Bangalore Rain: ಸಾಧಾರಣ ಮಳೆ ಸುರಿದರು ಕೆರೆಯಂತಾದ ರಸ್ತೆ: ಹೈರಾಣಾದ ವಾಹನ ಸವಾರರು
ಸಾಧಾರಣ ಮಳೆಗೆ ಜಿಗಣಿ ಮತ್ತು ಆನೇಕಲ್ ಮಾರ್ಗ ಮಧ್ಯೆ ಹಾರಗದ್ದೆ ಬಳಿ ಮಳೆ ನೀರು ರಸ್ತೆಗೆ ನುಗ್ಗಿ ಕೆರೆಯಂತಾಗಿದೆ. ರಸ್ತೆ ಮೇಲೆ ಮಳೆ ನೀರು ನುಗ್ಗಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು
ಆನೇಕಲ್(ನವೆಂಬರ್. 13): ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಬನ್ನೇರುಘಟ್ಟ ಮುಖ್ಯ ರಸ್ತೆ ಸಣ್ಣ ಮಳೆಗೆ ಕೆರೆಯಾಗಿ ಮಾರ್ಪಾಡು ಆಗಿದೆ. ಕೆರೆಯಂತಹ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲಾಗದೆ ಹೈರಾಣಾಗಿದ್ದಾರೆ. ಇಂದು ಸಂಜೆ ಸುರಿದ ಮಳೆಗೆ ಆನೇಕಲ್ ಮತ್ತು ಜಿಗಣಿ ನಡುವಿನ ರಸ್ತೆ ಕೆರೆಯಂತಾಗಿ ಅವಾಂತರ ಸೃಷ್ಟಿಸಿದೆ. ಸಾಧಾರಣ ಮಳೆಗೆ ಜಿಗಣಿ ಮತ್ತು ಆನೇಕಲ್ ಮಾರ್ಗ ಮಧ್ಯೆ ಹಾರಗದ್ದೆ ಬಳಿ ಮಳೆ ನೀರು ರಸ್ತೆಗೆ ನುಗ್ಗಿ ಕೆರೆಯಂತಾಗಿದೆ. ರಸ್ತೆ ಮೇಲೆ ಮಳೆ ನೀರು ನುಗ್ಗಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ಡಾಂಬರೀಕರಣ ಮಾಡಿ ಇನ್ನೂ ಮೂರು ವರ್ಷ ಕಳೆದಿಲ್ಲ. ಅದಾಗಲೇ ಮಳೆ ಬಂದ್ರೆ ರಸ್ತೆ ಕೆರೆಯಂತಾಗುತ್ತದೆ. ಮಹಿಳೆಯರು ಮಕ್ಕಳು ಕೆರೆಯಂತಿರುವ ರಸ್ತೆಯಲ್ಲಿ ಸಾಗಲು ಭಯಪಡುತ್ತಾರೆ. ದೊಡ್ಡ ದೊಡ್ಡ ಲಾರಿಗಳು ಬಂದರಂತು ರಸ್ತೆ ಕಾಣುವುದಿಲ್ಲ.
ಸ್ವಲ್ಪ ಯಾಮಾರಿದ್ರು ವಾಹನ ಸವಾರರು ಕೆಳಗೆ ಬೀಳುವ ಸ್ಥಿತಿ ಇದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಬನ್ನೇರುಘಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದಿವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಯಾವಾಗ ಪೂರ್ಣಗೊಳ್ಳುತ್ತದೆಯೋ ಗೊತ್ತಿಲ್ಲ.
ಸಣ್ಣ ಮಳೆಯಾದರು ರಸ್ತೆ ಕೆರೆಯಾಗಿ ಮಾರ್ಪಾಡು ಆಗುತ್ತದೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಇದಕ್ಕೆಲ್ಲ ಮೂಲ ಕಾರಣ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸದ್ಯ ಸಣ್ಣ ಮಳೆ ಸುರಿದರು ವಾಹನ ಸವಾರರು ಹರ ಸಾಹಸಪಟ್ಟು ಸಾಗಬೇಕಿದೆ ಎಂದು ವಾಹನ ಸವಾರ ಮಧು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಣ್ಣ ಮಳೆಗೆ ರಾಜಧಾನಿ ಅಣತಿ ದೂರದ ರಸ್ತೆಗಳ ಸ್ಥಿತಿ ಹೀಗಾದರೆ ದೂರದ ಉತ್ತರ ಕರ್ನಾಟಕದಲ್ಲಿ ರಕ್ಕಸ ಮಳೆ ಅಲ್ಲಿನ ಜನರಿಗೆ ಯಾವ ರೀತಿ ಸಂಕಷ್ಟ ತಂದೊಡ್ಡಿರಬಹುದು. ಇನ್ನಾದರೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡಬೇಕಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ