ಕಾಸರಗೋಡು ಯುವತಿ ಅತ್ಯಾಚಾರ ಪ್ರಕರಣ; ಸಿಐಡಿ ತನಿಖೆಗೆ ವಹಿಸಲು ಡಿಜಿಪಿಗೆ ಶೋಭಾ ಕರಂದ್ಲಾಜೆ ಮನವಿ

ಕಾಸರಗೋಡು ಯುವತಿಯ ಮೇಲೆ ಅನ್ಯಕೋಮಿನ ವ್ಯಕ್ತಿಗಳು ಬೆಂಗಳೂರಿಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ರಿಷಬ್, ಅನ್ಸರ್ ಹಾಗೂ ಅನ್ಸರ್​ ಪತ್ನಿ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು.

news18-kannada
Updated:January 13, 2020, 12:36 PM IST
ಕಾಸರಗೋಡು ಯುವತಿ ಅತ್ಯಾಚಾರ ಪ್ರಕರಣ; ಸಿಐಡಿ ತನಿಖೆಗೆ ವಹಿಸಲು ಡಿಜಿಪಿಗೆ ಶೋಭಾ ಕರಂದ್ಲಾಜೆ ಮನವಿ
ಶೋಭಾ ಕರಂದ್ಲಾಜೆ
  • Share this:
ಬೆಂಗಳೂರು (ಜ. 13): ಕಾಸರಗೋಡಿನ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಬೆದರಿಕೆಯೊಡ್ಡುತ್ತಿದ್ದ ಘಟನೆ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ.

ಕಾಸರಗೋಡು ಯುವತಿಯ ಮೇಲೆ ಅನ್ಯಕೋಮಿನ ವ್ಯಕ್ತಿಗಳು ಬೆಂಗಳೂರಿಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ರಿಷಬ್, ಅನ್ಸರ್ ಹಾಗೂ ಅನ್ಸರ್​ ಪತ್ನಿ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು. ರಿಷಬ್ ಎಂಬ ಕೇರಳದ ವ್ಯಕ್ತಿ ಕಾಸರಗೋಡಿನ ಯುವತಿಯನ್ನು ಬೆಂಗಳೂರಿಗೆ ಕರೆತಂದು ಸ್ನೇಹ ಸಂಪಾದಿಸಿಕೊಂಡು, ಆಕೆಗೆ ಜ್ಯೂಸಿನಲ್ಲಿ ಅಮಲು ಬರುವ ಪದಾರ್ಥ ಬೆರೆಸಿ ಕುಡಿಸಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಅಲ್ಲದೆ, ಅತ್ಯಾಚಾರ ನಡೆಸಿದ್ದನ್ನು ಚಿತ್ರೀಕರಣ ಮಾಡಿಕೊಂಡು, ಆ ವಿಡಿಯೋ ಇಟ್ಟುಕೊಂಡು ಯುವತಿಯನ್ನು ತಮ್ಮ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದ. ಒಂದೊಮ್ಮೆ ಮತಾಂತರಗೊಳ್ಳದಿದ್ದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಳು. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಎದುರು ಆಕೆ ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಳು.

ಇದನ್ನೂ ಓದಿ: ಯಡಿಯೂರಪ್ಪ ಕಾರಿಗೆ 100 ರೂ. ದಂಡ; 1 ವರ್ಷ ಕಳೆದರೂ ಫೈನ್ ಕಟ್ಟದ ಸಿಎಂ

ರಿಷಬ್​ ಆ ಯುವತಿಯೊಂದಿಗೆ ಬೆಂಗಳೂರಿಗೆ ಬಂದಾಗ ಆತನಿಗೆ ಉಳಿಯಲು ಅನ್ಸರ್ ​ ತನ್ನ ಮನೆಯಲ್ಲೇ ಜಾಗ ಕೊಟ್ಟಿದ್ದ. ಮೂರು ದಿನಗಳ ಕಾಲ ರಿಷಬ್​ ಯುವತಿಯನ್ನು ಇಲ್ಲಿಯೇ ಇಟ್ಟುಕೊಂಡಿದ್ದ. ಈ ವೇಳೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನ್ಸರ್​ನನ್ನು ಕೂಡ ಬಂಧಿಸಲಾಗಿದ್ದು, ರಿಷಬ್ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಈ ಬಗ್ಗೆ ಕಾಸರಗೋಡಿನಲ್ಲಿ ದೂರು ನೀಡಿದ್ದರೂ ಕೇರಳ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಡ ಹೇರಿದ ಯುವಕರು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಸಂತ್ರಸ್ತ ಯುವತಿ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಸಂತ್ರಸ್ತೆ ಜೊತೆ ತೆರಳಿ ಪೊಲೀಸ್ ಕಮಿಷನರ್​ಗೆ ಶೋಭಾ ಕರಂದ್ಲಾಜೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ವಿಮಾನದಲ್ಲಿದ್ದ ಯುವತಿಯಿಂದ ಬಾಂಬ್ ಸ್ಫೋಟದ ಬೆದರಿಕೆ; ಏರ್​ಪೋರ್ಟ್​ಗೆ ಹಿಂತಿರುಗಿದ ಪೈಲಟ್​ಗೆ ಕಾದಿತ್ತು ಶಾಕ್!

ಈ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಇಂದು ಸಂಸದೆ ಶೋಭಾ ಕರಂದ್ಲಾಜೆ ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದಾರೆ. ಕಾಸರಗೋಡು ಯುವತಿ ಮೇಲೆ ಅಮಾನುಷ ಕೃತ್ಯ ಎಸಗಲಾಗಿದೆ. ಪ್ರಕರಣದಲ್ಲಿ ಕೇರಳದ ಇಬ್ಬರು ಯುವಕರ ಕೈವಾಡ ಇದೆ. ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ