರಯತ್ನ ಇದು. ಹೂಡಿ ಬಳಿಯ ಈ ಸ್ಥಳದಲ್ಲಿ ಒಬ್ಬ ಮೇಲ್ವಿಚಾರಕರನ್ನು ನೇಮಿಸಿದಂತೆ ಎಲ್ಲಾ ಕಡೆಯೂ ಮಾಡಲಾಗಿದೆ.ಒಂದಷ್ಟು ಪ್ಯಾಡ್ ಗಳು ರೆಡಿಯಾದ ನಂತರ ಗುಡ್ ಕ್ವೆಸ್ಟ್ ಫೌಂಡೇಶನ್ ನ ಸ್ವಯಂಸೇವಕರು ಅವುಗಳನ್ನು ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸ್ವತಃ ತಾವೇ ಹೋಗಿ ನೀಡ್ತಾರೆ. ಜೊತೆಗೆ ಅವುಗಳ ಬಳಕೆಯ ಬಗ್ಗೆಯೂ ತಿಳಿಸ್ತಾರೆ.
ಕನಿಷ್ಠ 5 ವರ್ಷಗಳವರಗೆ ಅವರು ಇವುಗಳನ್ನು ಬಳಸಬಹುದು. ಇದರಿಂದ ಹಣದ ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯ ಮತ್ತು ಉತ್ತಮ ಆರೋಗ್ಯ ಕೂಡಾ ಸಿಗುತ್ತದೆ ಎಂದು ಅವರಿಗೆ ಮನದಟ್ಟು ಮಾಡಿಕೊಡ್ತಾರೆ. ಈಗಾಗಲೇ ಮಲೆಮಹದೇಶ್ವರ, ಬಿಳಿಗಿರಿರಂಗ ಮುಂತಾದ ಅರಣ್ಯ ಪ್ರದೇಶಗಳ ಬುಡಕಟ್ಟು ಜನಾಂಗದ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಪ್ಯಾಡ್ ಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತು, ತಯಾರಿಸಿದ ಮಹಿಳೆಯರಿಗೆ ನೀಡುವ ಹಣ ಮುಂತದ ಎಲ್ಲಾ ವೆಚ್ಚಗಳೂ ದೇಣಿಗೆಯ ರೂಪದಲ್ಲೇ ಬರುತ್ತವೆ. ವಾರದ ಉಳಿದ ದಿನ ತಂತಮ್ಮ ಹೊಟ್ಟೆಪಾಡಿನ ಕೆಲಸಗಳನ್ನು ಮಾಡಿಕೊಂಡಿರೋ ಅನೇಕ ಸ್ವಯಂಸೇವಕರು ರಜೆಯ ಸಂದರ್ಭದಲ್ಲಿ ಹೀಗೆ ಸಮಯದ ಸದುಪಯೋಗ ಮಾಡ್ತಾರೆ. ಮುಂದಿನ ದಿನಗಳಲ್ಲಿ ಈ ಮಹಿಳೆಯರ ಬಳಿ ಮರುಬಳಕೆಯ ಬ್ಯಾಗ್ ಗಳನ್ನು ತಯಾರಿಸಿ ದೊಡ್ಡ ಮಟ್ಟಿಗೆ ಮಾರಾಟ ಮಾಡಿ ಆ ಮೂಲಕ ಇವರಿಗೆ ಹೆಚ್ಚಿನ ಆದಾಯ ಸಿಗಯವಂತೆ ಮಾಡೋ ಆಲೋಚನೆ ಈ ಸಂಸ್ಥೆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ