news18-kannada Updated:October 20, 2020, 7:00 PM IST
ಮಳೆಯ ಸಾಂದರ್ಭಿಕ ಚಿತ್ರ
ಬೆಂಗಳೂರು (ಅ.20): ಕಳೆದೆರಡು ದಿನಗಳಿಂದ ಬಿಡುವುಕೊಟ್ಟ ಮಳೆ ಇಂದು ಮತ್ತೆ ಅಬ್ಬರಿಸಿದೆ. ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ಶಾಂತಿನಗರ, ಜಯನಗರ, ಮೆಜೆಸ್ಟಿಕ್, ಮಾರುಕಟ್ಟೆ, ಕೋರಮಂಗಲ, ಉತ್ತರ ಬೆಂಗಳೂರಿನ ಸುತ್ತಮುತ್ತ ಮಳೆ ಅಬ್ಬರ ಹೆಚ್ಚಿದೆ. ಏಕಾಏಕಿ ಮಳೆ ಸುರಿದ ಹಿನ್ನಲೆ ವಾಹನ ಸವಾರರು ತೊಂದರೆ ಅನುಭವಿಸುವಂತೆ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಇಂದಿನಿಂದ ಮತ್ತೆ ಮಳೆಯಾಗಬಹುದು ಎಂಬ ಕುರಿತು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತು. ಉತ್ತರ ಒಳನಾಡು ಸೇರಿದಂತೆ ಕರಾವಳಿಯಲ್ಲಿ ಮಳೆಯಾಗಲಿದ್ದು, ಇದರ ಪರಿಣಾಮ ರಾಜ್ಯಧಾನಿಯಲ್ಲಿಯೂ ಮಳೆಯಾಗಲಿದೆ ಎನ್ನಲಾಗಿತ್ತು.
ಸಂಜೆ ಮೋಡ ಮುಸುಕಿದ ವಾತಾವರಣದಿಂದ ಕೂಡಿದ್ದು, ಭಾರೀ ಮಳೆಯಾಗಿದೆ. ಅರ್ಧಗಂಟೆಗಳಿಗೂ ಹೆಚ್ಚು ಸಮಯದಿಂದ ಗುಡುಗು ಮಿಂಚಿನ ಮಳೆಯಾಗುತ್ತಿದ್ದು, ಮಳೆ ಅಬ್ಬರ ಇನ್ನು ಮುಂದುವರೆಯುವ ಸಾಧ್ಯತೆ ಇದೆ.
ಭಾನುವಾರ ಮಧ್ಯರಾತ್ರಿ ಸುಮಾರಿಗೆ ಸುರಿದ ಭಾರೀ ಮಳೆ ನಗರದ ಜನರನ್ನು ಹೈರಾಣು ಮಾಡಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿತ್ತು.
ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ. ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
Published by:
Seema R
First published:
October 20, 2020, 6:53 PM IST