Bangalore Rain: ನಿವಾರ್ ಚಂಡಮಾರುತದ ಎಫೆಕ್ಟ್​; ನಿನ್ನೆ ರಾತ್ರಿಯಿಂದ ಬೆಂಗಳೂರಿನಲ್ಲಿ ತುಂತುರು ಮಳೆ

Nivar Cyclone Effect: ನಿವಾರ್ ಚಂಡಮಾರುತದ ಪರಿಣಾಮದಿಂದ ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಹಲವೆಡೆ ನಿನ್ನೆ ರಾತ್ರಿ ತುಂತುರು ಮಳೆಯಾಗಿದೆ. ಇಂದು ಕೂಡ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಲಿದೆ

ನಿವಾರ್ ಚಂಡಮಾರುತ

ನಿವಾರ್ ಚಂಡಮಾರುತ

 • Share this:
  ಬೆಂಗಳೂರು (ನ. 26): ಭೀಕರವಾದ ನಿವಾರ್ ಚಂಡಮಾರುತ ನೆರೆಯ ರಾಜ್ಯವಾದ ತಮಿಳುನಾಡಿಗೆ ನಿನ್ನೆ ರಾತ್ರಿ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಉಂಟಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇಂದು ಬೆಳಗ್ಗೆಯಿಂದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು, ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆಯೂ ಇದೆ. ತಮಿಳುನಾಡಿನ ಗಡಿಯಲ್ಲಿರುವ ಬೆಂಗಳೂರಿನಲ್ಲಿ ನಿವಾರ್ ಚಂಡಮಾರುತದ ಪರಿಣಾಮ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮಳೆ ಸುರಿದಿದೆ.

  ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಹಲವೆಡೆ ನಿನ್ನೆ ರಾತ್ರಿ ತುಂತುರು ಮಳೆಯಾಗಿದೆ. ಇಂದು ಕೂಡ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದಲ್ಲಿ ನಿವಾರ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಿದೆ. ಹೊರವಲಯದ ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ ಸುತ್ತಮುತ್ತ ಜಿಟಿಜಿಟಿ ಮಳೆಯಾಗಿದೆ.

  ಕರ್ನಾಟಕದ ಬೆಂಗಳೂರು, ಕರಾವಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿನ್ನೆ ರಾತ್ರಿ ತುಂತುರು ಮಳೆಯಾಗಿದ್ದು, ಇಂದು ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ನಿವಾರ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ.

  ಇದನ್ನೂ ಓದಿ: Nivar Cyclone - ಪುದುಚೇರಿಯಲ್ಲಿ ನೆಲಕಪ್ಪಳಿಸಿದ ‘ನಿವಾರ್’ ಚಂಡಮಾರುತ; ಸಂಜೆಯವರೆಗೂ ತಮಿಳುನಾಡು ಜರ್ಝರಿತ

  ಇಂದು ರಾಜ್ಯದ ಎಲ್ಲಾ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು‌ ನಗರ,‌ ಗ್ರಾಮಾಂತರ, ಕೋಲಾರ‌, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಾಮರಾಜನಗರದಲ್ಲಿ ಭಾರೀ‌ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ.

  ನಿನ್ನೆ ರಾತ್ರಿ 2 ಗಂಟೆಗೆ ಪುದುಚೆರಿ ಬಳಿ ಅಪ್ಪಳಿಸಿರುವ ನಿವಾರ್ ಸೈಕ್ಲೋನ್​ನಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. 25 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎನ್​ಡಿಆರ್​ಎಫ್​ ತಂಡಗಳನ್ನು ತಮಿಳುನಾಡು, ಪುದುಚೆರಿಗೆ ಕಳುಹಿಸಲಾಗಿದೆ.
  Published by:Sushma Chakre
  First published: