ಬೆಂಗಳೂರು (ನ. 27): ಪುದುಚೆರಿ ಮತ್ತು ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದಿಂದ ಭಾರೀ ಆತಂಕ ಎದುರಾಗಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಲಿದ್ದು, ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಇಂದು ಕೂಡ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.
ಭೀಕರವಾದ ನಿವಾರ್ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬೆಂಗಳೂರಿನಲ್ಲಿ 2 ದಿನಗಳಿಂದ ಸಂಜೆಯ ವೇಳೆಗೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು, ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ನ. 26 ಮತ್ತು 27ರಂದು ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದರು.
ಇದನ್ನೂ ಓದಿ: Nivar Cyclone: ನಿವಾರ್ ಚಂಡಮಾರುತದ ಆರ್ಭಟಕ್ಕೆ ತಮಿಳುನಾಡಿನಲ್ಲಿ ಐವರು ಸಾವು, 1000ಕ್ಕೂ ಹೆಚ್ಚು ಮರಗಳು ನೆಲಸಮ
ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಹಲವೆಡೆ ನಿನ್ನೆ ರಾತ್ರಿ ತುಂತುರು ಮಳೆಯಾಗಿದೆ. ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ತಮಿಳುನಾಡು, ಪುದುಚೆರಿಯಲ್ಲಿ ನಿವಾರ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮ ತಮಿಳುನಾಡಿನ ನೆರೆಯ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶದ ಮೇಲೂ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿವಾರ್ ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಯ ಕಾರೈಕಲ್ ಹಾಗೂ ಮಾಮಲ್ಲಪುರಂ ನಡುವೆ ಹಾದುಹೋಗಲಿದೆ. ಈಗಾಗಲೇ ಎನ್ಡಿಆರ್ಎಫ್ ತಂಡ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಬೀಡುಬಿಟ್ಟಿವೆ. 1.5 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈ, ಇರುಂಬುಲಿಯಾರ್, ಉರಪಕ್ಕಂ ಮುಂತಾದ ತಗ್ಗು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿ, ಅವಾಂತರಗಳು ಸೃಷ್ಟಿಯಾಗಿವೆ. ಪುದುಚೆರಿಯಲ್ಲಿ ನಿವಾರ್ ಚಂಡಮಾರುತದಿಂದ 400 ಕೋಟಿ ರೂ. ನಷ್ಟವಾಗಿದೆ. 200 ಹೆಕ್ಟೇರ್ ತರಕಾರಿ ಬೆಳೆ, 170 ಹೆಕ್ಟೇರ್ ಕಬ್ಬು, 55 ಹೆಕ್ಟೇರ್ ಬಾಳೆಗಿಡ ಸಂಪೂರ್ಣ ನೆಲಸಮವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ