Bangalore Rain: ಬೆಂಗಳೂರು, ಮಲೆನಾಡು, ಕರಾವಳಿ, ಕೊಡಗಿನಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

Karnataka Weather: ಕರ್ನಾಟಕದಲ್ಲಿ ಅಕಾಲಿಕ ಮಳೆ ಶುರುವಾಗಿದ್ದು, ಫೆ. 21ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಳಗಾವಿ, ಬೀದರ್, ಧಾರವಾಡ, ಕಲಬುರ್ಗಿ, ಹಾಸನ, ಬೆಂಗಳೂರಿನಲ್ಲಿ ಮಳೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಫೆ. 19): ಬಿಸಿಲ ಧಗೆಯಿಂದ ಸುಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದ ಮೋಡ ಆವರಿಸಿದೆ. ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ತುಂತುರು ಹನಿಯೂ ಬೀಳುತ್ತಿದೆ. ಕರಾವಳಿ, ಮಲೆನಾಡಿನ ಕೆಲವು ಭಾಗಗಳಲ್ಲಿ ನಿನ್ನೆಯಿಂದ ಮಳೆಯಾಗುತ್ತಿದೆ. ಫೆ. 21ರವರೆಗೂ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯಾದ್ಯಂತ ಹಲವೆಡೆ ಇನ್ನೆರಡು ದಿನ ಅಕಾಲಿಕ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ವೀಕೆಂಡ್​ನ ಖುಷಿಯಲ್ಲಿರುವ ಬೆಂಗಳೂರಿನ ಜನರಿಗೆ ಮಳೆರಾಯ ನಿರಾಸೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ತುಂತುರು ಮಳೆ ಶುರುವಾಗಿದ್ದು, ಸಂಜೆಯ ಬಳಿಕ ಮಳೆ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳಿವೆ. ಇಂದಿನಿಂದ ಫೆ. 21ರವರೆಗೂ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ. ಬೆಂಗಳೂರಿನ ಜಯನಗರ, ಬಸವನಗುಡಿ, ಕತ್ರಿಗುಪ್ಪೆ, ಚಾಮರಾಜಪೇಟೆ, ಬನಶಂಕರಿ, ಆರ್​ಆರ್​ ನಗರ ಭಾಗದಲ್ಲಿ ದಟ್ಟ ಮೋಡ ಆವರಿಸಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮಳೆ ಸುರಿಯುವ ಸಾಧ್ಯತೆಯಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬೀದರ್, ಧಾರವಾಡ, ಕಲಬುರ್ಗಿ ಹಾಗೂ ಹಾಸನ, ಬೆಂಗಳೂರಿನಲ್ಲಿ ಫೆ. 21ರವರೆಗೂ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೆಲವೆಡೆ ಜೋರಾಗಿಯೇ ಮಳೆ ಸುರಿದಿದೆ.

ಇಂದು ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ಚಾರ್ಮಾಡಿ, ಉಜಿರೆಯಲ್ಲಿ ಜೋರಾಗಿಯೇ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯಿಂದ ಕರಾವಳಿಯ ರೈತರು ಕಂಗಾಲಾಗಿದ್ದಾರೆ. ಒಣ ಹಾಕಿದ್ದ ಅಡಿಕೆ, ಭತ್ತ, ಮೆಣಸಿನ ಕಾಳು ನೀರಿನಿಂದ ಒದ್ದೆಯಾಗಿದ್ದು, ಇಂದು ಬೆಳಗ್ಗೆ ಸುರಿದ ಮಳೆಗೆ ರೈತರು ಹಿಡಿಶಾಪ ಹಾಕಿದ್ದಾರೆ. ಹಾಗೇ, ಚಿಕ್ಕಮಗಳೂರಿನ ಮೂಡಿಗೆರೆ, ಕೊಟ್ಟಿಗೆಹಾರ, ಕಡೂರು, ಕೊಪ್ಪದಲ್ಲೂ ಉತ್ತಮ ಮಳೆಯಾಗಿದೆ.ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ತಮಿಳುನಾಡು, ಕೇರಳ, ಛತ್ತೀಸ್​ಗಢದಲ್ಲೂ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತುಮಕೂರು, ಮಲೆನಾಡು, ಕೊಡಗಿನಲ್ಲಿ ನಾಳೆಯವರೆಗೆ (ಫೆ. 20) ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಫೆ. 21ರವರೆಗೂ ಮಳೆ ಮುಂದುವರೆಯಲಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ನಾಳೆ ಮಧ್ಯಾಹ್ನದವರೆಗೆ ಛತ್ತೀಸ್​ಗಢ, ಮಹಾರಾಷ್ಟ್ರ, ತಮಿಳುನಾಡು, ವಿದರ್ಭ, ಪುದುಚೆರಿ, ಕೇರಳ, ಮಾಹೆ, ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
Published by:Sushma Chakre
First published: